ವಿಜಯಪುರ: ಕಲಾವಿದನ ಒಂದು ಕಲಾಕೃತಿ ಒಬ್ಬ ಕಾದಂಬರಿ ಸೇರಿದಂತೆ ಇತರೆ ಸಾಹಿತ್ಯ ಕೃತಿಗಳಷ್ಟೇ ಶ್ರೇಷ್ಠತೆ ಹಾಗೂ ಮೌಲಿಕತೆ ಪಡೆದಿದೆ. ಚಿತ್ರ ಕಲಾವಿದ ತನ್ನ ಸುತ್ತಮುತ್ತಲಿನ ಅನುಭವವನ್ನು ತನ್ನದೇ ವಿಶಿಷ್ಟ ಜ್ಞಾನ, ಶೈಲಿಯಲ್ಲಿ ಚಿತ್ರಕಲಾ ವಸ್ತು-ವಿಷಯದ ಅಭಿವ್ಯಕ್ತಿಸುತ್ತಾನೆ ಎಂದು ಕಲಬುರಗಿಯ ಹಿರಿಯ ವರ್ಣಚಿತ್ರ ಕಲಾವಿದ ಮಲ್ಲಿಕಾರ್ಜನ ಶೆಟ್ಟಿ ಅಭಿಪ್ರಾಯಪಟ್ಟರು.
ನಗರದಲ್ಲಿ ವಿಜಯಪುರದ ಪ್ರವಾಸೋದ್ಯಮ ಇಲಾಖೆಯ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ಕಲಾವಿದ ನಿಂಗನಗೌಡ ಪಾಟೀಲರ ಏಕವ್ಯಕ್ತಿ ಕಲಾಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವರ್ಣಗಳ ಮೂಲಕ ವಿಷಯ ವರ್ಣಣೆ ಮಾಡುವ ಶಕ್ತಿ ಚಿತ್ರಕಲಾವಿದನಿಗೆ ಮಾತ್ರ ಇದೆ ಎಂದರು.
ಈಚೆಗೆ ಸರಕಾರ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ಧನಸಹಾಯ ನಿಡುತ್ತಿರುವುದು ಆರೋಗ್ಯಕರ ಬೆಳವಣಿಗೆ. ಕೋವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲಿ ಕಲಾವಿದ ಮಾನಸಿಕವಾಗಿ ಕುಗ್ಗಿರುಂವತಹದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾವಿದರಿಗೆ ಕಲಾಕೃತಿಗಳನ್ನು ರಚಿಸಲು ಮತ್ತು ಪ್ರರ್ದಶನ ಮಾಡಲು ಪ್ರೋತ್ಸಾಹಕ ರೂಪದಲ್ಲಿ ಧನಸಹಾಯ ನೀಡುತ್ತಿರುವುದು ಸಂತೋಷದ ಸಂಗತಿ ಎಂದರು.
ಹಿರಿಯ ಕಲಾವಿದ ಪಿ.ಎಸ್. ಕಡೆಮನಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ರಮೇಶ ಚವ್ಹಾಣ ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯೂಬ್ ದ್ರಾಕ್ಷಿ, ಶಿಲ್ಪಕಲಾ ಅಕಾಡೆಮಿ ಸದಸ್ಯ ಎಂ.ಕೆ. ಪತ್ತಾರ, ಹಿರಿಯ ಕಲಾವಿದ ಬಿ.ಎಸ್. ಪಾಟೀಲ, ಎ. ಎಸ್. ಕಾಖಂಡಕಿ, ಲಿಂಗರಾಜ ಕಾಚಾಪುರ, ರುದ್ರಗೌಡ ಇಂಡಿ, ಮದನ ವಗ್ಯಾನವರ, ಕಮಲೇಶ ಭಜಂತ್ರಿ, ಸಂತೋಷ ರಾಠೊಡ, ಅಣ್ಣಾರಾಯ, ಮುಸ್ತಾಕ್ ತಿಕೋಟಾ, ರವಿ ನಾಯಕ, ಮಲ್ಲಿಕಾರ್ಜುನ ಚಿಂಚೋಳಿ, ಆನಂದ ಝಂಡೆ ಇದ್ದರು.