Advertisement

ಆಪರೇಷನ್‌ ಇಲ್ಲದೆ ವರಾಹಗಳ ವರಾತ

10:16 AM Jan 03, 2020 | Suhan S |

ಬೆಂಗಳೂರು: ನಗರದ ಐಟಿ-ಬಿಟಿ ಹಬ್‌ ಎಂದೇ ಪ್ರಸಿದ್ಧಿ ಪಡೆದಿರುವ ಬೊಮ್ಮನಹಳ್ಳಿ ವಲಯದ ವಿವಿಧ ವಾರ್ಡ್‌ಗಳಲ್ಲಿ ಈಗ ಹಂದಿಗಳ ಕಾಟ ಶುರು! ಸದಾ ದೇಶ-ವಿದೇಶದ ಜನಪ್ರತಿನಿಧಿಗಳು ಬೊಮ್ಮನಹಳ್ಳಿ ಮಾರ್ಗವಾಗಿ ನಗರಕ್ಕೆ ಬರುತ್ತಾರೆ. ಇದೇ ಮಾರ್ಗದಲ್ಲಿ ಹಂದಿಗಳ ಹಾವಳಿ ಹೆಚ್ಚುತ್ತಿರುವುದರಿಂದ ಇಲ್ಲಿನ ಸ್ಥಳೀಯರು ಆರೋಗ್ಯ ಸಮಸ್ಯೆಗಳನ್ನು ಎದುರಿಸುವ ಜತೆಗೆ ಮುಜುಗರಕ್ಕೂ ಒಳಗಾಗುತ್ತಿದ್ದಾರೆ.

Advertisement

ಬೊಮ್ಮನಹಳ್ಳಿ ವಲಯದ ಮಂಗಮ್ಮನಪಾಳ್ಯ ಹಾಗೂ ಎಚ್‌ಎಸ್‌ಆರ್‌ ಲೇಔಟ್‌ ವಾರ್ಡ್‌ಗಳಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ. ಹಂದಿಗಳ ಜತೆಗೆ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಕಾಣಸಿಗುತ್ತವೆ. ಕೆರೆಗೆ ಕೊಳಚೆ ನೀರು, ಕಟ್ಟಡ ತ್ಯಾಜ್ಯ ಸುರಿಯುವುದು, ಬಯಲು ಶೌಚಾಲಯ, ರಸ್ತೆಯ ಮೇಲೆ ಹರಿಯುವ ಒಳಚರಂಡಿ ಕೊಳಚೆ ನೀರು ಹಾಗೂ ತ್ಯಾಜ್ಯಕ್ಕೆ ಬೆಂಕಿ ಇವಿಷ್ಟು ಮಂಗಮ್ಮನ ಪಾಳ್ಯ ವಾರ್ಡ್‌ನ ಚಿತ್ರಣ!

ಈ ಸಮಸ್ಯೆಗಳಿಂದ ಇಲ್ಲಿನ ಸ್ಥಳೀಯರು ಒಂದಿಲ್ಲೊಂದು ಆರೋಗ್ಯದ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಒಳಚರಂಡಿ ವ್ಯವಸ್ಥೆಯೇ ಇಲ್ಲ: ಮಂಗಮ್ಮನಪಾಳ್ಯದ ಕೆಲ ಭಾಗದಲ್ಲಿ ಕೊಳೆಗೇರಿಗಳಿವೆ. ಇಲ್ಲಿನ ಜನರ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಾದ ಪಾಲಿಕೆ ಮತ್ತು ಸ್ಥಳೀಯ ಜನಪ್ರತಿನಿಧಿಗಳು, ಮೌನಕ್ಕೆ ಶರಣಾಗಿದ್ದಾರೆ. ಈ ವಾರ್ಡ್‌ನ ಬಹುತೇಕ ಭಾಗಗಳಲ್ಲಿ ಒಳಚರಂಡಿ ವ್ಯವಸ್ಥಯೇ ಇಲ್ಲ. ತ್ಯಾಜ್ಯ ನೀರು ಹರಿದು ಹೋಗಲು ಒಳಚರಂಡಿ ಮಾರ್ಗ ಇಲ್ಲದೆ ಇರುವುದರಿಂದ ರಸ್ತೆ ಮೂಲಕವೇ ಹೊಲಸು ನೀರು ಹರಿದು ಹೋಗುತ್ತದೆ.

ಕೆರೆಯೋ ಕಸದ ತೊಟ್ಟಿಯೋ?: ಮಂಗಮ್ಮನಪಾಳ್ಯದ ಕೆರೆ ನೋಡಿದವರು ಇದು ಕೆರೆಯೋ, ತ್ಯಾಜ್ಯದ ತೊಟ್ಟಿಯೋ ಎಂಬ ಗೊಂದಲಕ್ಕೆ ಒಳಗಾಗುತ್ತಾರೆ. ಅಷ್ಟರ ಮಟ್ಟಿಗೆ ಮಂಗಮ್ಮನ ಪಾಳ್ಯ ಕೆರೆ ಕಲುಷಿತಗೊಂಡಿದೆ. ಈ ಭಾಗದ ಸುತ್ತಮುತ್ತಲ ಪ್ರದೇಶಗಳಲ್ಲಿ ಕೊಳಚೆ ನೀರು ಹರಿದು ಹೋಗಲು ಸರ್ಮಪಕ ಒಳಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಕಲುಷಿತ ನೀರು ನೇರವಾಗಿ ಮಂಗಮ್ಮನ ಪಾಳ್ಯ ಕೆರೆ ಸೇರುತ್ತಿದೆ. ಅಲ್ಲದೆ, ಕಟ್ಟಡ ತ್ಯಾಜ್ಯವನ್ನು ಲಾರಿಗಳಲ್ಲಿ ತಂದು ಕೆರೆಗೆ ಸುರಿಯುತ್ತಿದ್ದು, ಇದನ್ನು ತಡೆಯುವಲ್ಲಿ ಪಾಲಿಕೆ ವಿಫ‌ಲವಾಗಿದೆ. ಮಂಗಮ್ಮನ ಪಾಳ್ಯ ಕೆರೆ ಒತ್ತುವರಿ ಮಾಡಿಕೊಳ್ಳುವ ಪ್ರಯತ್ನವೂ ನಿರಂತರವಾಗಿ ನಡೆಯುತ್ತಲೇ ಇದೆ.

