Advertisement

ಚಿತ್ರ- ಕೃಪೆ: ಕ್ಯಾಮೆರಾ!

06:00 AM Sep 11, 2018 | |

ಫೋಟೋಗ್ರಫಿ ಎನ್ನುವುದು ಬದುಕಿನ ಜರ್ನಿಯಲ್ಲಿ ನೆನಪುಗಳನ್ನು ಯಥಾವತ್ತಾಗಿ ತುಂಬಿಕೊಂಡು ಜತನವಾಗಿಟ್ಟುಕೊಂಡು ಮತ್ತೆ ಮತ್ತೆ ತೆರೆದು ನೋಡುವಂತೆ ಮಾಡುತೆ.  ಹಾಗಾದರೆ, ಕ್ಯಾಮೆರಾ ಒಂದಿದ್ದರೆ ಸಾಕೆ? ನೋ! ಬೆಲೆಬಾಳುವ ಕ್ಯಾಮೆರಾ ಹಿಡಿದು ಹೊರಟ ಮಾತ್ರಕ್ಕೆ ಅದ್ಭುತ ಫೋಟೊಗಳು ನಿಮ್ಮವಾಗುತ್ತವೆ ಎನ್ನಲಾಗದು. ಹಾಗಾದರೆ, ಫೋಟೋಗ್ರಫಿಗೆ ಮತ್ತೆ ಇನ್ನೇನು ಬೇಕು?

Advertisement

“ಏನು ನಿನ್ನ ಹಾಬಿ?’ ಅಂತ ಬಹುತೇಕರನ್ನು ಕೇಳಿದಾಗ “ಹಾಡು ಹೇಳ್ತೀನಿ’, “ಟಿ.ವಿ. ನೋಡ್ತೀನಿ’, “ಓದಿ¤àನಿ’, “ಬರೀತೀನಿ’ ಅನ್ನುವ ಅವೇ ಉತ್ತರಗಳ ಮಧ್ಯೆ ಯಾರಾದರೂ “ಫೋಟೊಗ್ರಫಿ ಮಾಡ್ತೀನಿ’ ಅಂದಾಗ ನನ್ನ ಕಂಗಳು ಅರಳುತ್ತವೆ. ಏಕೆಂದರೆ, ಫೋಟೋಗ್ರಫಿಯ ಆಳ ಅಗಲವೇ ಅಂಥದ್ದು. ಬದುಕಿನ ಜರ್ನಿಯಲ್ಲಿ ನೆನಪುಗಳನ್ನು ಯಥಾವತ್ತಾಗಿ ತುಂಬಿಕೊಂಡು ಜತನವಾಗಿಟ್ಟುಕೊಂಡು ಮತ್ತೆ ಮತ್ತೆ ತೆರೆದು ನೋಡುವಂತೆ ಮಾಡುತ್ತೆ ಫೋಟೋಗ್ರಫಿ. ಕಾಡುವ ನೆನಪುಗಳು ಎಷ್ಟರಮಟ್ಟಿಗೆ ಹಸಿಯಾಗಿವೆ ಎಂಬುದು ಫೋಟೋ ಕ್ಲಿಕ್ಕಿಸಿದವನ ಚಾಕಚಕ್ಯತೆಯನ್ನು ಅವಲಂಬಿಸಿರುತ್ತದೆ. 

ಕ್ಯಾಮೆರಾ ಎಂಬ ಮಾಯೆ! 
ಸುಣ್ಣದ ಡಬ್ಬಿಯಂಥ ಪೆಟ್ಟಿಗೆ ಕ್ಯಾಮೆರಾದಿಂದ ಹೈ ಎಂಡ್‌ ದುಬಾರಿಯ ಕ್ಯಾಮೆರಾಗಳವರೆಗೂ ಬಂದು ತಲುಪಿದ್ದೇವೆ. ಕ್ಯಾಮೆರಾ ಮಾತಾಡುತ್ತದೆ. ಹಠ ಹಿಡಿಯುತ್ತದೆ. ನಮ್ರ ಶಿಷ್ಯನಂತೆಯೂ ವರ್ತಿಸುತ್ತದೆ. ಚೆಲುವನ್ನು ಜೀವ ಸಮೇತ ಹಿಡಿದಿಟ್ಟುಕೊಂಡು ಬೀಗುತ್ತದೆ. 

