Advertisement

ಕುಕ್ಕೆಯ ರಸ್ತೆಗಳಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ!

09:49 AM Jul 15, 2018 | |

ಸುಬ್ರಹ್ಮಣ್ಯ : ರಾಜ್ಯದಲ್ಲಿ ಅತ್ಯಧಿಕ ಆದಾಯ ಗಳಿಸುವ ಮುಜರಾಯಿ ಇಲಾ ಖೆಯ ದೇವಸ್ಥಾನ ಎನ್ನುವ ಹೆಗ್ಗಳಿಕೆ ಇರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ ಸಂಪರ್ಕಿತ ರಸ್ತೆ ವಿಸ್ತರಣೆ, ಇನ್ನಿತರ ಅಭಿವೃದ್ಧಿ ಯೋಜನೆಗಾಗಿ 180 ಕೋಟಿ ರೂ. ವೆಚ್ಚದ ಮಾಸ್ಟರ್‌ ಪ್ಲಾನ್‌ ಅನುಷ್ಠಾನ ಆಮೆಗತಿಯಲ್ಲಿ ಆಗುತ್ತಿದೆ. ಹೀಗಾಗಿ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಸಂದರ್ಶಿಸುವವರಿಗೆ ಪ್ರಯಾಣ ತ್ರಾಸದಾಯಕವಾಗುತ್ತಿದೆ. ಕುಮಾರಧಾರೆ ಹೆಬ್ಬಾಗಿಲಿನಿಂದ ಪೇಟೆಯವರೆಗಿನ ಮುಖ್ಯ ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ಹೊಂಡಗಳು ಉಂಟಾಗಿದ್ದು, ಸಂಚಾರ ದುಸ್ತರವಾಗಿದೆ.

Advertisement

ಅನುಮೋದನೆ ವಿಳಂಬ
ರಸ್ತೆ ವಿಸ್ತರಣೆಗೆ ಸಂಬಂಧಿಸಿ ಸರಕಾರದ ಅನುಮೋದನೆ ಸಿಗುವಲ್ಲಿ ವಿಳಂಬವಾಗಿದ್ದೇ ಸಮಸ್ಯೆ ಗಂಭೀರ ಸ್ವರೂಪ ಪಡೆಯಲು ಕಾರಣ. ಪ್ರಸ್ತುತ ಯೋಜನೆ ಟೆಂಡರ್‌ ಹಂತದಲ್ಲಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನು ಹಲವು ಸಮಯ ಹಿಡಿಯಲಿದೆ. ಬಳಿಕ ಕಾಮಗಾರಿಗೆ ಚಾಲನೆ ದೊರಕಲಿದೆ. ಮುಂದಿನ ಬೇಸಗೆ ಆರಂಭದ ವೇಳೆಗಷ್ಟೆ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ. ಕುಮಾರಧಾರೆಯಿಂದ-ಕಾಶಿಕಟ್ಟೆ ತನಕ ರಸ್ತೆಯುದ್ದಕ್ಕೂ ಬೃಹತ್‌ ಹೊಂಡಗಳು ಸೃಷ್ಟಿಯಾಗಿದೆ. ಮಳೆ ಹೆಚ್ಚಿರುವ ಕಾರಣ ರಸ್ತೆಯಲ್ಲಿ ಹೊಂಡಗಳ ಪ್ರಮಾಣವೂ ವಿಸ್ತರಿಸುತ್ತಲಿದೆ. ಡಾಮರು ಸಂಪೂರ್ಣ ಕಿತ್ತು ಹೋಗುವುದೊಂದೇ ಬಾಕಿ ಎನ್ನುವ ಪರಿಸ್ಥಿತಿಗೆ ತಲುಪಿದೆ. ಕುಮಾರಧಾರ ಪ್ರವೇಶ ಧ್ವಾರ, ಕೆಎಸ್‌ಎಸ್‌ ಕಾಲೇಜು ಮುಂಭಾಗ, ಪೊಲೀಸ್‌ ಠಾಣೆ ಬಳಿ ಹಾಗೂ ಕಾಶಿಕಟ್ಟೆ ಹತ್ತಿರ ಹೊಂಡಗಳ ಪ್ರಮಾಣ ಹೆಚ್ಚಿದೆ.

ವಿದ್ಯಾರ್ಥಿಗಳಿಗೂ ತೊಂದರೆ
ಕ್ಷೇತ್ರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿದ್ದರೂ, ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಿಸಿ ಮುನ್ನೆಚ್ಚರಿಕೆ ವಹಿಸಿರಲಿಲ್ಲ. ಈ ಕುರಿತು ‘ಉದಯವಾಣಿ’ ಕ್ಷೇತ್ರದಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವ ಕುರಿತು ವರದಿ ಮಾಡಿ ಸಂಬಂಧಪಟ್ಟವರ ಗಮನ ಸೆಳೆದಿತ್ತು. ರಸ್ತೆ ಬದಿ ಮಣ್ಣು ಅಗೆದು ಹಾಕಿ ಎರಡು ವರ್ಷಕ್ಕೂ ಅಧಿಕ ಸಮಯ ಕಳೆದಿದೆ. ಈಗಿನ ಜಡಿಮಳೆಗೆ ಈ ರಸ್ತೆಯ ಸ್ಥಿತಿ ಚಿಂತಾಜನಕವಾಗಿದೆ.

ತಿಂಗಳಲ್ಲಿ ಟೆಂಡರ್‌
ಚತುಷ್ಪಥ ರಸ್ತೆ ವಿಸ್ತರಣೆಗೆ ಟೆಂಡರ್‌ ಪ್ರಕ್ರಿಯೆ ಪ್ರಗತಿಯಲ್ಲಿದೆ. ತಿಂಗಳ ಒಳಗೆ ಅದು ಪೂರ್ಣಗೊಳ್ಳುವುದು. ಬಳಿಕ ಮಳೆ ಕ್ಷೀಣಗೊಂಡ ತತ್‌ ಕ್ಷಣದಲ್ಲಿ ರಸ್ತೆ ವಿಸ್ತರಣೆ ಕಾಮಾಗಾರಿ ಆರಂಭಿಸಲು ಯಾವುದೇ ಅಡ್ಡಿಯಾಗದು.
 - ಶ್ರೀನಿವಾಸ ಗೌಡ,
ಪಿಡಬ್ಲ್ಯುಡಿ ಎಂಜಿನಿಯರ್‌

ಬಾಲಕೃಷ್ಣ ಭೀಮಗುಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next