ಮಹಾನಗರ: ತುಂಬೆ ಬಳಿ ಗೈಲ್‌ಗ್ಯಾಸ್ ಪೈಪ್‌ಲೈನ್ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್ ಲೈನ್‌ಗೆ ಉಂಟಾಗಿದ್ದ ಹಾನಿಯ ದುರಸ್ತಿ ಕಾರ್ಯ ಗುರುವಾರ ತಡರಾತ್ರಿ ವೇಳೆಗೆ ಪೂರ್ಣಗೊಂಡಿದೆ. ಶುಕ್ರವಾರ ತುಂಬೆಯಿಂದ ನಗರಕ್ಕೆ ನೀರು ಪೂರೈಕೆ ಆರಂಭವಾಗಿದೆಯಾದರೂ ಪೂರ್ಣ ಪ್ರಮಾಣದಲ್ಲಿ ನೀರು ಮನೆ ಮನೆಗೆ ತಲುಪುವಾಗ ಶನಿವಾರ ಮಧ್ಯಾಹ್ನವಾಗುವ ಸಾಧ್ಯತೆಯಿದೆ.
ಪಡೀಲ್ ಪಂಪ್‌ಹೌಸ್‌ಗೆ ನೀರು ಪೂರೈಕೆ ಮಾಡುವ 1,100 ಮಿ.ಮೀ.ವ್ಯಾಸದ ಪೈಪ್‌ಲೈನ್‌ಗೆ ಮಂಗಳವಾರ ರಾತ್ರಿ ತುಂಬೆಯ ಬಳಿ ಹಾನಿಯಾಗಿ, ನಗರಕ್ಕೆ ಎರಡು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಕೆಲವು ಭಾಗದಲ್ಲಿ ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿತ್ತು.
ಶುಕ್ರವಾರ ಸ್ಥಳಕ್ಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಗೈಲ್ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿ ಪಾಲಿಕೆ ವ್ಯಾಪ್ತಿಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. 15-20 ಅಡಿ ತಳಭಾಗದಲ್ಲಿ ಪೈಪ್‌ಲೈನ್ ಇದ್ದಕಾರಣ, ಮಣ್ಣು ತೆರವು ಮಾಡಿ, ಲೀಕೇಜ್ ಆಗಿರುವ ಸ್ಥಳದಲ್ಲಿ ವೆಲ್ಡಿಂಗ್ ಮಾಡಿ ಮುಚ್ಚಲಾಗಿದೆ. ವಿಪರೀತ ಮಳೆಯ ನಡುವೆಯೂ ತುರ್ತಾಗಿ ಕಾಮಗಾರಿ ನಡೆಸಲಾಗಿದೆ ಎಂದರು.
ಮಳೆಗಾಲದಲ್ಲಿ ಇಂತಹ ಕಾಮಗಾರಿ ನಡೆಸದಂತೆ ಸೂಚನೆಯನ್ನೂ ಪಾಲಿಕೆ ವತಿಯಿಂದ ನೀಡಲಾಗಿತ್ತು. ಆದರೂ ಕಾಮಗಾರಿ ಕೈಗೊಂಡಿದ್ದಾರೆ. ಮಳೆಗಾಲ ಮುಗಿಯುವವರೆಗೆ ಎಲ್ಲಿಯೂ ಕಾಮಗಾರಿ ನಡೆಸದಂತೆ ಜಿಲ್ಲಾಡಳಿತದ ಮೂಲಕ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗುವುದು ಎಂದರು.
ಮನಪಾ ಪಾಲಕ ಅಭಿಯಂತ ನರೇಶ್ ಶೆಣೈ, ಜೂನಿಯರ್ ಎಂಜಿನಿಯರ್ ಅಶ್ವಿನ್ ಜತೆಗಿದ್ದರು.
ಹಾನಿಗೆ ಕಾರಣವಾದ ಗೈಲ್ ಗ್ಯಾಸ್ ಸಂಸೆಗೆ ದಂಡ
ಜನರಿಗೆ ಆಗಿರುವ ಸಮಸ್ಯೆಯ ಆಧಾರದಲ್ಲಿ ಮತ್ತು ಪಾಲಿಕೆಗೆ ಆಗಿರುವ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಗೈಲ್ ಗ್ಯಾಸ್ ಸಂಸ್ಥೆಗೆ ದಂಡ ವಿಧಿಸಲು ಉದ್ದೇಶಿಸಲಾಗಿದೆ. ದುರಸ್ತಿ ಕಾಮಗಾರಿಯ ಪೂರ್ಣ ವೆಚ್ಚವನ್ನು ಗೈಲ್ ಕಂಪೆನಿಯವರ ಮೇಲೆ ಹಾಕಲಾಗುವುದು. ರಸ್ತೆಗೆ ಡಾಮರು ಹಾಕುವ ಕಾಮಗಾರಿಯನ್ನೂ ಗೈಲ್‌ನವರಿಂದಲೇ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.