Advertisement

ಪಿಗ್ಮಿ ಡೆಪಾಸಿಟ್‌

06:56 PM Nov 17, 2019 | Sriram |

“ಹನಿ ಹನಿಗೂಡಿದರೆ ಹಳ್ಳ- ತೆನೆ ತೆನೆ ಕೂಡಿದರೆ ಬಳ್ಳ’ (Little drops of water make a mighty ocean)ಎನ್ನುವ ಗಾದೆಯ ಆಧಾರದ ಮೇಲೆ ಈ ಠೇವಣಿಯನ್ನು ಪ್ರಾರಂಭಿಸಲಾಗಿದೆ. ಈ ಠೇವಣಿಯ ಮಹಾಶಿಲ್ಪಿ, ದಿವಂಗತ ಡಾ. ಟಿ.ಎಂ.ಎ. ಪೈ ಅವರು, ಭಾರತದಲ್ಲಿ ಮೊತ್ತ ಮೊದಲು, 1928ರಲ್ಲಿ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಪಿಗ್ಮಿ ಠೇವಣಿಯನ್ನು ಪ್ರಾರಂಭಿಸಲಾಯಿತು. ಅಂದಿನ ನಾಲ್ಕಾಣೆ (ಇಂದಿನ ಇಪ್ಪತ್ತೈದು ಪೈಸೆ) ಈ ಖಾತೆಯ ಪ್ರಾರಂಭಿಕ ಠೇವಣಿಯಾಗಿತ್ತು (Initial Deposit). “ಉಳಿತಾಯ ಶ್ರೀಮಂತರಿಂದ ಮಾತ್ರ ಸಾಧ್ಯ. ಮಧ್ಯಮ ಅಥವಾ ಕೆಳವರ್ಗದವರಿಗೆ ಉಳಿತಾಯ ಮಾಡಲು ಸಾಧ್ಯವೇ ಇಲ್ಲ’ ಎನ್ನುವ ಮಾತನ್ನು ಹುಸಿ ಮಾಡಿ ತೋರಿಸಿದ ಪ್ರಪ್ರಥಮ ಬ್ಯಾಂಕು ಸಿಂಡಿಕೇಟ್‌ ಬ್ಯಾಂಕ್‌. ಪಿಗ್ಮಿ ಠೇವಣಿಯನ್ನು ಪರಿಚಯಿಸುವುದರ ಮುಖಾಂತರ, ಯಾವ ವ್ಯಕ್ತಿಯೂ ಬ್ಯಾಂಕು ಠೇವಣಿ ಹೊಂದಲು ಸಣ್ಣ ವ್ಯಕ್ತಿಯಾಗಲಾರ (No man is too small for bank account) ಎನ್ನುವ ಮೂಲತತ್ವವು ಈ ಠೇವಣಿಯಲ್ಲಿ ಅಡಕವಾಗಿದೆ. ಇಂದು ಹಲವು ಬ್ಯಾಂಕುಗಳು, ಮುಖ್ಯವಾಗಿ ಸಹಕಾರಿ ಬ್ಯಾಂಕುಗಳು ಹಾಗೂ ಸಹಕಾರಿ ಸಂಘಗಳು ಪಿಗ್ಮಿ ಠೇವಣಿ ಸಂಗ್ರಹಿಸುತ್ತಿವೆ. ಈ ಠೇವಣಿಯನ್ನು ಬೇರೆ ಬೇರೆ ಹಣಕಾಸು ಸಂಸ್ಥೆಗಳು ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತವೆ. ಆದರೂ, ಈ ಠೇವಣಿಯ ಮೂಲ ತತ್ವ ಒಂದೇ ಆಗಿರುತ್ತದೆ.

