ಅಂತೂ ಇಂತೂ “ಸಿಂಗ’ನ ಮೊಗದಲ್ಲಿ ಮಂದಹಾಸ ಮೂಡಿದೆ. ಸ್ವತಃ ಚಿರಂಜೀವಿ ಸರ್ಜಾ ಕೂಡ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ಅದಕ್ಕೆ ಕಾರಣ, “ಸಿಂಗ’ನಿಗೆ ಸಿಗುತ್ತಿರುವ ಅಭೂತಪೂರ್ವ ಬೆಂಬಲ. ಹೌದು, “ಸಿಂಗ’ ನೋಡಿದವರು ಮೆಚ್ಚಿಕೊಂಡಿದ್ದಾರೆ. ಆದರೆ, ನಿರ್ಮಾಪಕ ಉದಯ್ ಮೆಹ್ತಾ ಅವರು ಮಾತ್ರ ಬೇಸರದಲ್ಲಿದ್ದಾರೆ. ಅದಕ್ಕೆ ಕಾರಣ, ಪೈರಸಿ. ಹೌದು, ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಇನ್ನೊಂದು ಕಡೆ ಬಿಡುಗಡೆಯಾದ ಎರಡೇ ದಿನದಲ್ಲಿ ಪೈರಸಿ ಆಗಿದೆ. ಇದು ನಿರ್ಮಾಪಕರ ಬೇಸರಕ್ಕೆ ಕಾರಣ.
ಸಿನಿಮಾ ಯಶಸ್ಸು ಪಡೆಯುತ್ತಿದೆ ಎಂದು ಹೇಳಿಕೊಳ್ಳಲು ಪತ್ರಕರ್ತರ ಮುಂದೆ ಬಂದಿದ್ದ ನಿರ್ಮಾಪಕ ಉದಯ್ ಮೆಹ್ತಾ, ಅಂದು ಪೈರಸಿ ಕುರಿತು ತಮ್ಮ ಸಮಸ್ಯೆ ಹೇಳುತ್ತಾ ಹೋದರು. “ರಾಜ್ಯಾದ್ಯಂತ ಸುಮಾರು 236 ಕೇಂದ್ರಗಳಲ್ಲಿ ಬಿಡುಗಡೆಯಾಗಿದ್ದು, ಬಿ.ಸಿ.ಸೆಂಟರ್‌ಗಳಲ್ಲಿ ಒಳ್ಳೆಯ ಗಳಿಕೆ ಬರುತ್ತಿದೆ. ಆದರೆ, ಪೈರಸಿ ಹೆಚ್ಚಾಗಿ, ಗಳಿಕೆಗೆ ಪೆಟ್ಟು ಬಿದ್ದಿದೆ. ಈ ಸಂಬಂಧ ಸೈಬರ್ ಕ್ರೆçಮ್‌ಗೆ ದೂರು ನೀಡಲಾಗಿದೆ. ಅತ್ತ, ಪೈರಸಿ ಚಿತ್ರ ತೆಗೆದು ಹಾಕುವ ಕಂಪನಿಯನ್ನೂ ಭೇಟಿ ಮಾಡಿ ಸಲಹೆ ಕೇಳಿದ್ದರಿಂದ ಸಂಬಂಧಿಸಿದ ಅಧಿಕಾರಿಗಳು, ನೆಟ್‌ಗೆ ಚಿತ್ರ ಅಪ್‌ಲೋಡ್ ಆಗದಂತಹ ಸಾಫ್ಟ್ವೇರ್ ಅಳವಡಿಸಿದ್ದಾರೆ. ಈ ಸಮಸ್ಯೆ ಬೇರೆ ಯಾವುದೇ ನಿರ್ಮಾಪಕರಿಗೂ ಆಗಬಾರದು’ ಎಂದು ಹೇಳಿಕೊಂಡರು ಉದಯ್‌ಮೆಹ್ತಾ.
ಇನ್ನು, ನಾಯಕ ಚಿರಂಜೀವಿ ಸರ್ಜಾ ಅವರಿಗೆ ಸಹಜವಾಗಿಯೇ ಖುಷಿ ಆಗಿದೆ. ಬಹಳ ದಿನಗಳ ಬಳಿಕ ಅವರ ಅಭಿನಯದ ಚಿತ್ರವೊಂದು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದರಿಂದ, “ಎಲ್ಲೆಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಬರುತ್ತಿವೆ. ಅಭಿಮಾನಿಗಳು ಮುಂದೆಯೂ ಈ ರೀತಿಯ ಚಿತ್ರವನ್ನೇ ಮಾಡಬೇಕು ಅಂತ ಮನವಿ ಮಾಡುತ್ತಿದ್ದಾರೆ. ಒಳ್ಳೆಯ ಕಥೆ, ತಂಡ, ನಿರ್ಮಾಣ ಸಂಸ್ಥೆ ಇದ್ದರೆ ಇಂತಹ ಗೆಲುವು ಪಡೆಯಬಹುದು’ ಅಂದರು ಚಿರು.
ನಾಯಕಿ ಅದಿತಿಯ ಖುಷಿಗೆ ಪಾರವೇ ಇರಲಿಲ್ಲ. ಅವರಿಗೆ ಸಿಕ್ಕ ಮೊದಲ ಗೆಲುವು ಇದು. ಚಿತ್ರಮಂದಿರದಲ್ಲಿ ಪ್ರೇಕ್ಷಕರ ಜೊತೆ ಚಿತ್ರ ನೋಡುವ ವೇಳೆ ಸಿಕ್ಕ ಅನುಭವ ಮರೆಯುವುದಿಲ್ಲ. ಈ ಯಶಸ್ಸಿಗೆ ಇಡೀ ಚಿತ್ರತಂಡ, ಮಾಧ್ಯಮ ಕಾರಣ ಎಂದು ಹೇಳಿ ಸುಮ್ಮನಾದರು.
ನಿರ್ದೇಶಕ ವಿಜಯ್‌ಕಿರಣ್, ಶಿವರಾಜ್.ಕೆ.ಅರ್.ಪೇಟೆ, ಆನಂದ್‌ಆಡಿಯೋ ಶ್ಯಾಮ್, ಛಾಯಾಗ್ರಾಹಕ ಕಿರಣ್‌ಹಂಪಾಪುರ ಇತರರು ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಕುರಿತು ಮಾತನಾಡಿದರು.