ಬೆಳ್ತಂಗಡಿ: ಉಪ್ಪಿನಂಗಡಿ ಗುರುವಾಯನಕೆರೆ ಲೋಕೋಪಯೋಗಿ ರಸ್ತೆಯ ಪಕ್ಕದಲ್ಲಿ ಸಂಬಂಧಿತ ಸಕ್ಷಮದಿಂದ ಅನುಮತಿ ರಹಿತವಾಗಿ ಅಪಾಯಕಾರಿ ಹೊಂಡ ನಿರ್ಮಿಸಿ ದೊಡ್ಡ ಗಾತ್ರದ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿರುವ ಕುರಿತು ಸಾರ್ವಜನಿಕ ವಲಯದಿಂದ ಆಕ್ಷೇಪ ಕೇಳಿಬಂದಿದೆ.
ಲೋಕೋಪಯೋಗಿ ಇಲಾಖೆಗೆ ಸೇರಿದ ಉಪ್ಪಿನಂಗಡಿ- ಗುರುವಾಯನಕೆರೆ ರಸ್ತೆಯ ತೀರಾ ಪಕ್ಕದಲ್ಲಿ ಬೆಳ್ತಂಗಡಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಮೊಗ್ರುವಿನಿಂದ ಗುರುವಾಯನಕೆರೆಗೆ ನೀರು ಹಾಯಿಸಲು ದೊಡ್ಡ ಗಾತ್ರದ ಪೈಪ್‌ಗ್ಳನ್ನು ಅಳವಡಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಯಾದ್ದರಿಂದ ಸಂಬಂಧಪಟ್ಟ ಕಾಮಗಾರಿ ನಡೆಸುವವರು ಮೀಟರ್‌ಗೆ 500 ರೂ.ನಂತೆ ಸರಕಾರಕ್ಕೆ ಮೊತ್ತ ಪಾವತಿಸಬೇಕು. ಮಾತ್ರವಲ್ಲದೆ ಸುಮಾರು 7 ಮೀಟರ್ ಅಂತರ ಬಿಟ್ಟು ಕಾಮಗಾರಿ ನಡೆಸಬೇಕೆಂಬ ನಿಯಮವಿದೆ. ಆದರೆ ಇಲ್ಲಿ ಅನುಮತಿ ಪಡೆಯದೆ ನಿಯಮ ಗಾಳಿಗೆ ತೂರಿ ಕಾಮಗಾರಿ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ವಿಚಾರವಾಗಿ ಸಾರ್ವಜನಿಕ ವಲಯದಿಂದ ಆಕ್ಷೇಪ ವ್ಯಕ್ತವಾಗಿದ್ದು, ಮುಂದೆ ರಸ್ತೆ ವಿಸ್ತರಣೆ ನಡೆಸುವ ಸಂದರ್ಭದಲ್ಲಿ ಈಗಿರುವ ಪೈಪ್‌ಲೈನ್ ಅಗೆಯಬೇಕಾದ ಪರಿಸ್ಥಿತಿ ಎದುರಾಗಲಿದೆ. ಅಲ್ಲದೆ ರಸ್ತೆಯ ತೀರ ಹತ್ತಿರದಲ್ಲಿರುವ ಹೊಂಡದಿಂದಾಗಿ ವಾಹನಗಳು ಹೊಂಡಕ್ಕೆ ಬಿದ್ದು ಅಪಘಾತಗಳಾಗುವ ಸಂಭವ ಕೂಡ ಇದೆೆ. ಆದುದರಿಂದ ಜಿಲ್ಲಾಧಿಕಾರಿಗಳು ತತ್‌ಕ್ಷಣ ಮಧ್ಯಪ್ರವೇಶಿಸಿ ಅನುಮತಿ ರಹಿತವಾಗಿ ನಡೆಸುತ್ತಿರುವ ಈ ಕಾಮಗಾರಿಯನ್ನು ತಡೆಹಿಡಿಯಬೇಕು. ಲೋಕೋಪಯೋಗಿ ಇಲಾಖೆ ನಿಯಮ ಅನುಸರಿಸಿ ಸುರಕ್ಷತೆ ಕಾಪಾಡಿಕೊಂಡು ಕಾಮಗಾರಿ ಮುಂದುವರಿಸುವಂತೆ ನಿರ್ದೇಶಿಸಬೇಕು. ಇಲ್ಲದಿದ್ದಲ್ಲಿ ಮುಂದಕ್ಕೆ ಕಾನೂನು ರೀತಿಯ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ದೂರಿನ ಪ್ರತಿಯನ್ನು ಲೋಕೋಪಯೋಗಿ ಇಲಾಖೆಯ ಬೆಳ್ತಂಗಡಿ ಕಚೇರಿ, ಮಂಗಳೂರು ವಿಭಾಗೀಯ ಕಚೇರಿ, ಕರ್ನಾಟಕ ನೀರಾವರಿ ನಿಗಮ ಉಡುಪಿ ಸಿದ್ದಾಪುರ ಕಚೇರಿ, ಸಹಾಯಕ ಆಯುಕ್ತರು (ಎ.ಸಿ.) ಪುತ್ತೂರು ಹಾಗೂ ತಹಶೀಲ್ದಾರರ ಅವಗಾಹನೆಗೂ ತರಲಾಗಿದೆ.
ಸದ್ಯ ಸಂಚಾರಕ್ಕೆ ಕಿರಿಕಿರಿ ಮತ್ತು ಅಪಘಾತವಾಗುವ ಭೀತಿ ಇದೆ. ಅಲ್ಲದೆ ಈ ಅಸಮರ್ಪಕ ಕಾಮಗಾರಿಯಿಂದ ಜನರ ತೆರಿಗೆ ಹಣ ದುವ್ಯìಯವಾಗುತ್ತಿದೆ ಎಂದು ನಾಗರಿಕರ ಪರವಾಗಿ ನ್ಯಾಯವಾದಿ ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರ ಮನೋಹರ ಕುಮಾರ್ ಇಳಂತಿಲ ಹಾಗೂ ಸಿಪಿಐಎಂ ತಾಲೂಕು ಸಮಿತಿ ಸದಸ್ಯ ಶೇಖರ್ ಎಲ್. ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಸುರಕ್ಷ ಕ್ರಮ ಅಳವಡಿಸದೆ ಕಾಮಗಾರಿ
ಕಾಮಗಾರಿ ನಡೆಯುತ್ತಿರುವ ಬಗ್ಗೆ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಕರ್ನಾಟಕ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳು ಯಾವುದೇ ಅನುಮತಿ ಇಲ್ಲದೆ, ಸೂಕ್ತ ಸುರಕ್ಷ ಕ್ರಮಗಳನ್ನೂ ಅಳವಡಿಸದೆ ಕಾಮಗಾರಿ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.