Advertisement
ವಿವಾದಾತ್ಮಕ ಹಾಗೂ ಬಹಳ ಸೂಕ್ಷ್ಮ ವಿಚಾರ ವಾಗಿರುವ ಯುಸಿಸಿ ಕುರಿತು ಮಂಗಳವಾರ ಪ್ರಥಮ ಬಾರಿಗೆ ಸುಪ್ರೀಂ ಕೋರ್ಟ್‌ಗೆ ಅಫಿದವಿತ್ ಸಲ್ಲಿಸಿರುವ ಕೇಂದ್ರ ಸರಕಾರ, ಸಮಾನ ನಾಗರಿಕ ಸಂಹಿತೆಯನ್ನು ಬೆಂಬಲಿಸಿ ಹಲವು ವಾದಗಳನ್ನು ಮಂಡಿಸಿದೆ.
Related Articles
ಮಂಗಳವಾರ ಅಫಿದವಿತ್ ರೂಪದಲ್ಲಿ ತನ್ನ ನಿಲುವನ್ನು ಸರ್ವೋಚ್ಚ ನ್ಯಾಯಾಲಯದ ಮುಂದಿಟ್ಟಿರುವ ಕೇಂದ್ರ ಸರಕಾರ, “ಪ್ರಸ್ತುತ ಬೇರೆ ಬೇರೆ ಧರ್ಮಗಳು ಮತ್ತು ಪಂಗಡ ಗಳಿಗೆ ಸೇರಿರುವ ನಾಗರಿಕರು ತಮ್ಮ ಆಸ್ತಿಪಾಸ್ತಿ ಮತ್ತು ವೈವಾಹಿಕ ನೀತಿನಿಯಮಗಳ ವಿಷಯ ದಲ್ಲಿ ಭಿನ್ನವಾದ ಹಾಗೂ ಪ್ರತ್ಯೇಕವಾದ ಕಾನೂನು ಗಳನ್ನು ಅನುಸರಿಸುತ್ತಿದ್ದಾರೆ. ಆದರೆ ಈ ಕ್ರಮ ದೇಶದ ಏಕತೆಗೆ ಅಡ್ಡಿ ಉಂಟು ಮಾಡುತ್ತವೆ. ಏಕರೂಪ ನಾಗರಿಕ ಸಂಹಿತೆ ಜಾರಿ ಯಾದರೆ ಅದು ವೈಯಕ್ತಿಕ ಕಾನೂನು ಗಳನ್ನು ತೆರವುಗೊಳಿಸುತ್ತದೆ’ ಎಂದು ಹೇಳಿದೆ.
Advertisement
ಸಂವಿಧಾನದ 44ನೇ ವಿಧಿಯ ಉದ್ದೇಶವೇ “ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ’ದ ಗುರಿ ಯನ್ನು ಬಲಪಡಿಸುವುದಾಗಿದೆ. ಏಕ ರೂಪ ನಾಗರಿಕ ಸಂಹಿತೆಯ ಮಹತ್ವ ಮತ್ತು ಸೂಕ್ಷ್ಮತೆ ಯನ್ನು ಮನಗಂಡು, ವಿವಿಧ ವೈಯ ಕ್ತಿಕ ಕಾನೂನುಗಳ ಕುರಿತು ಆಳವಾದ ಅಧ್ಯ ಯನ ನಡೆಸಬೇಕಾಗುತ್ತದೆ.
ಈಗಾಗಲೇ 21ನೇ ಕಾನೂನು ಆಯೋಗವು ಈ ಬಗ್ಗೆ ವಿಸ್ತೃತವಾಗಿ ಪರಿಶೀಲಿಸಿದೆ. ಆದರೆ, 2018ರಲ್ಲೇ ಆಯೋಗದ ಅವಧಿ ಕೊನೆಗೊಂಡಿರುವ ಕಾರಣ, 22ನೇ ಕಾನೂನು ಆಯೋಗದ ಮುಂದೆ ಈ ವಿಷಯವನ್ನು ಮಂಡಿಸುವುದಾಗಿ ಸರಕಾರ ತಿಳಿಸಿದೆ.
ಪ್ರಸ್ತುತ, ವೈಯಕ್ತಿಕ ಕಾನೂನು ಎನ್ನುವುದು ಅವರ ನಂಬಿಕೆ ಮತ್ತು ಧರ್ಮದ ಆಧಾರದ ಮೇಲೆ ಜನರಿಗೆ ಅನ್ವಯಿಸುವ ಕಾನೂನುಗಳು. ಹೆಚ್ಚಿನ ಧರ್ಮಗಳು ವಿಭಿನ್ನವಾದ ವೈಯಕ್ತಿಕ ಕಾನೂನುಗಳನ್ನು ಹೊಂದಿವೆ ಮತ್ತು ಅವುಗಳು ಆಯಾ ಧರ್ಮಗ್ರಂಥಗಳಿಂದ ನಿಯಂತ್ರಿಸಲ್ಪಡುತ್ತವೆ ಎಂದು ಹೇಳಿದೆ.
ಕೋರ್ಟ್ ನಿರ್ದೇಶಿಸುವಂತಿಲ್ಲ:ಇದೇ ವೇಳೆ, ಯುಸಿಸಿ ಎನ್ನುವುದು ಚುನಾಯಿತ ಜನಪ್ರತಿನಿಧಿಗಳು ನಿರ್ಧರಿಸ ಬೇಕಾದಂಥ ವಿಚಾರ. ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿ ಶಾಸನ ರೂಪಿಸಬೇಕೇ, ಬೇಡವೇ ಎಂಬ ಬಗ್ಗೆ ಶಾಸಕಾಂಗ ನಿರ್ಧರಿಸುತ್ತದೆ. ಈ ಬಗ್ಗೆ ನ್ಯಾಯಾಲಯವು ನಿರ್ದೇಶನ ನೀಡುವಂತಿಲ್ಲ ಎಂದೂ ಅಫಿಡವಿಟ್‌ನಲ್ಲಿ ಸರಕಾರ ಉಲ್ಲೇಖಿಸಿದೆ. ಎಷ್ಟು ಅರ್ಜಿಗಳು?
