Advertisement
ಎರಡು ತಿಂಗಳಿನಿಂದ ತಮ್ಮ ರಾಜ್ಯ ರಾಜಕೀಯ ನಾಯಕರ ನೇತೃತ್ವದಲ್ಲಿ ಆಯಾ ಪಕ್ಷಗಳು ಯಾತೆ ನಿರತವಾಗಿವೆ. ಇವರಿಗೆ ಪೈಪೋಟಿ ನೀಡುವಂತೆ ಹೆಚ್ಚಾ- ಕಡಿಮೆ ಇದೇ ಅವಧಿಯಲ್ಲಿ ಜನರು ಧಾರ್ಮಿಕ ಕ್ಷೇತ್ರಗಳ ಭೇಟಿ ಆರಂಭಿಸಿದ್ದಾರೆ.
ಪ್ರಮುಖವಾಗಿ ತಮಿಳುನಾಡಿನ ಓಂಶಕ್ತಿ ದೇವಾಲಯ, ಕರಾವಳಿ ಭಾಗದ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಉಡುಪಿ, ಗೋಕರ್ಣ, ರಾಮೇಶ್ವರ, ಅಯೋಧ್ಯೆ ಮತ್ತಿತರ ಕ್ಷೇತ್ರಗಳಿಗೆ ಜನರನ್ನು ಕರೆದೊಯ್ಯಲಾಗುತ್ತಿದೆ. ಬಹುತೇಕ ಎಲ್ಲ ಯಾತ್ರೆಗಳು ಉಚಿತವಾಗಿದ್ದು, ವಿಶೇಷ ದರ್ಶನ ಮತ್ತು ಪೂಜೆಯೊಂದಿಗೆ ಮಹಿಳೆಯರಿಗೆ ಸೀರೆ ಮತ್ತಿತರ ಉಡುಗೊರೆ ಕೊಟ್ಟು ಕಳುಹಿಸಲಾಗುತ್ತಿದೆ.
Related Articles
ಈ ಯಾತ್ರೆಗಳು ಪರೋಕ್ಷವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ ಲಾಭ ಉಂಟು ಮಾಡುತ್ತಿವೆ. ಈಗ ಕೋವಿಡ್ ಹಾವಳಿ ತಗ್ಗಿದ್ದು, ಚುನಾವಣೆಯೂ ಹತ್ತಿರವಾಗುತ್ತಿರುವುದರಿಂದ ಬಸ್‌ಗಳನ್ನು “ಒಪ್ಪಂದದ ಮೇರೆಗೆ’ ಪಡೆಯುವವರ ಸಂಖ್ಯೆ ಹೆಚ್ಚಳವಾಗಿದ್ದು, ನಿತ್ಯ ಅಂದಾಜು 300 ಬಸ್‌ಗಳು ಬರೀ ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲೇ ಸಂಚರಿಸುತ್ತಿವೆ. ಪರಿಣಾಮ 2019 ಕ್ಕೆ ಹೋಲಿಸಿದರೆ, ಮಾಸಿಕ ಆದಾಯದಲ್ಲಿ ಏರಿಕೆಯಾಗಿದೆ. 2019ರ ಡಿಸೆಂಬರ್‌ನಲ್ಲಿ ಈ ವಿಭಾಗದಿಂದ 14.74 ಕೋಟಿ ರೂ. ಆದಾಯ ಬಂದಿತ್ತು. 2022ರ ಡಿಸೆಂಬರ್‌ನಲ್ಲಿ 24.01 ಕೋಟಿ ರೂ. ಬಂದಿದೆ. ಅದೇ ರೀತಿ, 2020ರ ಜನವರಿಯಲ್ಲಿ 19.53 ಕೋಟಿ ಇದ್ದದ್ದು, 2023ರ ಜನವರಿಯಲ್ಲಿ ಅಂದಾಜು 22 ಕೋಟಿ ರೂ. ಗಳಿಕೆ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಚುನಾವಣೆಯೂ ಕಾರಣ:“ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಒಪ್ಪಂದದ ಮೇರೆಗೆ ಕಾರ್ಯಾಚರಣೆಯಾಗುವ ಬಸ್‌ಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸುರಕ್ಷಿತ ಎಂಬ ಭಾವ ಹಾಗೂ ಚಾಲಕರು, ನಿರ್ವಾಹಕರ ನಡೆಯೂ ಪ್ರಯಾಣಿಕರಿಂದ ಮೆಚ್ಚುಗೆ ಗಳಿಸುತ್ತಿದೆ. ಜತೆಗೆ ಚುನಾವಣೆ, ರಾಜಕೀಯ ಸಮಾವೇಶಗಳೂ ಬಸ್‌ಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ’ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್. “ಡಿಸೆಂಬರ್ ಮತ್ತು ಜನವರಿಯಲ್ಲಿ ಬಸ್‌ಗಳಿಗೆ ತುಂಬಾ ಬೇಡಿಕೆ ಇತ್ತು. ಹೀಗಾಗಿ ಕಿ.ಮೀ.ಗೆ 47-48 ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ವಾರದಿಂದ ತುಸು ಕಡಿಮೆ ಆಗಿದೆ’ ಎಂದು ಕರ್ನಾಟಕ ರಾಜ್ಯ ಮೋಟಾರು ವಾಹನಗಳ ಸಂಘದ ಮಾಜಿ ಕಾರ್ಯದರ್ಶಿ ರಮೇಶ್ ಮಾಹಿತಿ ನೀಡಿದರು. ಮಹಿಳೆಯರೇ ಹೆಚ್ಚು
ಆಯಾ ಕ್ಷೇತ್ರದ ಜನ ಹೆಚ್ಚಾಗಿ ಯಾವ ದೇವಸ್ಥಾನಗಳಿಗೆ ಹೋಗುತ್ತಾರೆ ಎಂಬುದನ್ನು ಆಧರಿಸಿ ಯಾತ್ರೆಗಳು ನಿಗದಿಯಾಗುತ್ತಿವೆ. ಇದರಲ್ಲಿ ಮಹಿಳೆಯರೇ ಅಧಿಕ. ಸ್ಥಳೀಯ ನಾಯಕರು ಆಯಾ ಭಾಗದ ಸಂಘ-ಸಂಸ್ಥೆಗಳ ಮೂಲಕ ಜನರನ್ನು ಒಗ್ಗೂ ಡಿಸಿ ಯಾವ ದೇವಸ್ಥಾನ ಸೂಕ್ತ ವೆಂದು ಲೆಕ್ಕ ಹಾಕಿ ಯಾತ್ರೆಗಳನ್ನು ಆಯೋಜಿಸುತ್ತಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್ ಮುಖಂಡರೊಬ್ಬರು. -ವಿಜಯಕುಮಾರ ಚಂದರಗಿ