Advertisement

ಮನೆಗೆ ಜೈ ಬೀಮ್‌

05:35 PM Jul 09, 2018 | Harsha Rao |

ಮನೆಯ ಹೊರಗಿನ ಗೋಡೆಗಳು ದಪ್ಪಗಿದ್ದಷ್ಟು ಅನುಕೂಲ. ಗೋಡೆ ದಪ್ಪವಿದ್ದಾಗ ಮಳೆಯ ಹೊಡೆತ, ಬಿಸಿಲ ಬೇಗೆ-ಎರಡರಿಂದಲೂ ರಕ್ಷಣೆ ಸಿಗುತ್ತದೆ. ಕಿಟಕಿ, ಬಾಗಿಲುಗಳನ್ನು ಸುಭದ್ರವಾಗಿ ಕೂರಿಸುವುದೂ ದಪ್ಪ ಗೋಡೆಗಳಿದ್ದಾಗಲೇ ಸುಲಭ.

Advertisement

ಹೊರ ಗೋಡೆಗಳನ್ನು ದಪ್ಪದಪ್ಪವಾಗಿ ಕಟ್ಟಲು  ಹಾಕಲು ಕಾರಣ ಬಿಸಿಲಿನ ಬೇಗೆ ಹಾಗೂ  ಮಳೆಯ ಹೊಡೆತವನ್ನು, ಥಂಡಿಯನ್ನು ತಡೆದು ಕೊಳ್ಳಲಿ ಎಂದೂ,  ಹೊರಗಿನ ಗೋಡೆಗಳು ದಪ್ಪಗಿದ್ದರೆ ಕಳ್ಳಕಾಕರಿಗೆ ಕನ್ನಹಾಕಲು ಕಷ್ಟ ಆಗುವುದರ ಜೊತೆಗೆ ಕಿಟಕಿ ಬಾಗಿಲುಗಳನ್ನೂ ಭದ್ರವಾಗಿ ಕೂರಿಸಲು ಗೋಡೆಗಳು ಸುಭದ್ರ ಆಗಿದ್ದರೆ ಒಳ್ಳೆಯದು ಅಂತಲೂ ಭಾವಿಸುತ್ತಾರೆ.

ಮನೆ ಕಟ್ಟಬೇಕಾದರೆ ಕಾಲಂಗಳು ಇರಬೇಕು. ಕಾಲಂ ಇರದ ಮನೆಗಳು ಈಗ ಕಾಣಸಿಗುವುದೇ ಇಲ್ಲ. ಆದರೆ ಹಿಂದೆ ಕಾಲಂ ಇದ್ದದ್ದು ಕೇವಲ ದೊಡ್ಡ ದೊಡ್ಡ ಕಟ್ಟಡಗಳಿಗೆ ಮಾತ್ರ. ಈಗ ಹಾಗಿಲ್ಲ. ಸಣ್ಣ ಪುಟ್ಟ ಮನೆಗಳೂ ಕೂಡ ಕಾಲಂ ಅನ್ನು ಆಶ್ರಯಿಸಿದೆ. ಒಂದು ಪಕ್ಷ ನೀವು ಕಾಲಂ ಇಲ್ಲದ ಮನೆ ಕಟ್ಟಿದ್ದೀರಿ ಅಂದರೆ ಅಲ್ಲಿ ಏನೋ ಲೋಪವಿದೆ ಅಂತಲೇ ಅರ್ಥ.

ಜಾಗ ಉಳಿಸಿ
 ಆರ್‌ಸಿಸಿ ಕಾಲಂಗಳನ್ನು ಬಳಸುವ ಮೂಲ ಉದ್ಧೇಶ- ಅವು ಮಾಮೂಲಿ ಇಟ್ಟಿಗೆ ಗೋಡೆಗಳಿಗಿಂತಲೂ ಗಟ್ಟಿಮುಟ್ಟಾಗಿರುತ್ತವೆ. ಒಂಭತ್ತು ಇಂಚು ದಪ್ಪ, ಹತ್ತು ಅಡಿ ಉದ್ದದ ಗೋಡೆ ಹೊರಬಲ್ಲ ಸರಿ ಸುಮಾರು ಮೂವತ್ತು ಟನ್‌ಗಳಷ್ಟು ಭಾರವನ್ನು ಒಂದೇ ಒಂದು ಒಂಭತ್ತು ಇಂಚಿಗೆ ಒಂಭತ್ತು ಇಂಚಿನ ಆರ್‌ ಸಿ ಸಿ ಕಾಲಂ ಹೊರಬಲ್ಲದು. ಆದುದರಿಂದ, ಮನೆ ತುಂಬ ಗೋಡೆಗಳನ್ನೇ ಕಟ್ಟಿಕೊಂಡು ಉಪಯುಕ್ತ ಸ್ಥಳವನ್ನು ಅನ್ಯಾಯವಾಗಿ ಕಳೆದುಕೊಳ್ಳುವ ಬದಲು, ಕಾಲಂ ಕಟ್ಟಡಗಳನ್ನು ಹೊಂದುವುದೇ ಒಳಿತು. ಈಗ ಈ ವಿಧಾನವೇ  ಹೆಚ್ಚು ಜನಪ್ರಿಯವಾಗಿದೆ. ಆದರೆ ನಮ್ಮ ಮೂಲ ಮನೋಭಾವ ಅನೇಕ ವಿಷಯಗಳಲ್ಲಿ ಬದಲಾಗಿಲ್ಲ. ಹಾಗಾಗಿ, ಇಂದಿಗೂ ಇಟ್ಟಿಗೆ ಇಲ್ಲ ಕಾಂಕ್ರಿಟ್‌ ಬ್ಲಾಕ್‌ನಲ್ಲಿ ಮನೆ ಕಟ್ಟುವ ಪರಂಪರೆ ನಿಂತಿಲ್ಲ.

ಮನೆಯ ಒಳಗೆ ಯಾವ ಗೋಡೆಯಾದರು ಕಟ್ಟಿ,  ನಡೆಯುತ್ತದೆ. ಆದರೆ ಮನೆಯ ಹೊರಗಿನ ಗೋಡೆಯಾದರೂ ಇಟ್ಟಿಗೆಯದೇ ಇರಲಿ ಎಂದು,  ಕಾಲಂ ಸ್ಟ್ರಕ್ಚರ್ಗಳಲ್ಲೂ ಭಾರ ಹೊರುವ ಗೋಡೆಗಳ ಮಾದರಿಯಲ್ಲಿ ಒಂಭತ್ತು ಇಂಚಿನ ಗೋಡೆಗಳನ್ನು ಕಟ್ಟುವುದೂ ಇದ್ದೇ ಇದೆ! ಇಂಥ ಸಂದರ್ಭಗಳಲ್ಲಿ ಮನೆಯ ಮಧ್ಯೆ ಮಾತ್ರ ನಾಲ್ಕೂ ಕಡೆಯಿಂದ ಭಾರಹೊರುವ ರೀತಿಯಲ್ಲಿ ಒಂದು ಕಾಲಂ ಹಾಕಿಕೊಂಡು, ಗೋಡೆ ಕಟ್ಟಿಕೊಂಡರೆ, ಹಣ ಉಳಿತಾಯ ಆಗುವುದರ ಜೊತೆಗೆ ಸಾಕಷ್ಟು ಸ್ಥಳವೂ ಉಳಿಯುತ್ತದೆ! ಇಲ್ಲಿ ಗಮನಿಸಬೇಕಾದದ್ದು, ಭಾರವನ್ನು ಕಾಲಂ ಮತ್ತು ಗೋಡೆಗಳು ಸಮವಾಗಿ ಹಂಚಿಕೊಂಡಿರುತ್ತದೆ ಅನ್ನುವುದು.