ಏಕರೂಪ ನಾಗರಿಕ ಸಂಹಿತೆ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ಒಟ್ಟು 6 ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ನಾಲ್ಕು ಅರ್ಜಿಗಳನ್ನು ಬಿಜೆಪಿ ನಾಯಕ, ವಕೀಲ ಅಶ್ವಿನಿ ಉಪಾಧ್ಯಾಯ ಅವರೇ ಸಲ್ಲಿಸಿದ್ದರೆ, ಒಂದು ಅರ್ಜಿಯನ್ನು ಲುಬಾ° ಖುರೇಶಿ ಎಂಬವರು, ಮತ್ತೊಂದು ಅರ್ಜಿಯನ್ನು ಡೋರಿಸ್ ಮಾರ್ಟಿನ್ ಎಂಬವರು ಸಲ್ಲಿಸಿದ್ದರು. ಸಂವಿಧಾನದ 44ನೇ ವಿಧಿಯನ್ನು ಜಾರಿ ಮಾಡುವಂತೆ ಸರಕಾರಕ್ಕೆ ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿರ್ದೇಶಿಸಲು ಸಾಧ್ಯವಾಗುವುದಿಲ್ಲವಾದರೂ, ಯುಸಿಸಿ(ಏಕರೂಪ ನಾಗರಿಕ ಸಂಹಿತೆ) ಕರಡು ಸಿದ್ಧಪಡಿಸಲು ಸಮಿತಿಯನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ನ್ಯಾಯಾಲಯ ಸೂಚಿಸಬಹುದು ಎಂದೂ ಕೆಲವು ಅರ್ಜಿದಾರರು ವಾದಿಸಿದ್ದಾರೆ. ಏನಿದು ಯುಸಿಸಿ?
ಸಮಾನ ನಾಗರಿಕ ಸಂಹಿತೆ ಎಂದರೆ, ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಮುಂತಾದ ವಿಚಾರಗಳಲ್ಲಿ ಎಲ್ಲ ಧರ್ಮ, ಲಿಂಗ, ಜಾತಿಗಳಿಗೂ ಅನ್ವಯವಾಗುವಂತೆ ಒಂದೇ ಕಾನೂನು ಜಾರಿ ಮಾಡುವುದು. ಈ ಸಂಹಿತೆಯು ಸಂವಿಧಾನದ 44ನೇ ವಿಧಿಯಡಿ ಬರುತ್ತದೆ. ಪ್ರಸ್ತುತ ಹಿಂದೂ ವೈಯಕ್ತಿಕ ಕಾನೂನು, ಶರಿಯಾ ಕಾನೂನು, ಕ್ರಿಶ್ಚಿಯನ್ ವೈಯಕ್ತಿಕ ಕಾನೂನು ಹೀಗೆ ಆಯಾ ಧರ್ಮಗಳಿಗೆ ಪ್ರತ್ಯೇಕವಾದ ಕಾನೂನುಗಳು ಜಾರಿಯಲ್ಲಿವೆ. ಕೇಂದ್ರ ಸರಕಾರ ಹೇಳಿದ್ದೇನು?
– ವೈವಿಧ್ಯಮಯ ವೈಯಕ್ತಿಕ ಕಾನೂನು ಗಳು ದೇಶದ ಏಕತೆಗೆ ಭಂಗ ತರುತ್ತಿವೆ. ಹೀಗಾಗಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ನಮಗೆ ಒಲವಿದೆ.
– ನಾವು ಈಗಾಗಲೇ ಯುಸಿಸಿಗೆ ಸಂಬಂ ಧಿಸಿ, ಅದರ ಸೂಕ್ಷ್ಮತೆ ಮತ್ತು ಆಳ ವಾದ ಅಧ್ಯಯನವನ್ನು ಪರಿಗಣಿಸಿ ಶಿಫಾರಸು ಗಳನ್ನು ಮಾಡುವಂತೆ ಕಾನೂನು ಆಯೋಗಕ್ಕೆ ಮನವಿ ಮಾಡಿದ್ದೇವೆ.
– 22ನೇ ಕಾನೂನು ಆಯೋಗದ ವರದಿ ಬಂದ ಮೇಲೆ, ಸಂಬಂಧಪಟ್ಟ ಎಲ್ಲರೊಡನೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ.
– ಆದರೆ ಕಾನೂನು ರೂಪಿಸುವ ಸಾರ್ವಭೌಮ ಅಧಿಕಾರವಿರುವುದು ಸಂಸತ್‌ಗೆ. ಈ ವಿಚಾರದಲ್ಲಿ ಹೊರಗಿ ನವರು(ನ್ಯಾಯಾಲಯ) ಯಾವುದೇ ನಿರ್ದೇಶನ ನೀಡುವಂತಿಲ್ಲ.
– ಹೀಗಾಗಿ ಸಮಾನ ನಾಗರಿಕ ಸಂಹಿತೆಗೆ ಸಂಬಂಧಿಸಿದ ಎಲ್ಲ ಪಿಐಎಲ್‌ಗಳನ್ನೂ ಸುಪ್ರೀಂ ಕೋರ್ಟ್ ವಜಾ ಮಾಡಬೇಕು.