Advertisement

ಪುಷ್ಕರಿಣಿಯಲ್ಲಿ ಮುಳುಗಿ ತೀರ್ಥಯಾತ್ರಿಕ ಸಾವು

10:02 AM Feb 18, 2020 | sudhir |

ಕೋಟ: ತೀರ್ಥಯಾತ್ರೆಗೆ ಆಗಮಿಸಿದ್ದ ಬೆಂಗಳೂರಿನ ಎಂಜಿನಿ ಯರಿಂಗ್‌ ಪದವೀಧರ, ಬೆಂಗಳೂರು ಕೆ.ಆರ್‌.ಪುರಂ ಬಿದರನಹಳ್ಳಿ ನಿವಾಸಿ ಪವನ್‌ ಕುಮಾರ್‌ (23) ಎಂಬವರು ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಶಂಕತೀರ್ಥ ಪುಷ್ಕರಿಣಿ ಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ಬೆಳಗಿನ ಜಾವ ಸಂಭವಿಸಿದೆ.

Advertisement

ಈತ ಎಂಜಿನಿಯರಿಂಗ್‌ ಪದವಿ ಮುಗಿಸಿ ಉದ್ಯೋಗ ಸೇರುವ ಸಿದ್ಧತೆಯಲ್ಲಿದ್ದು, ತಾಯಿ ಹಾಗೂ ಊರಿನ 30 ಮಂದಿಯ ತಂಡದೊಂದಿಗೆ ಫೆ. 14ರಂದು ಬೆಂಗಳೂರಿನಿಂದ ದ.ಕ., ಉಡುಪಿ, ಚಿಕ್ಕಮಗಳೂರು ಜಿಲ್ಲೆಯ ವಿವಿಧ ದೇಗುಲ ಯಾತ್ರೆ ಕೈಗೊಂಡಿದ್ದ. ಶನಿವಾರ ರಾತ್ರಿ ಉಡುಪಿಯಲ್ಲಿ ವಾಸ್ತವ್ಯವಿದ್ದು, ರವಿವಾರ ಬೆಳಗ್ಗಿನ ಜಾವ 5.30ಕ್ಕೆ ಸಾಲಿಗ್ರಾಮಕ್ಕೆ ಆಗಮಿಸಿ ಎಲ್ಲರೂ ಜತೆಯಾಗಿ ಪುಷ್ಕರಿಣಿಯಲ್ಲಿ ತೀರ್ಥ ಸ್ನಾನಕ್ಕಾಗಿ ಇಳಿದಿದ್ದರು. ಈ ಸಂದರ್ಭ ಪವನ್‌ ನೀರಿನಲ್ಲಿ ಸ್ವಲ್ಪ ಮುಂದಕ್ಕೆ ತೆರಳಿದ್ದು, ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ. ಜತೆಗಿದ್ದವರು ಎಷ್ಟೇ ಪ್ರಯತ್ನಿಸಿದರೂ ರಕ್ಷಿಸಲು ಸಾಧ್ಯವಾಗಿರಲಿಲ್ಲ. ಅನಂತರ ಕುಂದಾಪುರ ಅಗ್ನಿಶಾಮಕ ದಳದ ಸಿಬಂದಿಗಳು ಸ್ಥಳಕ್ಕಾಗಮಿಸಿ ಸ್ಥಳೀಯರು ಹಾಗೂ ಜೀವನ್‌ಮಿತ್ರ ನಾಗರಾಜ್‌ ಪುತ್ರನ್‌ ಸಹಕಾರ ದೊಂದಿಗೆ ಶವವನ್ನು ಮೇಲೆತ್ತಿದರು.

ಉದ್ಯೋಗ ಖಾತ್ರಿಯಾಗಿತ್ತು
ಮೃತನು ಪುರೋಹಿತ ರಮೇಶ್‌ ಭಟ್‌ ಹಾಗೂ ಲಕ್ಷ್ಮೀ ದಂಪತಿಯ ಏಕೈಕ ಪುತ್ರನಾಗಿದ್ದು, ಇತ್ತೀಚೆಗೆ ಎಂಜಿನಿಯರಿಂಗ್‌ ಪದವಿ ಪೂರೈಸಿದ್ದ. ಆತನಿಗೆ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗ ಖಾತ್ರಿಯಾಗಿದ್ದು, ಈ ವಾರದಲ್ಲಿ ಕೆಲಸಕ್ಕೆ ಸೇರುವವನಿದ್ದ.