  ನಿಮಗೆ ಗೊತ್ತೆ, ಅದೆಷ್ಟು ಬಗೆಯ ಕ್ಯಾಮೆರಾಗಳಿದ್ದಾವೆ ಎಂಬುದು!? ಒಂದೊಂದು ವಿಷಯಕ್ಕೆ, ಸಂದರ್ಭಕ್ಕೆ ಒಂದೊಂದು ತರಹದ ಕ್ಯಾಮೆರಾ ಬೇಕು. ಮದುವೆ ಗಂಡು ಹೆಣ್ಣಿನ ಚಿತ್ರ ತೆಗೆಯುವ ಕ್ಯಾಮೆರಾಕ್ಕೆ ಹಾರಾಡುವ ಪಕ್ಷಿಗಳು ಮಾತು ಕೇಳುವುದಿಲ್ಲ. “ನಿನ್ನ ಬಳಿ ಯಾವ ಕ್ಯಾಮೆರಾವಿದೆ ಹೇಳು ನಿನ್ನ ಫೋಟೋಗ್ರಫಿಯ ಅಭಿರುಚಿಯನ್ನು ಹೇಳಬಲ್ಲೆ’ ಎಂಬ ಹೊಸ ಗಾದೆಯನ್ನು ಗೆಳೆಯ ಕಟ್ಟಿಬಿಟ್ಟಿದ್ದಾನೆ. 

 ಹಾಗಾದರೆ, ಕ್ಯಾಮೆರಾ ಒಂದಿದ್ದರೆ ಸಾಕೆ? ನೋ, ಯಶಸ್ವಿ ಫೋಟೊಗ್ರಾಫ‌ರ್‌ನನ್ನು ಕೇಳಿ ನೋಡಿ. ಬೆಲೆಬಾಳುವ ಕ್ಯಾಮೆರಾ ಹಿಡಿದು ಹೊರಟ ಮಾತ್ರಕ್ಕೆ ಅದ್ಭುತ ಫೋಟೊಗಳು ನಿಮ್ಮವಾಗುತ್ತವೆ ಎಂದು ಬೀಗುವಂತಿಲ್ಲ. ಫೋಟೊ ತೆಗೆಯುವವನ ಕೈ ಚಳಕ, ಅವನ ಕಲ್ಪನೆ, ಕಣ್ಣೋಟ, ನೆರಳು ಬೆಳಕಿನ ಜ್ಞಾನ ಎಲ್ಲವೂ ಬೇಕಾಗುತ್ತವೆ. 

Advertisement

ತರಬೇತಿಯೇ ಬೇಕೆಂದಿಲ್ಲ…
ಇತ್ತೀಚಿಗೆ ಫೋಟೋಗ್ರಫಿ ಹೇಳಿಕೊಂಡುವ ಅನೇಕ ದೊಡ್ಡದೊಡ್ಡ ತರಬೇತಿ ಕೇಂದ್ರಗಳು ಆರಂಭವಾಗಿವೆ. ತರಬೇತಿಯಲ್ಲಿ ನಿಮಗೆ ಕ್ಯಾಮೆರಾ ಬಳಕೆಯ ಬಗ್ಗೆ ಹೇಳಿಕೊಡಬಹುದಾದರೂ ಅಭಿರುಚಿಯನ್ನು ಕಲಿಸಲಾರರು. ಕಲ್ಪನೆಯನ್ನು ಹೇಳಿಕೊಡಲಾರರು. ಅದು ನಿಮ್ಮದೇ ಅನುಭವದಲ್ಲಿ ಬರಬೇಕು. ಸಮಯ ಹಣ ತಾಳ್ಮೆ ಎಲ್ಲವನ್ನು ಅಡವಿಟ್ಟು ಅಲೆಯಬೇಕು. ಸಾಗಿದಷ್ಟು ದಾರಿ ಸಲೀಸು ಅನ್ನುವ ಹಾಗೆ ಫೋಟೊಗ್ರಫಿಯಲ್ಲಿ ಕೈ ಪಳಗಿದಷ್ಟು ಸೊಗಸು. 