Advertisement

ಒಂಟಿ ಕಾಲಂ ಮನೆ
ಕಟ್ಟಡದ ಹೊರಗಿನ ಗೋಡೆಗಳು ಸಾಮಾನ್ಯವಾಗಿ ಅರ್ಧ ಭಾರ ಅಂದರೆ ಒಂದು ಕಡೆಯಿಂದ ಬರುವ ಭಾರವನ್ನು ಮಾತ್ರ ಹೊರುತ್ತವೆ. ಆದರೆ ಮನೆಯ ಮಧ್ಯೆ ಇರುವ ಗೋಡೆ ಎರಡೂ ಬದಿಯಿಂದ ಬರುವ ಭಾರ ಹೊರಬೇಕಾಗುತ್ತದೆ. ಅಂದರೆ, ಹೆಚ್ಚು ಭಾರ ಈ ಸ್ಥಳದಲ್ಲೇ ಬೀಳುತ್ತದೆ. ಆದುದರಿಂದ, ಇಡೀ ಮನೆಯನ್ನು ಕಾಲಂ ಬೀಮ್‌ ಹಾಕಿ ದುಬಾರಿ ಮಾಡುವ ಬದಲು, ಎಲ್ಲಿ ಭಾರ ಹೆಚ್ಚಿರುತ್ತದೋ ಅಲ್ಲಿಮಾತ್ರ ಅಂದರೆ ಮನೆಯ ಮಧ್ಯಭಾಗದಲ್ಲಿ ಒಂದು ಬಲಿಷ್ಠ ಕಾಲಂ ಹಾಕಿದರೆ ಒಳಿತು. ಹೀಗೆ ಮಾಡಿದರೆ ಹೊರಗಿನ ಗೋಡೆಗಳನ್ನು ಭಾರಹೊರುವಂತೆ ಮಾಡಬಹುದು. ಹೇಳಿಕೇಳಿ ಇಲ್ಲಿ ಹೆಚ್ಚು ಭಾರ ಬರುವುದೂ ಇಲ್ಲ! ಹೀಗೆ ಒಂಟಿ ಕಂಬ ಬಳಸುವುದರಿಂದ ನಮಗೆ ಮನೆ ವಿನ್ಯಾಸ ಮಾಡುವಾಗ ಸಾಕಷ್ಟು ಬದಲಾವಣೆಗಳನ್ನು ಮಾಡಲೂ ಕೂಡ ಅನುಕೂಲ ಆಗುತ್ತದೆ.

ಕಾಲಂ ಗೋಡೆ ಲೆಕ್ಕಾಚಾರ
ಹೊರಗಿನ ಗೋಡೆಗಳನ್ನು ಭಾರ ಹೊರುವಂತೆ ಮಾಡಬೇಕಾದರೆ, ಅವುಗಳಿಗೆ ಸಾಂಪ್ರದಾಯಿಕವಾಗಿ ಹಾಕುತ್ತಿದ್ದ ಸೈಜುಗಲ್ಲಿನ ಪಾಯ ಹಾಕಿ ಕಡೇಪಕ್ಷ ಒಂಭತ್ತು ಇಂಚಿನ ಇಟ್ಟಿಗೆ ಗೋಡೆ ಕಟ್ಟಬೇಕಾಗುತ್ತದೆ. ಕಾಂಕ್ರಿಟ್‌ ಬ್ಲಾಕ್‌ ಬಳಸಬೇಕೆಂದರೆ- ಅವು ಭಾರ ಹೊರುವ ಮಾದರಿಯವಾಗಿರಬೇಕು. ಇವು ಮಾಮೂಲಿ ಪಾರ್ಟಿಷನ್‌ ಬ್ಲಾಕ್‌ಗಳಿಗಿಂತ ಸ್ವಲ್ಪ ದುಬಾರಿಯಾಗಿರುತ್ತವೆ. ಇತ್ತೀಚಿನ ದಿನಗಳಲ್ಲಿ ಭಾರ ಹೊರುವ ಹಾಲೋ ಕ್ಲೆಬ್ಲಾಕ್ಸ್‌, ಅಂದರೆ-ರಂಧ್ರಗಳಿರುವ ಜೇಡಿಮಣ್ಣಿನ ಇಟ್ಟಿಗೆಗಳೂ ಲಭ್ಯ, ಇವನ್ನೂ ಕೂಡ ಹೊರಗಿನ ಗೋಡೆಗಳಾಗಿ ಬಳಸಬಹುದು. ಮನೆಯ ಮಧ್ಯ ಭಾಗದಲ್ಲಿ ಬರುವ ಭಾರವನ್ನು ಲೆಕ್ಕ ಮಾಡಿ ಸೂಕ್ತ ಅಳತೆಯ ಆರ್‌ಸಿಸಿ ಕಾಲಂ ಅನ್ನು ಹಾಕಬೇಕು. ಇದನ್ನು ನುರಿತ ಆರ್ಕಿಟೆಕ್ಟ್ ಎಂಜಿನಿಯರ್‌ ಗಳ ಮೂಲಕ ಮಾಡಿಸಬೇಕಾಗುತ್ತದೆ.

