ಶಿರ್ವ: ಮಹಾರಾಷ್ಟ್ರದಿಂದ ಆಗಮಿಸಿ ಕ್ವಾರಂಟೈನ್‌ನಲ್ಲಿದ್ದ ಶಿರ್ವ ಗ್ರಾ.ಪಂ. ವ್ಯಾಪ್ತಿಯ 8 ಮಂದಿ ಮತ್ತು ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ಮೂವರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ವಾಸಿ ಸುತ್ತಿದ್ದ ಒಟ್ಟು 6 ಮನೆಗಳನ್ನು ಶುಕ್ರವಾರ ಸಂಜೆ ಸೀಲ್‌ಡೌನ್ ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್ ನೇತೃತ್ವದಲ್ಲಿ ಕಂದಾಯ, ಪೊಲೀಸ್ ಮತ್ತು ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅವರು ವಾಸಿಸುತ್ತಿದ್ದ ಶಿರ್ವ ಗ್ರಾ.ಪಂ. ವ್ಯಾಪ್ತಿಯ 5 ಮತ್ತು ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ 1 ಮನೆಯನ್ನು ಸೀಲ್‌ಡೌನ್ ಮಾಡಿದ್ದಾರೆ. ಮನೆಯ ಉಳಿದವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
ಶಿರ್ವ ಸೊರ್ಪು ತುಂಡುಬಲ್ಲೆಯ 30 ವರ್ಷದ ವ್ಯಕ್ತಿ, ಶಿರ್ವ ನಾಯ್ದಡ್ಡುವಿನ 38 ವರ್ಷದ ವ್ಯಕ್ತಿ, ಮಟ್ಟಾರು ಮಾಣಿಬೆಟ್ಟು ಪೊಡಿಕಂಬಳದ ಒಂದೇ ಮನೆಯ 48 ವರ್ಷದ ಮಹಿಳೆ, 59 ವರ್ಷದ ಪುರುಷ, 55 ವರ್ಷದ ಮಹಿಳೆ ಮತ್ತು 8 ವರ್ಷದ ಮಗು, ಅಟ್ಟಿಂಜೆ ಗುಡ್ಡೆಮಾರುವಿನ 55 ವರ್ಷದ ಮಹಿಳೆ ಮತ್ತು ಎಡ್ಮರು ಮೇಲ್ ಬೆಳಂಜಾಲೆಯ 49 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಇವರು ವಾಸಿಸುತ್ತಿದ್ದ ಮನೆಗಳು ಕಂಟೈನ್‌ಮೆಂಟ್ ಪ್ರದೇಶವಾಗಿದೆ.
ಮುದರಂಗಡಿ ಗ್ರಾ.ಪಂ. ವ್ಯಾಪ್ತಿಯ ಪಿಲಾರು ಹಲಸಿನಕಟ್ಟೆಯ 39 ವರ್ಷದ ಪುರುಷ, 26 ವರ್ಷದ ಮಹಿಳೆ ಮತ್ತು 3 ವರ್ಷದ ಮಗುವಿಗೆ ಸೋಂಕು ತಗಲಿದ್ದು 1 ಮನೆ ಕಂಟೈನ್ಮೆಂಟ್ ಪ್ರದೇಶವಾಗಿದೆ. ಸಂಪೂರ್ಣ ಶಿರ್ವ ಮತ್ತು ಮುದರಂಗಡಿ ಗ್ರಾಮವನ್ನು ಬಫರ್ ಝೋನ್ ಎಂದು ಘೋಷಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ.
ಕಾಪು ಕಂದಾಯ ಪರೀವೀಕ್ಷಕ ರವಿಶಂಕರ್, ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾ ಧಿಕಾರಿ ಡಾ| ಸಂತೋಷ್ ಕುಮಾರ್ ಬೈಲೂರು, ಶಿರ್ವ ಪಿಡಿಒ ಅನಂತ ಪದ್ಮನಾಭ ನಾಯಕ್, ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀಶೈಲ ಮುರಗೋಡ, ಗ್ರಾಮ ಕರಣಿಕ ವಿಜಯ್, ಮುದರಂಗಡಿ ಪಿಡಿಒ, ಆರೋಗ್ಯ ಸಹಾಯಕಿ ಕಲ್ಪನಾ, ಆಶಾ ಕಾರ್ಯಕರ್ತೆಯರು ಪರಿಶೀಲಿಸಿದ್ದಾರೆ.