ಹಾಬಿಯಾ? ವೃತ್ತಿಯಾ?
ಫೋಟೋಗ್ರಫಿ ಕೇವಲ ಹಾಬಿಯಷ್ಟೇ ಅಲ್ಲ. ಕೆಲವರ ಪಾಲಿಗೆ ಅನ್ನ ಕೊಡುವ ವೃತ್ತಿಯೂ ಹೌದು. ಫ‌ಳಗಿದ ಕೈಗಳಿಗೆ ಹೆಚ್ಚು ಲಾಭ ಸಿಗುತ್ತದೆ. ಹೆಸರೂ ಸಿಗುತ್ತದೆ. ಮದುವೆಯ ಫೋಟೋಶೂಟ್‌, ಫ್ಯಾಷನ್‌ ಮೇಳ, ಮಕ್ಕಳ ಫೋಟೋಗ್ರಫಿಗೆ ಲಕ್ಷ ಲಕ್ಷ ಎಣಿಸಲಾಗುತ್ತದೆ. ಫ್ಯಾಷನ್‌ ಜಗತ್ತಂತೂ ಫೋಟೋಗ್ರಫಿಯ ಮೇಲೆಯೆ ನಿಂತಿದೆಯೇನೋ ಅನಿಸುತ್ತದೆ. 

  ನಮ್ಮ ನಡುವೆ ವೃತ್ತಿಪರ ಫೋಟೋಗ್ರಾಫ‌ರ್‌ಗಳಿಗಿಂತ ಹವ್ಯಾಸಿಗಳೇ ಹೆಚ್ಚಿದ್ದಾರೆ. ಅವರದು ಖುಷಿಗಾಗಿನ ಕಾರ್ಯ. ತಾವು ಮಾಡುವ ವೃತ್ತಿಯಾಚೆ ಇದನ್ನು ಹುಡುಕಿಕೊಂಡಿರುತ್ತಾರೆ. ಅದಕ್ಕಾಗಿ ಸಮಯ ಮೀಸಲಿಟ್ಟುಕೊಂಡು ಎಲ್ಲೆಂದರಲ್ಲಿ ಅಲೆಯುತ್ತಾರೆ. ಜಗತ್ತಿನ ಕಣ್ಣಿಗೆ ಕಾಣಿಸಿದ್ದನ್ನು ಹುಡುಕುತ್ತಾರೆ. ಚಿತ್ರಗಳೊಂದಿಗೆ ಖುಷಿಯನ್ನು ಬಾಚಿಕೊಳ್ಳುತ್ತಾನೆ. ಅವುಗಳನ್ನು ತಂದು ಜಗತ್ತಿನ ಮುಂದಿಡುತ್ತಾನೆ. ಉತ್ತಮ ಫೋಟೊಗಳಿಗೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದವರೆಗೂ ವಿವಿಧ ಸಂಘಟನೆಗಳು ಪ್ರದರ್ಶನದ ವೇದಿಕೆ ಒದಗಿಸುತ್ತವೆ. ಪ್ರಶಸ್ತಿಗಳು ಕೂಡ ಸಲ್ಲುತ್ತವೆ. 

ಕ್ಯಾಮೆರಾ ಕಣ್ಣಿನ ಭಾವಗೀತೆ
ಕ್ಯಾಮೆರಾ ಹಿಡಿದವನ ಪ್ರತಿಯೊಬ್ಬನದು ಕವಿ ಮನಸೇ! ಕವನವೊಂದು ಹಠಕ್ಕೆ ಬಿದ್ದರೆ ಹುಟ್ಟುವುದಿಲ್ಲ. ಅಚಾನಕ್ಕಾಗಿ ಹೊಳೆಯುವ ಸಡಗರವದು. ನಂತರ ಅದಕ್ಕೆ ಸ್ವತಃ ಕವಿಯೇ ಮಾರು ಹೋಗುತ್ತಾನೆ. ತನ್ನ ಸಾಹಿತ್ಯವೊಂದರಲ್ಲಿ ನಗು ಅಳು ಖುಷಿ ಎಲ್ಲವೂ ಹದವಾಗಿ ಬೆರೆಯಬೇಕು ಎಂದು ಒಬ್ಬ ಬರಹಗಾರ ಬಯಸುತ್ತಾನೆ. ಹಾಗೆಯೇ ಫೋಟೋಗ್ರಾಫ‌ರ್‌ ಪ್ರತಿಯೊಂದು ಫೋಟೊವನ್ನು ತನ್ನದೊಂದು ಕವನವೆಂದು ಭಾವಿಸುತ್ತಾನೆ. ಹಾಗೆ ತೆಗಯುವ ಒಂದೊಂದು ಫೋಟೋ ಕೂಡ ಒಂದೊಂದು ಭಾವಗೀತೆ. ಎಷ್ಟೊ ಬಾರಿ ಅವುಗಳನ್ನು ಮೈ ಮರೆತು ನೋಡುತ್ತಾ ಕಳೆದುಹೋಗುತ್ತೇವೆ. “ಅಯ್ಯೋ ಹೌದಲ್ವ, ಇದು ನಮ್ಮ ಕಣ್ಣಿಗೆ ಬಿದ್ದರೂ ಈ ದೃಷ್ಟಿಯಲ್ಲಿ ನೋಡಲಾಗಲಿಲ್ಲವಲ್ಲ’ ಅಂತನ್ನಿಸುತ್ತದೆ. 

