Advertisement

ಮಹಿಳಾ ಆಸನ ಅತಿಕ್ರಮಣ ತಡೆಗೆ ಪಿಂಕ್‌ ಸೀಟ್‌

11:35 AM Nov 29, 2017 | |

ಬೆಂಗಳೂರು: ಪಿಂಕ್‌ ಟ್ಯಾಕ್ಸಿ ಹಳೆಯದಾಯ್ತು. ಪಿಂಕ್‌ ಹೊಯ್ಸಳ ಬಂದಾಯ್ತು. ಇನ್ಮುಂದೆ ಬಸ್‌ಗಳಲ್ಲಿ ಪಿಂಕ್‌ ಸೀಟ್‌ಗಳು ಬರಲಿವೆ! “ಮಹಿಳೆಯರಿಗೆ’ ಎಂದು ಬರೆದಿದ್ದರೂ ಕೆಲ ಗಂಡಸರು ಆ ಆಸನಗಳಲ್ಲಿ ಕೂರುವುದು ಮಾಮೂಲು. ಆದ್ದರಿಂದ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗಾಗಿ ಮೀಸಲಿರುವ ಆಸನಗಳನ್ನು ಪಿಂಕ್‌ ಬಣ್ಣಕ್ಕೆ ಪರಿವರ್ತಿಸುವುದಾಗಿ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಈಚೆಗೆ ಮಂಗಳೂರಿನಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಯುವಕನನ್ನು ಎಬ್ಬಿಸಲು ಮಹಿಳೆಯೊಬ್ಬರು ಆತನೊಂದಿಗೆ ವಾಗ್ವಾದ ನಡೆಸಬೇಕಾಯಿತು. ಮಾಗಡಿಯಲ್ಲೂ ಇಂಥದ್ದೇ ಘಟನೆ ನಡೆದಿದೆ. ಇಂತಹ ದೂರುಗಳು ಹೆಚ್ಚಾಗಿ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಹೊಸದಾಗಿ ಬರುವ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಆಸನಗಳು ಗುಲಾಬಿ ಬಣ್ಣದಲ್ಲೇ ಬರಲಿವೆ ಎಂದು ತಿಳಿಸಿದರು. 

ಉಳಿದ ನಿಗಮಗಳಿಗೂ ವಿಸ್ತರಣೆ?: ಇನ್ನು ಈಗಾಗಲೇ ಇರುವ ಬಸ್‌ಗಳಲ್ಲಿನ ಮಹಿಳೆಯರ ಆಸನಗಳನ್ನು ಹಂತ-ಹಂತವಾಗಿ ಗುಲಾಬಿ ಬಣ್ಣಕ್ಕೆ ಪರಿವರ್ತಿಸಲಾಗುವುದು. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಕೆಎಸ್‌ಆರ್‌ಟಿಸಿ ಸೇರಿದಂತೆ ಉಳಿದ ಮೂರೂ ಸಾರಿಗೆ ಸಂಸ್ಥೆಗಳಲ್ಲೂ “ಪಿಂಕ್‌ ಆಸನ’ಗಳು ಕಾಣಿಸಿಕೊಳ್ಳಲಿವೆ. ಇದು ಶಾಶ್ವತ ಪರಿಹಾರ ಎಂದಲ್ಲ, ಬದಲಿಗೆ ವಿಶೇಷ ಬಣ್ಣದ ಆಸನವಿದ್ದರೆ ಪುರುಷರು ಅದರಲ್ಲಿ ಕುಳಿತುಕೊಳ್ಳಲು ಹಿಂಜರಿಯಬಹುದು ಎಂಬ ವಿಶ್ವಾಸ ನಮ್ಮದು ಎಂದು ಹೇಳಿದರು.

