Advertisement

ಕಂಬದಕೋಣೆ: ಮೃತ ಮಕ್ಕಳ ಮನೆಯವರಿಗೆ ಶಾಸಕರಿಂದ ನೆರವು

11:10 PM Oct 23, 2019 | sudhir |

ಉಪ್ಪುಂದ: ಕಂಬದಕೋಣೆ ಗ್ರಾಮದ ಎಡಮಾವಿನ ಹೊಳೆಗೆ ಸ್ನಾನಕ್ಕೆಂದು ತೆರಳಿದ ನಾಲ್ವರು ವಿದ್ಯಾರ್ಥಿಗಳ ಪೈಕಿ ಇಬ್ಬರು ನೀರುಪಾಲಾಗಿ ಮೃತಪಟ್ಟಿದ್ದು ಅವರ ಮನೆಗೆ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಮಂಗಳವಾರ ಸಂಜೆ ಭೇಟಿ ನೀಡಿ ಮನೆಯವರಿಗೆ ವೈಯಕ್ತಿಕ ಪರಿಹಾರ ವಿತರಿಸಿದರು.

Advertisement

ಹಳಗೇರಿ ದೊಡ್ಮನೆ ವೆಂಕಪ್ಪ ಶೆಟ್ಟಿ ಅವರ ಪುತ್ರ ವಂಶಿತ ಶೆಟ್ಟಿ (12) ಮತ್ತು ಕಂಬದಕೋಣೆ ಹಳಗೇರಿ ಪಟೇಲರ ಮನೆಯ ರತ್ನಾಕರ ಶೆಟ್ಟಿ ಅವರ ಪುತ್ರ ರಿತೇಶ್‌ ಶೆಟ್ಟಿ (12) ನೀರುಪಾಲಾದವರು. ಇವರಿಬ್ಬರೂ ನಾಗೂರು ಸಂದೀಪನ್‌ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು. ಶಾಲೆಗೆ ಮಧ್ಯಾವಧಿ ರಜೆ ಇದ್ದ ಕಾರಣ ಇತರ ಗೆಳೆಯರ ಜತೆ ನದಿ ಬದಿಗೆ ತೆರಳಿದ್ದರು. ಕಾಲು ತೊಳೆಯಲು ಇಳಿದಾಗ ದುರ್ಘ‌ಟನೆ ಸಂಭವಿಸಿತ್ತು.

ಹುಡುಕಾಟ ಸಂದರ್ಭ ಭೇಟಿ ನೀಡಿದ್ದ ಶಾಸಕರು ಬಳಿಕ ಸಂಸದ ಬಿ.ವೈ. ರಾಘವೇಂದ್ರ ಅವರ ಬಳಿ ಈ ಇಬ್ಬರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 5 ಲಕ್ಷ ರೂ.ಗಳ ಪರಿಹಾರ ನೀಡಬೇಕೆಂದು ವಿನಂತಿಸಿದ್ದರು. ಜಿಲ್ಲಾಧಿಕಾರಿಗಳಿಗೂ ಮನವಿ ಮಾಡಿದ್ದರು. ಮುಖ್ಯಮಂತ್ರಿಗಳನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಲಿದ್ದಾರೆ. ಈ ಮಧ್ಯೆ ಶಾಸಕರು ಎರಡೂ ಮನೆಯವರನ್ನೂ ಭೇಟಿ ಮಾಡಿ ತಮ್ಮ ವೈಯಕ್ತಿಕ ನೆಲೆಯಲ್ಲಿ 50 ಸಾವಿರ ರೂ.ಗಳ ನೆರವು ಹಸ್ತಾಂತರಿಸಿದರು. ಇಬ್ಬರಿಗೂ ಪುತ್ರಿಯರಿದ್ದು ಕುಂದಾಪುರ ಎಜುಕೇಶನ್‌ ಟ್ರಸ್ಟ್‌ ವತಿಯಿಂದ ದ್ವಿತೀಯ ಪಿಯುಸಿವರೆಗೆ ಟ್ರಸ್ಟ್‌ನ ಶಾಲೆ, ಕಾಲೇಜುಗಳಲ್ಲಿ ಉಚಿತ ಶಿಕ್ಷಣ, ಸಮವಸ್ತ್ರದ ಭರವಸೆ ನೀಡಿದರು.

ಈ ಸಂದರ್ಭ ಶಾಸಕರ ಜತೆ ಉದಯ ಶೆಟ್ಟಿ ಹಳಗೇರಿ, ಹೇರೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ, ಕಂಬದಕೋಣೆ ಪಂಚಾಯತ್‌ ಸದಸ್ಯ ರವೀಂದ್ರ ಶೆಟ್ಟಿ, ಕಿರಿಮಂಜೇಶ್ವರ ಪಂಚಾಯತ್‌ ಸದಸ್ಯ ಮಂಜುನಾಥ ದೇವಾಡಿಗ, ಬೈಂದೂರು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿ ಪ್ರಿಯದರ್ಶಿನಿ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next