Advertisement

ಶತಮಾನದ‌‌ ಹಿಂದೆ ರೂಪು ಪಡೆದಿತ್ತು ಧ್ವಜ

12:14 AM Apr 01, 2021 | Team Udayavani |

ಇಂದು ಭಾರತೀಯರೆಲ್ಲರೂ ಹೆಮ್ಮೆಯಿಂದ ಸೆಲ್ಯೂಟ್‌ ಮಾಡುವ ತ್ರಿವರ್ಣ ಧ್ವಜವು ಒಂದು ಸ್ಪಷ್ಟ ರೂಪ ಪಡೆಯಲು ಹಲವಾರು ಬದಲಾವಣೆಗಳನ್ನು ಕಂಡಿತ್ತು ಎನ್ನುವುದು ನಮಗೆ ತಿಳಿದೇ ಇದೆ.

Advertisement

ಗಮನಾರ್ಹ ಸಂಗತಿಯೆಂದರೆ ಮಾರ್ಚ್‌ 31ಕ್ಕೆ ಭಾರತೀಯ ಬಾವುಟದ ಮೊದಲ ಕರಡು ವಿನ್ಯಾಸ ರೂಪು ತಳೆದು 100 ವರ್ಷಗಳಾಗಿವೆ. 1921ರ ಮಾರ್ಚ್‌ 31 ಹಾಗೂ ಎಪ್ರಿಲ್‌ 1ರಂದು ಬೆಜವಾಡಾದಲ್ಲಿ(ವಿಜಯವಾಡಾ) ಆಯೋಜನೆ ಯಾಗಿದ್ದ ಆಲ್‌ ಇಂಡಿಯಾ ಕಾಂಗ್ರೆಸ್‌ ಕಮಿಟಿ(ಎಐಸಿಸಿ)ಯ ಸಭೆಯಲ್ಲಿ ಯುವ ಸ್ವಾತಂತ್ರ್ಯ ಹೋರಾಟಗಾರ ಪಿಂಗಳಿ ವೆಂಕಯ್ಯ ಅವರು ಮಹಾತ್ಮಾ ಗಾಂಧೀಜಿಗೆ ಈ ಬಾವುಟದ ಕರಡು ವಿನ್ಯಾಸವನ್ನು ಸಮರ್ಪಿಸಿದ್ದರು. ಗಾಂಧೀಜಿಯವರು ಎಪ್ರಿಲ್‌ ತಿಂಗಳ ತಮ್ಮ “ಯಂಗ್‌ ಇಂಡಿಯಾ’ ಪತ್ರಿಕೆಯಲ್ಲಿ ಈ ಧ್ವಜದ ವಿನ್ಯಾಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಬೆಜವಾಡದ ಕೊಡುಗೆ: ಭಾರತೀಯ ಧ್ವಜದ ಮೊದಲ ಕರಡು ವಿನ್ಯಾಸ ಸಮರ್ಪಿತವಾಯಿತು ಎನ್ನುವ ಕಾರಣಕ್ಕಷ್ಟೇ ಅಲ್ಲ, ಎರಡು ದಿನಗಳವರೆಗೆ ಬೆಜವಾಡಾದಲ್ಲಿ ನಡೆದಿದ್ದ ಆ ಎಐಸಿಸಿ ಸಭೆಯು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಬೃಹತ್‌ ತಿರುವು ಕೊಟ್ಟಿತ್ತು ಎನ್ನುವ ಕಾರಣಕ್ಕೂ ಮಹತ್ವ ಪಡೆದಿದೆ ಎನ್ನುತ್ತಾರೆ ಇತಿಹಾಸಕಾರರು. ಆ ಸಭೆಯು ಸ್ವಾತಂತ್ರ್ಯ ಹೋರಾಟಕ್ಕೆ ಚಂದಾ ಸಂಗ್ರಹಿಸಲು ಮುನ್ನುಡಿ ಬರೆದಿದ್ದಷ್ಟೇ ಅಲ್ಲದೇ ಬೆಜವಾಡಾವನ್ನು ಸ್ವಾತಂತ್ರ್ಯ ಹೋರಾಟದ ಪ್ರಮುಖ ನೆಲೆಯಾಗಿಸಿತು. ಈ ಕಾರಣಕ್ಕಾಗಿಯೇ  ಸ್ವಾತಂತ್ರ್ಯ ಹೋರಾಟಕ್ಕೆ ಬೆಜವಾಡಾದ ಕೊಡುಗೆಯನ್ನು ಪರಿಗಣಿಸಿ ಮುಂದೆ ಅಲ್ಲಿ ಗಾಂಧಿ ಸ್ಥೂಪವನ್ನೂ ಸ್ಥಾಪಿಸಲಾಯಿತು ಎನ್ನುವುದು ವಿಶೇಷ.

30 ದೇಶಗಳ ಧ್ವಜ ಅಧ್ಯಯನ: ಧ್ವಜದ ವಿಚಾರಕ್ಕೆ ಬಂದರೆ, ಹತ್ತಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ವೆಂಕಯ್ಯ ಅವರು ಹತ್ತಿಯಿಂದ ಧ್ವಜ ತಯಾರಿಸಲು ನಿರ್ಧರಿಸಿ, ಇದಕ್ಕಾಗಿ 30ಕ್ಕೂ ಹೆಚ್ಚು ದೇಶಗಳ ಬಾವುಟಗಳನ್ನು ಅಭ್ಯಾಸ ಮಾಡಿದರು. 1921ರಲ್ಲಿ ಸಿದ್ಧವಾದ ಮೊದಲ ವಿನ್ಯಾಸ ಅನಂತರದಲ್ಲಿ ಹಲವು ಬದಲಾವಣೆಗಳನ್ನು ಕಂಡು ಕೊನೆಗೆ ಕೇಸರಿ, ಬಿಳಿ, ಹಸುರು ಪಟ್ಟಿ ಹಾಗೂ ನಡುವೆ ಅಶೋಕ ಚಕ್ರವನ್ನೊಳಗೊಂಡ ತ್ರಿವರ್ಣ ಧ್ವಜವಾಗಿ 1947ರಲ್ಲಿ ಅಂಗೀಕಾರಗೊಂಡಿತು. ಒಟ್ಟಲ್ಲಿ ನೂರು ವರ್ಷಗಳ ಹಿಂದೆ ಬೆಜವಾಡಾದಲ್ಲಿ ನಡೆದ ಸಭೆ ಎಷ್ಟೆಲ್ಲ ಬದಲಾವಣೆಗೆ ಮುನ್ನುಡಿ ಬರೆಯಿತು ಎನ್ನುವುದು ಅಷ್ಟಾಗಿ ಸ್ಮರಣೆಯಾಗುವುದೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next