ಇಂದಿರಾ ಪಾಸು: ಇಂದಿರಾ ಸಾರಿಗೆ ಜತೆಗೆ ನಗರದಲ್ಲಿರುವ ಮಹಿಳಾ ಕಟ್ಟಡ ಕಾರ್ಮಿಕರಿಗೆ “ಇಂದಿರಾ ಪಾಸು’ ಪರಿಚಯಿಸಲಾಗುತ್ತಿದೆ ಎಂದು ಇದೇ ವೇಳೆ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದರು. ನಗರದಲ್ಲಿ ಸುಮಾರು 2 ಲಕ್ಷ ಮಹಿಳಾ ಕಟ್ಟಡ ಕಾರ್ಮಿಕರು ಇರಬಹುದು ಎಂದು ಅಂದಾಜಿಸಲಾಗಿದೆ.

ಅವರೆಲ್ಲರಿಗೂ ರಿಯಾಯ್ತಿ ದರದಲ್ಲಿ ಇಂದಿರಾ ಪಾಸು ನೀಡಲಾಗುವುದು. ಆದರೆ, ಇಂದಿರಾ ಸಾರಿಗೆ ಮತ್ತು ಪಾಸಿನ ದರ ಎಷ್ಟಿರಬೇಕು? ಯೋಜನೆಗಾಗಿ ಆರ್ಥಿಕ ಕ್ರೋಡೀಕರಣ ಸೇರಿದಂತೆ ಹಲವು ವಿಷಯಗಳ ಬಗ್ಗೆ ಇನ್ನೂ ಚರ್ಚೆ ಆಗಬೇಕಿದೆ ಎಂದರು. 

Advertisement

ಡಿ.2ರಂದು ಇಂದಿರಾ ಕ್ಲಿನಿಕ್‌ ಸೇವೆ ಆರಂಭ: ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣ ಮತ್ತು ಯಶವಂತಪುರ ಟಿಟಿಎಂಸಿಯಲ್ಲಿ ಡಿ. 2ರಿಂದ “ಇಂದಿರಾ ಕ್ಲಿನಿಕ್‌’ ಸೇವೆ ಆರಂಭಗೊಳ್ಳಲಿದೆ ಎಂದು ಬಿಎಂಟಿಸಿ ಅಧ್ಯಕ್ಷ ಎಂ. ನಾಗರಾಜ ತಿಳಿಸಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಈ ನಿಲ್ದಾಣಗಳಲ್ಲಿರುವ ಕ್ಲಿನಿಕ್‌ಗಳು ಬಿಎಂಟಿಸಿ ಸಿಬ್ಬಂದಿಗೆ ಸೀಮಿತವಾಗಿವೆ.

ಪ್ರಸ್ತುತ ಅವುಗಳಲ್ಲಿ ಪ್ರಯಾಣಿಕರಿಗೂ ಸೇವೆ ನೀಡಲಾಗುವುದು. ಇಲ್ಲಿ ಒಬ್ಬ ಮೆಡಿಕಲ್‌ ಪ್ರಾಕ್ಟೀಷನರ್‌ ಮತ್ತೂಬ್ಬ ಟೆಕ್ನೀಷಿಯನ್‌ ಇರುತ್ತಾರೆ. ರೋಗಿಗಳಿಗೆ ಇಲ್ಲಿ ಉಚಿತವಾಗಿ ಔಷಧ ನೀಡಲಾಗುತ್ತದೆ. ಜನರಿಕ್‌ ಔಷಧಗಳ ವಿತರಣೆಗೂ ಚಿಂತನೆ ನಡೆದಿದೆ ಎಂದು ಮಾಹಿತಿ ನೀಡಿದರು. 

ಒಂದು ಪಾಳಿ ಸೇವೆ: ಇಂದಿರಾಗಾಂಧಿ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಡಿ.2ರಂದು ಬೆಳಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ಇಂದಿರಾ ಕ್ಲಿನಿಕ್‌ ಲೋಕಾರ್ಪಣೆ ಮಾಡಲಿದ್ದು, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್‌, ರಮೇಶ್‌ಕುಮಾರ್‌ ಭಾಗವಹಿಸುವರು. ಆರಂಭದಲ್ಲಿ ಕ್ಲಿನಿಕ್‌ಗಳು ಒಂದು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಜನರ ಸ್ಪಂದನೆ ನೋಡಿಕೊಂಡು ಸೇವಾವಧಿ ವಿಸ್ತರಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next