Advertisement

ಈ ಠೇವಣಿಯ ತತ್ವ ತುಂಬಾ ಸರಳ. ಎಲ್ಲಾ ವರ್ಗದವರೂ ಪಿಗ್ಮಿ ಠೇವಣಿ ಮಾಡಬಹುದು. ವಿಶೇಷವಾದ ಸಂಗತಿಯೇನೆಂದರೆ, ಈ ಖಾತೆಗೆ ಹಣ ಜಮಾ ಮಾಡಲು ಠೇವಣಿದಾರರು ಬ್ಯಾಂಕಿಗೆ ಹೋಗುವ ಅವಶ್ಯಕತೆ ಇಲ್ಲ. ಬ್ಯಾಂಕಿನ ಅಧಿಕೃತ ಏಜೆಂಟರು ಠೇವಣಿದಾರರ ಮನೆ ಬಾಗಿಲಿಗೆ, ಗ್ರಾಹಕರು ಹೇಳುವ ಸಮಯಕ್ಕೆ ಬಂದು ಕೊಟ್ಟಷ್ಟು ಪಿಗ್ಮಿ ಹಣ ಸ್ವೀಕರಿಸಿ, ತಕ್ಷಣವೇ ಸ್ವೀಕರಿಸಿದ್ದಕ್ಕೆ ರಶೀದಿ ಕೊಡುತ್ತಾರೆ. ಉಳಿತಾಯದ ದೃಷ್ಟಿಯಿಂದ ಪ್ರತಿ ದಿವಸ ಹಣ ಸಂಪಾದಿಸುವ ವ್ಯಕ್ತಿಗಳಿಗೆ (ಉದಾಹರಣೆಗಾಗಿ ವೈದ್ಯರು, ವಕೀಲರು, ಚಾರ್ಟರ್ಡ್‌ ಅಕೌಂಟೆಂಟ್ಸ್‌, ವ್ಯಾಪಾರಿಗಳು, ಸ್ವಂತ ಉದ್ಯೋಗ ಮಾಡುವವರು) “ಪಿಗ್ಮಿ ಠೇವಣಿ’ ಒಂದು ವರದಾನ. ದಿನಗೂಲಿ ಮಾಡುವವರು ಅಲ್ಪಸ್ವಲ್ಪ ಹಣವನ್ನು ಈ ಠೇವಣಿಯಲ್ಲಿ ತೊಡಗಿಸುತ್ತಾ ಬಂದಲ್ಲಿ, ವರ್ಷಾಂತ್ಯಕ್ಕೆ ಒಂದು ಉತ್ತಮ ಮೊತ್ತವನ್ನು ಪಡೆಯಬಹುದು.

ಹಲವು ಹಣಕಾಸು ಸಂಸ್ಥೆಗಳು ತಾವು ನೀಡಿರುವ ಸಾಲಕ್ಕನುಗುಣವಾಗಿ ಸಾಲಗಾರರಿಂದ ಪಿಗ್ಮಿ ಠೇವಣಿಯನ್ನು ಪ್ರಾರಂಭಿಸಲು ಸೂಚಿಸುತ್ತವೆ. ಹೀಗೆ ಸಂಗ್ರಹಿಸಿದ ಪಿಗ್ಮಿ ಹಣವನ್ನು ವರ್ಷದ ಅಂತ್ಯದಲ್ಲಿ ಸಾಲಕ್ಕೆ ಜಮಾ ಮಾಡಿಕೊಳ್ಳುತ್ತವೆ.

ಒಂದು ಕುಟುಂಬದ ಆರ್ಥಿಕ ಶಿಸ್ತು ಕಾಪಾಡಿಕೊಂಡು ಬರುವಲ್ಲಿ ಮಹಿಳೆಯರ ಪಾತ್ರ ಬಹು ದೊಡ್ಡದು. ಪಿಗ್ಮಿ ಠೇವಣಿಯ ಮೂಲ ತತ್ವದ ಸದುಪಯೋಗ ಪಡೆಯುವಲ್ಲಿ ಗೃಹಿಣಿಯರ ಸಹಕಾರ ಬಹಳ ಮುಖ್ಯ. ಇಂದು ಹಲವು ಗೃಹಿಣಿಯರು ಮನೆ ಖರ್ಚಿಗೆ ಕೊಟ್ಟ ಹಣದಲ್ಲಿ ಎಷ್ಟಾದರಷ್ಟು ಹಣ ಉಳಿಸಿ, ಗುಟ್ಟಾಗಿ ಪಿಗ್ಮಿ ತುಂಬುವುದನ್ನು ಕಾಣುತ್ತಿರುತ್ತೇವೆ. ಈ ಪ್ರವೃತ್ತಿ ಮುಖ್ಯವಾಗಿ ಪಿಗ್ಮಿಯ ಉಗಮ ಸ್ಥಾನವಾದ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ವರ್ಗಗಳ ಮಹಿಳೆಯರಲ್ಲಿ ಹಾಸುಹೊಕ್ಕಾಗಿದೆ ಹಾಗೂ ರಕ್ತಗತವಾಗಿದೆ. ಹೆಚ್ಚಿನ ವಿಷಯಗಳಲ್ಲಿ ದಕ್ಷಿಣಕನ್ನಡವೇ ಮುಂಚೂಣಿಯಲ್ಲಿ ಇರುವುದಕ್ಕೆ ಮುಖ್ಯವಾಗಿ ಅಲ್ಲಿನ ಮಹಿಳೆಯರ ಆರ್ಥಿಕ ಶಿಸ್ತೇ ಕಾರಣ. ಈ ಸಣ್ಣ ಉಳಿತಾಯದಿಂದ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ, ಬಂಗಾರದ ಒಡವೆ, ಟಿ.ವಿ. ಫೋನ್‌ ಹಾಗೂ ಇತರೆ ಸೌಕರ್ಯಗಳನ್ನು ಹೊಂದಲು ಸಾಧ್ಯವಾಗುತ್ತದೆ.

– ಉದಯ್‌ ಪುರಾಣಿಕ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next