30 ಹಂದಿಗಳ ಸೆರೆ: ಮಂಗಮ್ಮನಪಾಳ್ಯ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ 30ಕ್ಕೂ ಹೆಚ್ಚು ಹಂದಿಗಳನ್ನು ಹಿಡಿಯಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಮಂಗಮ್ಮನ ಪಾಳ್ಯ ಇನ್ನೂ ಹಂದಿಗಳ ಕಾಟದಿಂದ ಮುಕ್ತವಾಗಿಲ್ಲ. ಈ ಭಾಗದ ಹಲವು ಪ್ರದೇಶಗಳಲ್ಲಿ ಹಂದಿಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಹಿಡಿಯುವಲ್ಲಿ ಬಿಬಿಎಂಪಿ ಸಂಪೂರ್ಣವಾಗಿ ವಿಫ‌ಲವಾಗಿದೆ.

Advertisement

ಆಪರೇಷನ್‌ ವರಾಹದಲ್ಲಿ ಹಿಂದುಳಿದ ಬಿಬಿಎಂಪಿ?:  ಪಾಲಿಕೆ ವ್ಯಾಪ್ತಿಯಲ್ಲಿ ಹಂದಿಗಳ ಕಾಟವನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ಆದಾಯ ಗಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಮೂರು ವರ್ಷಗಳ ಹಿಂದೆ “ಆಪರೇಷನ್‌ ವರಾಹ’ ಯೋಜನೆ ಅನುಷ್ಠಾನಗೊಳಿಸಿತ್ತು. ಈ ಯೋಜನೆಯಡಿ ಗುತ್ತಿಗೆದಾರರು ಹಂದಿಗಳನ್ನು ಹಿಡಿದು ತೂಕದ ಆದಾರದ ಮೇಲೆ ಪಾಲಿಕೆಗೆ ಹಣ ನೀಡುತ್ತಿದ್ದಾರೆ. ಅದರಂತೆ ತಲಾ ಒಂದು ಕೆ.ಜಿ.ಗೆ 70 ರೂ. ನಿಗದಿ ಮಾಡಲಾಗಿದೆ. ಇದರಿಂದ ಪಾಲಿಕೆಗೆ ಹಂದಿಗಳ ಕಾಟವೂ ತಪ್ಪಿ, ಆದಾಯವೂ

ಸಂದಾಯವಾಗುತ್ತಿದೆ. ಆದರೆ, ಇತ್ತೀಚೆಗೆ ಆಪರೇಷನ್‌ ವರಾಹ ಯೋಜನೆಯಡಿ ಬಿಬಿಎಂಪಿ ಹೇಳಿಕೊಳ್ಳುವ ಸಾಧನೆ ಮಾಡಿಲ್ಲ. 2018ನೇ ಸಾಲಿನಲ್ಲಿ ಬಿಬಿಎಂಪಿ ಆಪರೇಷನ್‌ ವರಾಹ ಯೋಜನೆಯಡಿ 90 ಹಂದಿಗಳನ್ನು ಹಿಡಿದಿದ್ದು, ಇವುಗಳ ಒಟ್ಟು ತೂಕ 1,280 ಕೆ.ಜಿ ಇದ್ದು, ಪಾಲಿಕೆಗೆ 89,600 ರೂ. ಸಂದಾಯವಾಗಿದೆ. ಇನ್ನು 2019ರಲ್ಲಿ 100ಕ್ಕೂ ಹೆಚ್ಚು ಹಂದಿಗಳನ್ನು ಹಿಡಿಯಲಾಗಿದ್ದು, 1.20 ಲಕ್ಷ ರೂ. ಆದಾಯ ಬಂದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೂ ಹೊರವಲಯದಲ್ಲಿ ಹಂದಿಗಳ ಕಾಟ ಕಡಿಮೆಯಾಗಿಲ್ಲ. ಈ ನಿಟ್ಟಿನಲ್ಲಿ ಆಪರೇಷನ್‌ ವರಾಹ ಯೋಜನೆಯನ್ನು ಮತ್ತಷ್ಟು ಚುರುಕುಗೊಳಿಸಬೇಕಾಗಿದೆ.

ಈ ಭಾಗದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದು ಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಮುಂದಿನ ವಾರ ಸ್ಥಳ ಪರಿಶೀಲಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು.-ಅನ್ಬುಕುಮಾರ್‌, ಬಿಬಿಎಂಪಿ ವಿಶೇಷ ಆಯುಕ್ತ ಬೊಮ್ಮನಹಳ್ಳಿ

 

ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next