ಮಧುರೆ : ಇಲ್ಲಿನ ಟೈಲರಿಂಗ್ ಶಾಪ್ ಒಂದರಿಂದ ಪೊಲೀಸರು ಅಧಿಕ ತೀವ್ರತೆಯ ಎರಡು ಪೈಪ್ ಬಾಂಬ್‌ಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಪೊಲೀಸರು ನಿನ್ನೆಯೇ ಅಬ್ದುಲ್ಲಾ ಮತ್ತು ಅಬ್ದುಲ್ ರೆಹಮಾನ್ ಎಂಬ ಇಬ್ಬರನ್ನು ಬಂಧಿಸಿದ್ದು ಇಂದು ಬೆಳಗ್ಗೆ ಮೂರನೇ ಆರೋಪಿಯಾಗಿರುವ ಖಾದರ್ ಎಂಬಾತನನ್ನು ಮಧುರೆ ಮೆಡಿಕಲ್ ಕಾಲೇಜಿಗೆ ಸಮೀಪ ಬಂಧಿಸಿದರು.
ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವ ಪ್ರಕಾರ ಮುಸ್ಲಿಂ ಮುನ್ನಾನಿ ಪಸಾರೈ ಎಂಬ ಸಂಘಟನೆ ಅಧ್ಯಕ್ಷ ಮೊಹಮ್ಮದ್ ಉಸಾಮಾ ಎಂಬಾತನು ಈ ಬಾಂಬ್‌ಗಳನ್ನು ತಯಾರಿಸಿದ್ದಾನೆ. ಹಿಂದು ಮುನ್ನಾನಿ ನಾಯಕ ರಾಮ ಗೋಪಾಲನ್ ಎಂಬವರನ್ನು ಹತ್ಯೆ ಗೈಯುವ ಉದ್ದೇಶದಿಂದ ಈ ಬಾಂಬ್‌ಗಳನ್ನು ಇಲ್ಲಿಗೆ ತರಲಾಗಿತ್ತು.
ರಾಮಗೋಪಾಲನ್ ಅವರನ್ನು ಕೊಲ್ಲುವ ಸಂಚನ್ನು ಎರಡು ತಿಂಗಳ ಹಿಂದೆಯೇ ಬಾಷಾ ಎಂಬಾತನ ಜತೆಗಿನ ಮಾತುಕತೆಯ ಬಳಿಕ ರೂಪಿಸಲಾಗಿತ್ತು. ಈ ಸಂಚನ್ನು ಈಗ ಕೊಯಮುತ್ತೂರಿನ ಪಲ್ಲಡಂ ಎಂಬಲ್ಲಿ ನಡೆಯುತ್ತಿರುವ 9ನೇ ಹಿಂದು ಹಕ್ಕುಗಳನ್ನು ಮರಳಿ ಪಡೆಯುವ ಸಮಾವೇಶದಲ್ಲಿ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿತ್ತು ಎಂದು ಅಬ್ದುಲ್ಲಾ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
“ಜಲ್ಲಿಕಟ್ಟು ಆಂದೋಲನದ ಪ್ರಯುಕ್ತವಾಗಿ ವಿವಿಧ ಸ್ಥಳಗಳಲ್ಲಿ ಭದ್ರತಾ ತಪಾಸಣೆ ನಡೆಯುತ್ತಿದ್ದುದರಿಂದ ಪೈಪ್ ಬಾಂಬ್‌ಗಳನ್ನು ನಮಗೆ ಮಧುರೆಯಿಂದ ಪಲ್ಲಡಂ ಗೆ ಸಾಗಿಸಲು ಸಾಧ್ಯವಾಗಲಿಲ್ಲ; ಹಾಗಾಗಿ ಅವು ಪೂದೂರಿನ ಅಬ್ದುಲ್ ರೆಹಮಾನ್ ಬಳಿಯೇ ಉಳಿದವು’ ಎಂದಾತ ಪೊಲೀಸರಲ್ಲಿ ಹೇಳಿದ್ದಾನೆ. ಅಬ್ದುಲ್ಲ ಜಲ್ಲಿಕಟ್ಟು ಪರ ಆಂದೋಲನದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಅಬ್ದುಲ್ಲ ಪೂದೂರು ಮತ್ತು ತಮುಕ್ಕ, ನಡುವೆ ಚೀಲವೊಂದನ್ನು ಹಿಡಿದುಕೊಂಡು ಶಂಕಾಸ್ಪದವಾಗಿ ನಡೆದಾಡುತ್ತಿದ್ದಾಗ ಆತ ನಿನ್ನೆ ಗುರುವಾರ ಪೊಲೀಸರ ಕೈಗೆ ಸಿಕ್ಕಿಬಿದ್ದ; ಅನಂತರ ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಆತ ಸಂಚಿನ ಬಗ್ಗೆ ಬಾಯಿಬಿಟ್ಟ. ಈತ ಕೊಟ್ಟ ಮಾಹಿತಿಯ ಪ್ರಕಾರ ಖಾದರ್‌ನನ್ನು ಪೊಲೀಸರು ಬಂಧಿಸಿದರು.
ಅಬ್ದುಲ್ ರೆಹಮಾನ್ ಮಾಲಕತ್ವದ ಪೂದೂರಿನಲ್ಲಿನ ಟೈಲರಿಂಗ್ ಅಂಗಡಿಯಿಂದ ಅಧಿಕ ತೀವ್ರತೆಯ ಪೈಪ್ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.