Advertisement

ಮನೆ ಬಾಗಿಲಿಗೇ ಪಿಂಚಣಿ ವಿತರಣೆ: ಪೈಲಟ್‌ ಜಿಲ್ಲೆಯಾಗಿ ಉಡುಪಿ ಜಿಲ್ಲೆ ಆಯ್ಕೆ

10:08 AM Jan 20, 2020 | Sriram |

ಉಡುಪಿ: ಸಾಮಾಜಿಕ ಭದ್ರತಾ ಯೋಜನೆಯಡಿಯ ಪಿಂಚಣಿಯನ್ನು ಪಿಂಚಣಿದಾರರ ಮನೆಬಾಗಿಲಿಗೇ ತೆರಳಿ ನೀಡುವ ಯೋಜನೆ ಜಾರಿಯ ಸಾಧಕ-ಬಾಧಕಗಳ ಪರೀಕ್ಷೆಗಾಗಿ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.

Advertisement

ಪೈಲಟ್‌ ಯೋಜನೆಯ ಜಾರಿಗೆ ಉಡುಪಿಯನ್ನು ಆಯ್ಕೆ ಮಾಡಲಾಗಿದ್ದು, ಮೊದಲ ಹಂತವಾಗಿ ಆರು ತಿಂಗಳುಗಳಿಂದ ಜಿಲ್ಲೆಯಲ್ಲಿ ಗ್ರಾಮಲೆಕ್ಕಿಗರಿಂದ ನಡೆಸಿದ ಪಿಂಚಣಿದಾರರ ಸರ್ವೇ ಮತ್ತು ಆಧಾರ್‌ ಮಾಹಿತಿ ಕ್ರೋಡೀಕರಿಸಿ ಅರ್ಹ 1,938 ಫ‌ಲಾನುಭವಿ ಗಳನ್ನು ಗುರುತಿಸಲಾಗಿದೆ. ಕಂದಾಯ ಇಲಾಖೆಯು ಅರ್ಹ ಫ‌ಲಾನುಭವಿಗಳ ಪರವಾಗಿ ಸುಮೊಟೋ ಅರ್ಜಿ ಸಲ್ಲಿಸಿದ ಬಳಿಕ ಅವರ ಮನೆ ಬಾಗಿಲಿಗೆ ಅಂಚೆಯ ಮೂಲಕ ಪಿಂಚಣಿ ಪತ್ರ ಪಡೆಯುವಂತೆ ಸೂಚನೆ ಕಳುಹಿಸುತ್ತಾರೆ. ಇದರಿಂದ ನಕಲಿ ಫ‌ಲಾನುಭವಿ ಗಳನ್ನು ಪತ್ತೆ ಹಚ್ಚಬಹುದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಯೋಜನೆಯನ್ನು ಜಾರಿಗೊಳಿಸಿ, ಅದರ ಸಾಧಕ-ಬಾಧಕಗಳು, ಯಶಸ್ಸನ್ನು ಗಮನಿಸಿ ಭವಿಷ್ಯದಲ್ಲಿ ಇದೇ ಮಾದರಿಯಲ್ಲಿ ರಾಜ್ಯಾದ್ಯಂತ ವಿಸ್ತರಿಸುವ ಚಿಂತನೆ ಸರಕಾರದ್ದು.

900 ಕೋ.ರೂ. ಉಳಿತಾಯ
ರಾಜ್ಯದಲ್ಲಿ ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳಿಗಾಗಿ ವಾರ್ಷಿಕ 7,500 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಆದರೆ ಮಧ್ಯವರ್ತಿಗಳು ಮತ್ತು ಅನರ್ಹ ಫ‌ಲಾನುಭವಿ ಗಳಿಂದಾಗಿ ನೈಜ ಫ‌ಲಾನುಭವಿಗಳಿಗೆ ಇಲಾಖೆಯ ವಿವಿಧ ಯೋಜನೆಗಳ ಪ್ರಯೋಜನ ದೊರೆಯುತ್ತಿಲ್ಲ. ಇದನ್ನು ತಪ್ಪಿಸುವುದಕ್ಕಾಗಿ ವಿವಿಧ ಪಿಂಚಣಿಗಳಿಗೆ ಆಧಾರ್‌ ನೋಂದಣಿ ಕಡ್ಡಾಯ ಮಾಡಲಾಗಿದೆ.

ಏನಿದು ಯೋಜನೆ?
ಈ ಯೋಜನೆಯಡಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನಕ್ಕಾಗಿ ಅರ್ಜಿ ಆಹ್ವಾನಿಸದೆ, ಆಧಾರ್‌ ಕಾರ್ಡ್‌, ವಾರ್ಷಿಕ ವರಮಾನದ ಆಧಾರದಲ್ಲಿ ಸರಕಾರವೇ ಪಿಂಚಣಿಗೆ ಅರ್ಹರನ್ನು ಗುರುತಿಸಿ ಮನೆ ಬಾಗಿಲಿಗೆ ವಿತರಿಸುವ ವಿನೂತನ ಯೋಜನೆ ಇದಾಗಿದೆ.

Advertisement

ಮನೆ ಬಾಗಿಲಿಗೆ ತೆರಳಿ ಪಿಂಚಣಿ ವಿತರಣೆ ಯೋಜನೆ ಜಾರಿಗೆ ಪೈಲಟ್‌ ಜಿಲ್ಲೆಯಾಗಿ ಉಡುಪಿಯನ್ನು ಆಯ್ಕೆ ಮಾಡಲಾಗಿದೆ. ಯೋಜನೆಯ ಕಾರ್ಯ ಚಟುವಟಿಕೆ ಪ್ರಾರಂಭವಾಗಿ 6 ತಿಂಗಳು ಕಳೆದಿವೆ. ಶೀಘ್ರದಲ್ಲಿ ರಾಜ್ಯಕ್ಕೆ ಈ ಯೋಜನೆಯನ್ನು ವಿಸ್ತರಿಸಲಾಗುತ್ತದೆ. ಅದರ ಪ್ರಾರಂಭ ಉಡುಪಿಯಿಂದ ಆಗಲಿದೆ.
-ಆರ್‌. ಅಶೋಕ್‌,
ಕಂದಾಯ ಸಚಿವ.

Advertisement

Udayavani is now on Telegram. Click here to join our channel and stay updated with the latest news.

Next