ಕಾಪು: ದ್ವೈ ವಾರ್ಷಿಕವಾಗಿ ನಡೆಯುವ ಕಾಪುವಿನ ಪಿಲಿ ಕೋಲ ತುಳುನಾಡಿನ ಏಳು ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದೇಶ ವಿದೇಶಗಳಲ್ಲಿ ಹೆಸರುವಾಸಿಯಾಗಿರುವ ಪಿಲಿಕೋಲವು ಮೇ 14ರಂದು ಸಂಪನ್ನಗೊಳ್ಳಲಿದೆ.
ಆಚರಣ ವಿಧಾನ
ಪಿಲಿ ವೇಷಧಾರಿ ಯಾರು ಎನ್ನುವುದು ಹಳೇ ಮಾರಿಯಮ್ಮ ದೇವಿಯ ಸನ್ನಿಧಿಯಲ್ಲಿ ನಿರ್ಧಾರವಾಗುತ್ತದೆ. ಪಿಲಿಕೋಲ ನಡೆ ಯುವ ಮುಂಚಿನ ಮಂಗಳವಾರ ಮೂರೂ ಮಾರಿಗುಡಿಗಳಿಗೆ ತೆರಳಿ ಮಾರಿಯಮ್ಮನ ಅಭಯ ಪಡೆಯುವ ಸಂಪ್ರದಾಯವಿದೆ. ನಿರ್ಧರಿತ ವೇಷಧಾರಿಗೆ ಕೋಲದ ಹಿಂದಿನ ದಿನ ವೀಳ್ಯ ಕೊಡುವ ಕಾರ್ಯ ನಡೆಯುತ್ತದೆ. ವೀಳ್ಯ ಪಡೆದ ಭೂತ ನರ್ತಕನನ್ನು ನಿರ್ದಿಷ್ಟ ಕಲ್ಲಿನಲ್ಲಿ ಕುಳ್ಳಿರಿಸಿ ಮೂರು ಕೊಡ ನೀರು ಸುರಿಯಲಾಗುತ್ತದೆ. ಪಾತ್ರಧಾರಿಯು ದೈವಸ್ಥಾನದ ಒಳಗೆ ಹೊಸ ಚಾಪೆಯಲ್ಲಿ ಮಲಗುತ್ತಾನೆ, ಗುರಿಕಾರ ವರ್ಗದವರೂ ಅಲ್ಲೇ ಮಲಗುತ್ತಾರೆ. ಕೋಲದ ದಿನ ವಿವಿಧ ಸಿದ್ಧತೆಗಳನ್ನು ನಡೆಸಿದ ಬಳಿಕ ಸ್ನಾನ ಮಾಡಿಸಿ ಬಣ್ಣಗಾರಿಕೆಗಾಗಿ ಒಲಿ ಮದೆ (ಒಲಿ ಗುಂಡ) ಯೊಳಗೆ ಕಳುಹಿಸಲಾಗುತ್ತದೆ.
ಮೈಯಿಡೀ ಹುಲಿಯ ಬಣ್ಣವನ್ನು ಬಳಿದ ಅನಂತರ ಪಟೇಲರ ಅನುಮತಿ ಪಡೆದು ಕೇವಲ ಸಿರಿ ಒಲಿಗಳಿಂದಲೇ ಸಿಂಗಾರಗೊಳ್ಳುವ ವಿಶೇಷ ಪಂಜರಗಳಿಂದ ಹುಲಿ ಹೊರ ಬರುತ್ತದೆ. ಆ ಮೂಲಕ ಪಿಲಿ ಕೋಲ ಆರಂಭಗೊಳ್ಳುತ್ತದೆ. ಸಿರಿ ಪಂಜರದೊಳಗಿಂದ ಹೊರ ಬಂದ ಹುಲಿ ಭೂತವು ನೆರೆದಿರುವವರನ್ನು ಮುಟ್ಟಲು ಯತ್ನಿಸುವುದು, ಜನರು ಚದುರುವುದು ಕಂಡುಬರುತ್ತದೆ. ಹುಲಿ ಸಂಚಾರ ಮತ್ತು ಬೇಟೆ ಮುಗಿದು ವಿಜಯದ ಆಚರಣೆಯಲ್ಲಿ ತೊಡಗುತ್ತದೆ. ಈ ವೇಳೆ ಬೆಡಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಆ ಬಳಿಕ ಮತ್ತೆ ಹುಲಿ ಬೇಟೆಗಿಳಿಯುತ್ತದೆ. ಸುಮಾರು ಐದು ಗಂಟೆಗಳವರೆಗೆ ನಡೆಯುವ ಈ ಹುಲಿ ಕೋಲವನ್ನು ವೀಕ್ಷಿಸಲು ಹುಲಿ ಸಂಚಾರಕ್ಕೆ ನಿರ್ಬಂಧವಿರುವ ನಿರ್ದಿಷ್ಟ ಜಾಗದಲ್ಲಿ ನಿಂತಿರುತ್ತಾರೆ. ಐದು ಗಂಟೆಯ ನಿರಂತರ ಸುತ್ತಾಟ ಮತ್ತು ಬೇಟೆಯಾಟದಿಂದ ಸುಸ್ತಾಗುವ ಹುಲಿಯು ಮಾರಿಯಮ್ಮ ದೇವಿಯ ಸಮ್ಮುಖದಲ್ಲಿ ತೆಂಗಿನ ಕಾಯಿ ಮತ್ತು ಕೋಳಿಯನ್ನು ಬಲಿ ಪಡೆದು ಬ್ರಹ್ಮರ ಗುಂಡಕ್ಕೆ ಸುತ್ತು ಹೊಡೆದು ಬಾಳೆ ಎಲೆಯ ಮೇಲೆ ಬಂದು ಮಲಗುತ್ತದೆ. ಗುರಿಕಾರ ಹುಲಿಯ ಮೇಲೆ ನೀರು ಸಂಪ್ರೋಕ್ಷಣೆಗೈಯ್ಯುತ್ತಾರೆ. ಬಳಿಕ ಹಗ್ಗ ಹಿಡಿದು ಕೊಂಡವರು ವೇಷಧಾರಿಯ ಮೈ ತಿಕ್ಕುತ್ತಾರೆ. ಇದರಿಂದ ಆತನ ಆಯಾಸ ಪರಿಹಾರಗೊಂಡು ಆವೇಶ ಕೊನೆಗೊಳ್ಳುತ್ತದೆ.