Advertisement
ಕಳೆದ ವರ್ಷ 2 ತಿಂಗಳು ಟ್ಯಾಂಕರ್ ಮೂಲಕ ನೀರನ್ನು ಪೂರೈಸುವ ಪರಿಸ್ಥಿತಿ ಇತ್ತು. ವಿಶೇಷವಾಗಿ ರಾ.ಹೆ. ಹಾದುಹೋಗುವ ಕೆಸರ್‌ಗದ್ದೆ, ಬೆಳುವಾಯಿ ಪೇಟೆ ಭಾಗದಲ್ಲಿ ಈ ಬಾರಿ ಫೆಬ್ರವರಿಯಲ್ಲೇ ನೀರಿನ ಕೊರತೆ ಕಾಣಿಸಲಾರಂಭಿಸಿದೆ. ಹಾಗೆಂದು ಇನ್ನೂ ಟ್ಯಾಂಕರ್ ಮೂಲಕ ನೀರು ಒದಗಿಸುವ ಸ್ಥಿತಿ ಬಂದಿಲ್ಲ. ಇರುವ 14 ಕೊಳವೆ ಬಾವಿಗಳಲ್ಲಿ 3 ನಿಷ್ಕ್ರಿಯವಾಗಿದ್ದು 11 ಕೊಳವೆ ಬಾವಿಗಳ ಮೂಲಕವೇ ನೀರಿನ ಬೇಡಿಕೆ ಪೂರೈಸಬೇಕಾಗಿದೆ. 2 ಕೊಳವೆ ಬಾವಿ ತೋಡಲು ನಿಧಿ ಇರಿಸಲಾಗಿದ್ದು, ತೋಡುವವರ ಲಭ್ಯತೆಗಾಗಿ ಕಾಯಲಾಗುತ್ತಿದೆ.
ನಡಿಗುಡ್ಡೆ, ಕುಕ್ಕುಡೇಲು ಪ್ರದೇಶದಲ್ಲಿ 2 ಓವರ್ ಹೆಡ್ ಟ್ಯಾಂಕ್‌ಗಳು ಹಾಳು ಬಿದ್ದಿವೆ. ಈ ಬಗ್ಗೆ ಜಿ.ಪಂ.ಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆದರೆ ಇನ್ನೂ ಏನೂ ಸ್ಪಂದನೆ ಸಿಕ್ಕಿಲ್ಲ. ಇದಲ್ಲದೆ, ಇನ್ನೂ ತಲಾ 1 ಲಕ್ಷ ನೀರಿನ ಸಾಮರ್ಥ್ಯವುಳ್ಳ 2 ಓವರ್ ಹೆಡ್ ಟ್ಯಾಂಕ್ ಗಳನ್ನು ಪಂ.ವ್ಯಾಪ್ತಿಯಲ್ಲಿ ನಿರ್ಮಿಸಬೇಕೆಂಬ ಬೇಡಿಕೆ ಇದೆ. ಹಾಗಾದರೆ ಈಗಿನಂತೆ ನೇರವಾಗಿ ಕೊಳವೆ ಬಾವಿಯಿಂದಲೇ ನೀರು ಪೂರೈಸುವ ಬದಲು ವಿದ್ಯುತ್ ಇರುವಾಗ ನೀರನ್ನು ಟ್ಯಾಂಕ್‌ಗೆ ಹಾಕಿಟ್ಟುಕೊಳ್ಳಲು ಅನುಕೂಲವಾಗುವುದು.
Related Articles
ನಾಲ್ಕು ಕಡೆ ಖಾಸಗಿ ವ್ಯಕ್ತಿಗಳು ನೀರನ್ನು ಪಂಚಾಯತ್‌ಗೆ ನೀಡಲು ಮುಂದೆ ಬಂದಿದ್ದಾರೆ. ಹೇನ್‌ಬೆಟ್ಟು ಪ್ರದೇಶದ
ರಾಮದಾಸ ಪ್ರಭು, ಅಂಬೂರಿನ ಕೇಶವ ಪ್ರಭು, ಮಲೆಬೆಟ್ಟು ಕರಿಯನಂಗಡಿಯಲ್ಲಿ ಒಬ್ಬರು, ಮುಡಾಯಿಕಾಡು ಶಾಂತಿನಗರದ ನಿವೃತ್ತ ಸೈನಿಕ ರಾಮಕೃಷ್ಣ ಶೆಣೈ ಹೀಗೆ ಹಲವಾರು ಮಂದಿ ಮುಂದೆ ಕೊಳವೆ ಬಾವಿ ಸಂಪರ್ಕ ನೀಡಲು ಮಂದೆ ಬಂದಿದ್ದಾರೆ.
