ಯಾವುದೇ ಸಿನಿಮಾದಲ್ಲಿ ಪಕ್ಷಿ, ಪ್ರಾಣಿಗಳನ್ನು ಸೆರೆಹಿಡಿಯಬೇಕಾದರೆ ತುಸು ಕಷ್ಟದ ಕೆಲಸ. ಅದರಲ್ಲೂ ಸಾಕಷ್ಟು ತಾಳ್ಮೆ ಇರಲೇಬೇಕು. ಪಕ್ಷಿಗಳ ದೃಶ್ಯ ಸೆರೆಹಿಡಿಯುವುದು ಮತ್ತೂಂದು ಸಾಹಸವೇ ಸರಿ. ಅಂಥದ್ದೊಂದು ಸಾಹಸವನ್ನು ನಿರ್ದೇಶಕ ಸುನಿ “ಬಜಾರ್’ನಲ್ಲಿ ಮಾಡಿದ್ದಾರೆ. ಹೌದು, “ಬಜಾರ್’ ಚಿತ್ರದಲ್ಲಿ ಪಾರಿವಾಳ ಹೈಲೈಟ್. ಇಲ್ಲಿ ಪಾರಿವಾಳಗಳನ್ನು ಇಟ್ಟುಕೊಂಡೇ ಸುನಿ, ಹೊಸದೊಂದು ಲವ್‌ಸ್ಟೋರಿ ಹೇಳಹೊರಟಿದ್ದಾರೆ.
ಈ ಚಿತ್ರದ ವಿಶೇಷವೆಂದರೆ, ಪಾರಿವಾಳ ರೇಸ್. ಹೌದು, ಅದು ಚಿತ್ರದ ಪ್ರಮುಖ ಭಾಗ ಎಂಬುದು ನಿರ್ದೇಶಕರ ಮಾತು. ಇಷ್ಟಕ್ಕೂ ಸಿನಿಮಾದಲ್ಲಿ ಪಾರಿವಾಳವನ್ನು ಹೆಚ್ಚು ಕಾಲ ಗ್ರಾಫಿಕ್ಸ್ ತೋರಿಸಲು ಸಾಧ್ಯವಿಲ್ಲ. ಕಥೆಗೆ ಪೂರಕವಾಗಿ, ನೈಜವಾಗಿದ್ದರೆ ಅದರ ಎಫೆಕ್ಟ್ ಹೊಸ ರೀತಿಯಲ್ಲಿರುತ್ತೆ ಎಂಬ ಕಾರಣಕ್ಕೆ, ಸುನಿ ಪಾರಿವಾಳಗಳ ಅಡ್ಡದಲ್ಲೇ ಚಿತ್ರೀಕರಣ ಮಾಡಿದ್ದಾರೆ. ಬೆಂಗಳೂರಿನ ಪ್ರಕಾಶನಗರದಲ್ಲಿ ಪಾರಿವಾಳ ಅಡ್ಡವಿದೆ.
ಅಲ್ಲೇ “ಬಜಾರ್’ ಚಿತ್ರದ ಪ್ರಮುಖ ಭಾಗವನ್ನು ಚಿತ್ರೀಕರಿಸಿದ್ದಾರೆ. ಪಾರಿವಾಳಗಳನ್ನೆಲ್ಲಾ ಹಿಡಿದು ಕೂರಿಸಿ, ಚಿತ್ರೀಕರಿಸುವುದು ಸುಲಭವಂತೂ ಅಲ್ಲ, ಯಾಕೆಂದರೆ, ಪಾರಿವಾಳ ಸುಮ್ಮನೆ ಕೂತಲ್ಲಿ ಕೂರಲ್ಲ. ಸೂಕ್ಷ್ಮ ಸ್ವಭಾವ ಇರುವಂಥವು. ಅವುಗಳಿಗೆ ಮೂಡ್ ಬಂದಾಗ ಮಾತ್ರ ಹಾರಾಡುತ್ತವೆ. ಹಾಗೆ, ಹಾರು ಸಮಯದಲ್ಲಿ ಮಾತ್ರ ರೇಸಿನ ಚಿತ್ರೀಕರಣ ಮಾಡಿದ್ದಾರೆ ಸುನಿ. ಅಂದಹಾಗೆ, ಆ ಸನ್ನಿವೇಶಕ್ಕಾಗಿಯೇ ಅವರು ಗಂಟೆಗಟ್ಟಲೆ ಕ್ಯಾಮೆರಾ ಇಟ್ಟು ಕಾದಿದ್ದಾರಂತೆ. ಅದೇನೆ ಇರಲಿ, ಸುನಿ, ಈ ಚಿತ್ರದಲ್ಲಿ ಪಾರಿವಾಳ ರೇಸ್ ದೃಶ್ಯವನ್ನು ತುಂಬಾ ಸೊಗಸಾಗಿ ಕಟ್ಟಿಕೊಟ್ಟಿರುವ ಖುಷಿಯಲ್ಲಿದ್ದಾರೆ.
ಈ ವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರುತ್ತಿದೆ. ಧನ್ವೀರ್ ಚಿತ್ರದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇದು ಇವರ ಮೊದಲ ಸಿನಿಮಾ. ಈಗಾಗಲೇ ಟ್ರೇಲರ್ ಜೋರು ಸುದ್ದಿ ಮಾಡಿದ್ದು, ಸಿನಿಮಾ ನೋಡುವ ಕುತೂಹಲ ಕೆರಳಿಸಿದೆ. ಚಿತ್ರದಲ್ಲಿ ಧನ್ವೀರ್‌ಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಲೋಹಿತಾಶ್ವ ಪ್ರಮುಖ ಪಾತ್ರ ಮಾಡಿದ್ದಾರೆ. ತಿಮ್ಮೇಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ.