ತಿರುವನಂತಪುರಂ: ಕೋವಿಡ್ 19 ಸೋಂಕು ಬಿಕ್ಕಟ್ಟಿನ ನಡುವೆಯೇ ಪಿಣರಾಯಿ ವಿಜಯನ್ ಅವರು ಗುರುವಾರ(ಮೇ 20) ಎರಡನೇ ಬಾರಿಗೆ ಕೇರಳದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ:ಲಾಕ್ ಡೌನ್ ಮುಂದುವರಿಕೆ ಬಗ್ಗೆ ಮೇ.23ರಂದು ಸಿಎಂ ನಿರ್ಧಾರ: ಡಿಸಿಎಂ ಅಶ್ವಥ್ ನಾರಾಯಣ್
ತಿರುವನಂತಪುರಂನ ಸೆಂಟ್ರಲ್ ಸ್ಟೇಡಿಯಂ ಪ್ರದೇಶದಲ್ಲಿ ಕೋವಿಡ್ ಮಾರ್ಗಸೂಚಿ ಪ್ರಕಾರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಿತು. ರಾಜ್ಯದಲ್ಲಿ ಏಪ್ರಿಲ್ 6ರಂದು ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ) ಹಿರಿಯ ಮುಖಂಡ ಪಿಣರಾಯಿ ನೇತೃತ್ವದ ಎಲ್ ಡಿಎಫ್ ಪ್ರಚಂಡ ಜಯಭೇರಿ ಬಾರಿಸಿತ್ತು.
ಸೆಂಟ್ರಲ್ ಸ್ಟೇಡಿಯಂನಲ್ಲಿ ನಡೆದ ಸರಳ ಸಮಾರಂಭದಲ್ಲಿ 76ವರ್ಷದ ಪಿಣರಾಯಿ ವಿಜಯನ್ ಅವರಿಗೆ ರಾಜ್ಯಪಾಲರಾದ ಅರೀಫ್ ಮೊಹಮ್ಮದ್ ಖಾನ್ ಪ್ರತಿಜ್ಞಾವಿಧಿ ಬೋಧಿಸಿದರು. ಸಮಾರಂಭದಲ್ಲಿ ಸಂಪೂರ್ಣವಾಗಿ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಕೋವಿಡ್ 19 ಸೋಂಕು ಹರಡಬಹುದು ಎಂಬ ದೃಷ್ಟಿಕೋನದ ಹಿನ್ನೆಲೆಯಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್, ಯುಡಿಎಫ್ ಮೈತ್ರಿಕೂಟದ ಮುಖಂಡರು ಪ್ರಮಾಣವಚನ ಸ್ವೀಕಾರ ಸಮಾರಂಭದಿಂದ ದೂರ ಉಳಿದಿದ್ದರು.
ರಾಜ್ಯದಲ್ಲಿ ಮರು ಆಯ್ಕೆಗೊಂಡ ಮುಖ್ಯಮಂತ್ರಿಗಳಲ್ಲಿ ಪಿಣರಾಯಿ ವಿಜಯನ್ ಮೂರನೇಯವರಾಗಿದ್ದಾರೆ. ಅಷ್ಟೇ ಅಲ್ಲ ಎಲ್ ಡಿಎಫ್ ಮೊದಲ ಅವಧಿಯನ್ನು ಪೂರ್ಣಗೊಳಿಸಿ ಎರಡನೇ ಬಾರಿಗೆ ಪಕ್ಷ ಅಧಿಕಾರಕ್ಕೇರಿದ್ದು ಕೇರಳ ರಾಜಕೀಯ ಇತಿಹಾಸದಲ್ಲಿ ಮೊದಲನೆಯದ್ದಾಗಿದೆ.