ಮೊಬೈಲ್‌ನಿಂದಲೇ ಆರಂಭಿಸಿ…
ಮೊಬೈಲ್‌ ಈಗ ಕೇವಲ ಕರೆ ಮಾಡುವ ವಸ್ತುವಲ್ಲ. ಇತ್ತೀಚಿಗಂತೂ ಕ್ಯಾಮೆರಾಗಳ ಅಬ್ಬರ. ಮೊಬೈಲ್‌ ಕಂಪನಿಗಳು ಫೋಟೊಗಾಗಿಯೇ ಅದ್ಭುತವಾದ ಕ್ಯಾಮೆರಾಗಳ ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಮೊದಲಿನಂತೆ ಹಾಬಿಗಾಗಿ ತೆಗೆಯಲು ಹೊರಟವನಿಗೆ ಕ್ಯಾಮೆರಾ ಕೊಳ್ಳಲೇ ಬೇಕಾದ ಅವಶ್ಯಕತೆ ಇಲ್ಲ. ಅದನ್ನು ಮೊಬೈಲ್‌ ಸಾಧ್ಯವಾಗಿಸುತ್ತದೆ. ಇದು ಉತ್ತಮ ಬೆಳವಣಿಗೆಯೇ ಆದರೂ ಸಾಲುವುದಿಲ್ಲ. ಅಭಿರುಚಿಯನ್ನು ಪ್ರೋತ್ಸಾಹಿಸುವ ಕೆಲಸವನ್ನಂತೂ ಮೊಬೈಲ್‌ ಮಾಡುತ್ತಿದೆ. ಮುಂದೆ ಅವರೊಳಗೊಬ್ಬ ಯಶಸ್ವಿ ಫೋಟೋಗ್ರಾಫ‌ರ್‌ ರೂಪುಗೊಳ್ಳಬಹುದು. 

ಫೋಟೋಗ್ರಫಿ ಸಂಭ್ರಮದ ನಶೆ 
ದುಡ್ಡು, ಸಮಯ, ಶ್ರಮ, ಕನಸು- ಎಲ್ಲವನ್ನೂ ಮುಲಾಜಿಲ್ಲದೇ ನಾನು ಫೋಟೊಗ್ರಫಿಯ ಮೇಲೆ ಸುರಿಯುತ್ತೇನೆ. ಅದುಕರೆದುಕೊಂಡು ಹೋದಲ್ಲೆಲ್ಲಾ ಬೇಷರತ್‌ ಆಗಿ ಅಲೆಯುತ್ತೇನೆ. ಬದುಕಿನಲ್ಲಿ ನನಗೆ ಖುಷಿ ಅಂತ ಇದೆಯೆನ್ನುವುದಾದರೆ ಅದು ಈ ನಶೆಯಲ್ಲಿ! ಫೋಟೋಗ್ರಫಿ ನನ್ನ ಜೀವ. ಬದುಕು ಹೇಗೆಲ್ಲಾ ಇದೆ ಎಂಬುದು ಕ್ಯಾಮೆರಾ ಕಣ್ಣಿನಲ್ಲಿ ಅರ್ಥ ಮಾಡಿಕೊಂಡಿದ್ದೇನೆ. ಹೊರಗೆ ಹೋದಾಗ, ಕೈಯಲ್ಲಿ ಕ್ಯಾಮೆರಾ ಇಲ್ಲದಿದ್ದರೆ, ಗಲಿಬಿಲಿಯಾಗುತ್ತೇನೆ.
ಮಲ್ಲಿಕಾರ್ಜುನ್‌ ಡಿ.ಜಿ., ಶಿಡ್ಲಘಟ್ಟ

– ಸದಾಶಿವ್‌ ಸೊರಟೂರು

Advertisement

Udayavani is now on Telegram. Click here to join our channel and stay updated with the latest news.

Next