ಹೊರ ಗೋಡೆಗಳನ್ನು ದಪ್ಪದಪ್ಪವಾಗಿ ಕಟ್ಟಲು  ಹಾಕಲು ಕಾರಣ ಬಿಸಿಲಿನ ಬೇಗೆ ಹಾಗೂ  ಮಳೆಯ ಹೊಡೆತವನ್ನು, ಥಂಡಿಯನ್ನು ತಡೆದು ಕೊಳ್ಳಲಿ ಎಂದೂ,  ಹೊರಗಿನ ಗೋಡೆಗಳು ದಪ್ಪಗಿದ್ದರೆ ಕಳ್ಳಕಾಕರಿಗೆ ಕನ್ನಹಾಕಲು ಕಷ್ಟ ಆಗುವುದರ ಜೊತೆಗೆ ಕಿಟಕಿ ಬಾಗಿಲುಗಳನ್ನೂ ಭದ್ರವಾಗಿ ಕೂರಿಸಲು ಗೋಡೆಗಳು ಸುಭದ್ರ ಆಗಿದ್ದರೆ ಒಳ್ಳೆಯದು ಅಂತಲೂ ಭಾವಿಸುತ್ತಾರೆ. ಗೋಡೆ ದಪ್ಪಗಿದ್ದರೆ ಬಿಲ ತೋಡುವುದು ಕಷ್ಟ ಎಂದು ಇಲಿ ಹೆಗ್ಗಣಗಳೂ  ಅವುಗಳ ಗೋಜಿಗೆ ಬರುವುದಿಲ್ಲ ಅನ್ನೋದು ಮನೆ ಮಾಲೀಕರಿಗೆ ಸಿಗುವ ಬೋನಸ್‌.  ಹೊರಗಿನ ದಪ್ಪ ಗೋಡೆಗಳಿಂದ ಆಗುವ ಇತರೆ ಲಾಭಗಳೂ ಇವೆ.  ಅದೇನೆಂದರೆ ಮನೆಯ ಮುಂದೆ ಮರವಿದ್ದು, ಆ ಮರದ ರೆಂಬೆ, ಕೊಂಬೆಗಳು ಮುರಿದು ಬಿದ್ದರೆ, ಸದೃಢ ಗೋಡೆಗಳಿಗೆ ಏನೂ ಹಾನಿ ಆಗುವುದಿಲ್ಲ!  

ಒಮ್ಮೆ ನಾವು ಹೊರಗಿನ ಗೋಡೆಗಳನ್ನು ದಪ್ಪದಪ್ಪವಾಗಿ ಕಟ್ಟಿದ ಮೇಲೆ, ಇಷ್ಟಕ್ಕೆ ಬಿಡಬಾರದು. ಇದರಿಂದ ಲಾಭ ಪಡೆಯಲೇಬೇಕು. ಹೇಗೆಂದರೆ, ಮಿಕ್ಕೆಲ್ಲಾ ಭಾರ ಹೊರುವಂತೆ ಮಾಡುವುದರ ಮೂಲಕ ಮನೆಯೆಲ್ಲ ಹತ್ತು ಹನ್ನೆರಡು ಕಾಲಂ ಗಳಿಂದ ಆವರಿಸುವುದನ್ನು ತಡೆಯಬಹುದು. ಗೋಡೆಗಳು ಭಾರ ಹೊರುವಂತೆ ಮಾಡಲು ಅವುಗಳ ಮೇಲೆ ಸೂಕ್ತ ಸ್ಥಳಗಳಲ್ಲಿ ಬೇರಿಂಗ್‌ ಪ್ಲೇಟ್ಸ್‌ – ಭಾರಹೊರುವ ಹಲಗೆಗಳನ್ನು ಆರ್‌ಸಿಸಿ ಯಲ್ಲಿ ಹಾಕಲು ಮರೆಯಬಾರದು. ಸರಿ, ಮನೆಯ ಮಧ್ಯದಿಂದ ಬೀಮ್‌ಗಳನ್ನು ಹಾಕಿದಿರಿ,  ಅದು ನಾಲ್ಕೂ ಕಡೆ ಹರಡಿ- ಭಾರ ಹೊರುವ ಗೋಡೆಗಳ ಮೇಲೆ ಕೂರಲು ಬರುವುದರಿಂದ- ಇವುಗಳ ಕೆಳಗೆ ಕಡೇಪಕ್ಷ ಮೂರು ಅಡಿ ಉದ್ದದ ಆರು ಇಂಚಿನ ಆರ್‌ಸಿಸಿ ಲಿಂಟಲ್‌ ಹಾಕಬೇಕು ಅನ್ನೋದನ್ನು ಮರೆಯಬೇಡಿ. ಆಗ ಬೀಮ್‌ನಿಂದ ಬರುವ ಎಲ್ಲ ಭಾರವೂ ಗೋಡೆಗಳ ಮೇಲೆ ಸರಿಸಮಾನವಾಗಿ ಹರಡಲು, ಬೀಮ್‌ ಇದ್ದಲ್ಲಿ ಭಾರ ಕೇಂದ್ರೀಕೃತವಾಗುವುದನ್ನು ತಡೆಯಲು ಈ ಲಿಂಟಲ್‌ಗ‌ಳು ನೆರವಾಗುತ್ತವೆ.

ಒಂಟಿ ಕಾಲಂ ಎಲ್ಲಿ ಸೂಕ್ತ
ಸಣ್ಣ ನಿವೇಶನಗಳಲ್ಲಿ ಅಂದರೆ ಇಪ್ಪತ್ತು ಅಡಿಗೆ ಮೂವತ್ತು ಅಡಿ ನಿವೇಶನಗಳಲ್ಲಿ ಗೋಡೆಯ ದಪ್ಪ ಹೆಚ್ಚಾದಷ್ಟೂ ಹೆಚ್ಚು ಸ್ಥಳ ವ್ಯಯವಾಗುತ್ತದೆ. ಹೀಗಂತಲೇ ಎಲ್ಲ ಗೋಡೆಗಳನ್ನೂ ತೆಳ್ಳಗೇನೇ ಹಾಕಲಾಗುತ್ತದೆ. ಭೂಮಿಯ ಬೆಲೆ ಕೋಟಿ ಕೋಟಿ ಆಗಿರುವುದರಿಂದ ಯಾರೂ ಕೂಡ ಜಾಗ ಬಿಡಲೊಪ್ಪರು. ಹಾಗಾಗಿ, ಅಕ್ಕ ಪಕ್ಕದ ಮನೆಯವರು ನಿವೇಶನದ ಅಂಚಿನವರೆಗೂ ಒತ್ತರಿಸಿ ಕಟ್ಟಿಕೊಳ್ಳುವುದರಿಂದ,  ನಮ್ಮ ಮನೆಗೆ ಮಳೆ, ಬಿಸಿಲು ಈ ಕಡೆಯಿಂದ ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಇಂತಹ ಸ್ಥಳಗಳಲ್ಲಿ ಅನಿವಾರ್ಯವಾಗಿ ಕಾಲಂ ಬೀಮ್‌ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಮೂವತ್ತು ಅಡಿಗೆ ನಲವತ್ತು ಅಡಿ ಹಾಗೂ ಅದಕ್ಕಿಂತ ದೊಡ್ಡ ನಿವೇಶನಗಳಲ್ಲಿ- ಸುತ್ತಲೂ ಒಂದಷ್ಟು ಖಾಲಿ ಜಾಗವನ್ನು ಬಿಟ್ಟು ಮನೆಯನ್ನು ಕಟ್ಟಲಾಗುತ್ತದೆ. ಇಂಥ ತೆರೆದ ನಿವೇಶನಗಳಲ್ಲಿ ಬಿಸಿಲು ಮಳೆಗೆ ಮನೆ ಹೆಚ್ಚಾಗಿ ಒಡ್ಡಿಕೊಳ್ಳುವುದರಿಂದ ಹೊರಗಿನ ಗೋಡೆಗಳನ್ನು ದಪ್ಪವಾಗಿ ಹಾಕಿಕೊಳ್ಳಬೇಕಾಗುತ್ತದೆ. ಹಾಗಾಗಿ, ಈ ಅಳತೆಯ ನಿವೇಶನಗಳಲ್ಲಿ ಒಂಟಿ ಕಾಲಂ ಮನೆಯ ವಿನ್ಯಾಸ ಮಾಡುವುದು ಸೂಕ್ತ. ನಿವೇಶನ ಮತ್ತೂ ದೊಡ್ಡದಿದ್ದರೆ, ಒಂಟಿ ಕಾಲಂ ಹಾಕುವ ಬದಲು ಜೊತೆಗೊಂದು ಹಾಕಿಕೊಂಡರೆ- ಬೀಮ್‌ಗಳ ದಪ್ಪ ಕಡಿಮೆ ಆಗುತ್ತದೆ!

ಹೆಚ್ಚಿನ ಮಾಹಿತಿಗೆ 98441 32826

– ಆರ್ಕಿಟೆಕ್ಟ್ ಕೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next