ಪ್ರತಿವರ್ಷ ಪುಣ್ಯಕ್ಷೇತ್ರಕ್ಕೆ ತೆರಳುತ್ತಿದ್ದ ತಂಡ
ಮಾಘಮಾಸದ ಪುಣ್ಯ ಸ್ನಾನ ಕ್ಕಾಗಿ ಪ್ರತಿ ವರ್ಷ ಈ ತಂಡ ಒಂದೊಂದು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿತ್ತು. ಪೂರ್ವ ನಿಗದಿಯಂತೆ ಶನಿವಾರ ಸಂಜೆ ಉಡುಪಿಯಿಂದ ನೇರವಾಗಿ ಶೃಂಗೇರಿ, ಹೊರನಾಡಿಗೆ ತೆರಳಬೇಕಿತ್ತು. ಆದರೆ ಮಾರ್ಗ ಮಧ್ಯದಲ್ಲಿ ಬಸ್ಸು ಹಾಳಾಗಿ ತಡವಾದ ಕಾರಣ ಶೃಂಗೇರಿಗೆ ತೆರಳುವುದನ್ನು ಕೈಬಿಟ್ಟು ಉಡುಪಿಯಲ್ಲಿ ಉಳಿದು ಬೆಳಗ್ಗೆ ಸಾಲಿಗ್ರಾಮವನ್ನು ಸಂದರ್ಶಿಸಿ ನೇರವಾಗಿ ಬೆಂಗಳೂರಿಗೆ ತೆರಳಲು ನಿಶ್ಚಯಿಸಿದ್ದರು.

ತಾಯಿ ಎಚ್ಚರಿಸಿದ್ದರು
ಘಟನೆ ನಡೆಯುವಾಗ ಪವನ್‌ನ ತಾಯಿ ಲಕ್ಷ್ಮೀಯವರು ಕೂಡ ಜತೆಯಲ್ಲಿದ್ದರು ಹಾಗೂ ಆಳಕ್ಕೆ ಇಳಿಯದಂತೆ ಮಗನಿಗೆ ಎಚ್ಚರಿಕೆ ಕೂಡ ನೀಡಿದ್ದರು. ಮಗನ ದುರಂತ ಸಾವನ್ನು ಕಣ್ಣಾರೆ ಕಂಡ ಅವರ ರೋದನ ಮುಗಿಲುಮುಟ್ಟಿತ್ತು.

Advertisement

ಕೋಟ ಎಸ್‌ಐ ನಿತ್ಯಾನಂದ ಗೌಡ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುಷ್ಕರಿಣಿಗೆ ತಡೆಬೇಲಿಗೆ ತೀರ್ಮಾನ‌
ಪುಷ್ಕರಣಿ ತೆರೆದ ಸ್ಥಿತಿಯಲ್ಲಿರುವುದರಿಂದ ಈ ಹಿಂದೆ ಕೂಡ ಹಲವು ಅವಘಡಗಳು ಸಂಭವಿಸಿ ಜೀವಹಾನಿಯಾಗಿತ್ತು. ಆದರೆ ಸ್ಥಳೀಯ ನೂರಾರು ಮಂದಿ ಇದರಲ್ಲಿ ಈಜು ಅಭ್ಯಾಸ ಮಾಡುವುದರಿಂದ ಶಾಶ್ವತ ತಡೆಬೇಲಿ ನಿರ್ಮಿಸಿರಲಿಲ್ಲ. ಈಗ ಈ ಘಟನೆಗೆ ದೇಗುಲದ ಆಡಳಿತ ಮಂಡಳಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, ಸ್ಥಳೀಯರು ಕೂಡ ಕ್ರಮಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ. ಹೀಗಾಗಿ ಪುಷ್ಕರಿಣಿಯ ಆಳಕ್ಕೆ ಇಳಿಯದಂತೆ ಶಾಶ್ವತ ತಡೆಬೇಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next