ಪಿರಿಯಾಪಟ್ಟಣ: ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 2004 ಹಾಗೂ 2008ರ ಚುನಾವಣೆಯಲ್ಲಿ ಎರಡೂ ಬಾರಿ ಸ್ಪರ್ಧಿಸಿ ಪ್ರಬಲ ಪೈಪೋಟಿ ನೀಡಿರುವ ತಾವು ಮುಂದಿನ ಚುನಾವಣೆಯಲ್ಲೂ ಪಿರಿಯಾಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಬಿಜೆಪಿ ಮುಖಂಡ ಟಿ.ಡಿ. ಗಣೇಶ್ ತಿಳಿಸಿದರು.
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾಜಿ ಸಂಸದ ಸಿ.ಎಚ್.ವಿಜಯ್‌ಶಂಕರ್ ಅವರನ್ನು ಸ್ಥಳೀಯ ತಾಲೂಕು ಸಮಿತಿ ಏಕಾಏಕಿ ಮುಂದಿನ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎಂದು ಘೋಷಿಸಿರುವುದು ಸರಿಯಲ್ಲ. ಇದಕ್ಕೆ ಯಾವುದೇ ಮನ್ನಣೆ ಇಲ್ಲ. ಅಭ್ಯರ್ಥಿಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಕ್ಷೇತ್ರದಲ್ಲಿ ಇರುವವರೆಗೆ ಮಾತ್ರ ಬಿಜೆಪಿ ಆದ್ಯತೆ ನೀಡಲಿದೆ. ಹೊರಗಿನಿಂದ ಅಭ್ಯರ್ಥಿಗಳನ್ನು ಕರೆತರುವುದನ್ನು ತಾನು ಖಂಡಿಸುತ್ತೇನೆ. ರಾಜ್ಯದಲ್ಲಿ ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾವುದು ನಿಶ್ಚಿತ ಎಂದು ತಿಳಿಸಿದರು. ತಾವು ಎಂದಿಗೂ ಪಕ್ಷದ ವಿರೋಧಿಯಾಗಿರಲಿಲ್ಲ.
ಈ ಹಿಂದೆ ಕೆಲವು ದಿನಗಳ ಕಾಲ ಬಿಜೆಪಿಯಿಂದ ದೂರು ಇರಲು ಮಾಜಿ ಸಂಸದ ಸಿ.ಎಚ್.ವಿಜಯ್‌ಶಂಕರ್ ಕಾರಣರಾಗಿದ್ದಾರೆ. ಈಗಲೂ ತಾವು ಬಿಜೆಪಿ ರಾಜ್ಯ ಪರಿಷತ್ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗಿದ್ದೇನೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಪಕ್ಷ ತಮ್ಮನ್ನು ಪಿರಿಯಾಪಟ್ಟಣದ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಘೋಷಿಸಿದರೆ ಕಳೆದ ಎರಡು ಬಾರಿ ಕ್ಷೇತ್ರದ ಎಲ್ಲಾ ಗ್ರಾಮಗಳ ಸಂಪರ್ಕ ತಮಗಿದ್ದು, ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿಂದುಳಿದ ವರ್ಗಗಳ ಬಿಜೆಪಿ ತಾಲೂಕು ಆಧ್ಯಕ್ಷ ಮಹದೇವ್, ಮಾಜಿ ಅಧ್ಯಕ್ಷ ವಾಜಿದ್ ಪಾಷ, ಮುಖಂಡರಾದ ಸೋಮಣ್ಣ, ಸುಂಡವಾಳು ಮಹದೇವ್ ಇತರರು ಹಾಜರಿದ್ದರು.