Advertisement
ನೀರು ನಿರ್ವಹಣ ಸಮಿತಿ ಅಗತ್ಯರಾಜೀವ ಗಾಂಧಿ ಕುಡಿಯುವ ನೀರಿನ ಯೋಜನೆ ಬಂದಾಗ ನೀರು ನಿರ್ವಹಣ ಘಟಕಗಳನ್ನು ಅಲ್ಲಲ್ಲಿ ರೂಪಿಸಿ ಆ ಮೂಲಕ ನೀರು ಪೂರೈಕೆ, ಬಿಲ್ ಸಂಗ್ರಹ ನಡೆಯುತ್ತಿದ್ದವು. ಈಗ ಎಲ್ಲವೂ ಪಂಚಾಯತ್ ಪಾಲಿಗೆ ಬಂದಿರುವುದರಿಂದ ಸ್ವಲ್ಪ ಒತ್ತಡ ಬೀಳುವುದು ಸಹಜ. ನೀರು ನಿರ್ವಹಣ ಸಮಿತಿಗಳಿರುವುದು ಒಳ್ಳೆಯದು ಎಂಬುವುದು ಸ್ಥಳೀಯರ
ಅಭಿಪ್ರಾಯ . ಕಿಂಡಿ ಅಣೆಕಟ್ಟು ಅಗತ್ಯ
ಇಡೀ ಗ್ರಾಮದಲ್ಲಿ ಹಾದುಹೋಗುವ ಪಟ್ಲ ಗದ್ದೆಯಲ್ಲಿ 10 ಮೀ. ಅಗಲದ ಕಿಂಡಿ ಅಣೆಕಟ್ಟುಗಳನ್ನು 2 ಕಡೆ ನಿರ್ಮಿಸಲಾಗಿದೆ. ಆದರೆ ಪಟ್ಲ ಗದ್ದೆಗಳು ಇದಕ್ಕಿಂತ ನಾಲ್ಕಾರು ಪಟ್ಟು ಅಗಲವಿದ್ದು ಇಲ್ಲೆಲ್ಲ ಕಿಂಡಿ ಅಣೆಕಟ್ಟು ನಿರ್ಮಿಸಲು ದೊಡ್ಡ ಬಜೆಟ್ ಬೇಕು. ಇಂಥ 15 ಬೃಹತ್ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಬೇಕಾಗಿದೆ. ಪಟ್ಲ ಗದ್ದೆಗಳು ಬೇಸಾಯವಿಲ್ಲದೆ ಪಾಳುಬಿದ್ದಿರುವುದರಿಂದ ಅಣೆಕಟ್ಟು ನಿರ್ಮಿಸಿದರೆ ಮಳೆಗಾಲದಲ್ಲಿ ನೀರು ನಿಂತು ಖಂಡಿತಾ ಬೆಳುವಾಯಿ ಗ್ರಾಮದಲ್ಲೆಲ್ಲ ಅಂತರ್ಜಲದ ಮಟ್ಟ ವೃದ್ಧಿಯಾಗಿ ನೀರಿಗೆ ಬರ ಬರಲಾರದು ಎನ್ನುತ್ತಾರೆ ಸ್ಥಳೀಯರಾದ ಭಾಸ್ಕರ ಆಚಾರ್ಯರು. ಜನಪ್ರತಿನಿಧಿಗಳ ಪ್ರಭಾವ
ನೀರನ್ನು ತೋಟಕ್ಕೆ ಬಳಸುವವರ ಸಂಪರ್ಕ ಕಡಿತಗೊಳಿಸಿದರೆ ಜನಪ್ರತಿ ನಿಧಿಗಳ ಪ್ರಭಾವಕ್ಕೆ ಒಳಗಾಗಿ ಪಂಚಾಯತ್ ಅಧಿಕಾರಿಗಳು ಕಾನೂನುಬದ್ಧ ಕ್ರಮ ಕೈಗೊಳ್ಳಲು ಆಗದಂಥ ಸ್ಥಿತಿ ನಿವಾರಣೆಯಾಗ ಬೇಕು. ನೀರು ನಿರ್ವಹಣೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಣೂರು ಪಂಚಾಯತ್‌ನ ಕ್ರಮಗಳ ಬಗ್ಗೆ ನಾನು ಹತ್ತು ವರ್ಷಗಳ ಹಿಂದೆ ಬೆಳುವಾಯಿ ಗ್ರಾ.ಪಂ.ಗೆ ನೀಡಿದ್ದೆ. ಇನ್ನೂ ಈ ದಿಸೆಯಲ್ಲಿ ಪಂಚಾಯತ್ ಮುಂದುವರಿದಂತೆ ಕಾಣುತ್ತಿಲ್ಲ.
– ಸದಾಶಿವ ಶೆಟ್ಟಿ, ಸ್ಥಳೀಯರು ಟ್ಯಾಂಕರ್ ಸಮಸ್ಯೆ
ಟ್ಯಾಂಕರ್‌ಗೆ ಜಿ.ಪಂ. ರೂ. 600ರಷ್ಟು ನೀಡಲು ಅಂಗೀಕಾರ ನೀಡಿದೆ. ಆದರೆ ಈಗಿನ ಮಾರುಕಟ್ಟೆ ದರದಲ್ಲಿ ಈ ದರ 1,400ರವರೆಗೂ ಹೋಗುತ್ತಿದೆ. ದೊಡ್ಡ ಟ್ಯಾಂಕರ್‌ನಲ್ಲಿ ನೀರು ಪೂರೈಸುವಾಗ ನೀರು ಪೋಲಾಗುವುದು ಸಹಜ. ಇದರ ಬದಲು ಒಂದೂವರೆ ಸಾವಿರ ಲೀ.ನ ಎರಡು ಸಿಂಟೆಕ್ಸ್‌ಗಳಲ್ಲಿ ನೀರು ತುಂಬಿಸಿ ಟೆಂಪೋದಲ್ಲಿ ಪೂರೈಸಿದರೆ ನೀರು ವ್ಯರ್ಥವಾಗಿ ಪೋಲಾಗುವುದಿಲ್ಲ. ಖರ್ಚೂ ಕಡಿಮೆ ಆಗುತ್ತದೆ. ಇದಕ್ಕೆ ಜಿಲ್ಲಾ ಪಂಚಾಯತ್ ಒಪ್ಪಬೇಕಷ್ಟೇ.
– ಭಾಸ್ಕರ ಆಚಾರ್ಯ,
ಪಂಚಾಯತ್ ಅಧ್ಯಕ್ಷರು ಧನಂಜಯ ಮೂಡಬಿದಿರೆ