ಬೆಳ್ತಂಗಡಿ: ಚಾರ್ಮಾಡಿ ಗ್ರಾ.ಪಂ. ವ್ಯಾಪ್ತಿಯ ಚಿಬಿದ್ರೆ ಉರ್ಪೆಲ್ ಗುಡ್ಡೆ ಎಂಬಲ್ಲಿ ಮಂಗಳವಾರ ಸಂಜೆ ಮೃತ್ಯುಂಜಯ ನದಿ ಹಾದಿಯಲ್ಲಿ ಪಿಕಪ್ ದಾಟುತ್ತಿದ್ದ ವೇಳೆ ಏಕಾಏಕಿ ನೀರು ಹೆಚ್ಚಿದ್ದರಿಂದ ಪಿಕಪ್ ಮುಳುಗಡೆಯಾದ ಘಟನೆ ನಡೆದಿದೆ.
ಅಳದಂಗಡಿ ಕಡೆಯ ಪಿಕಪ್ ವಾಹನದಲ್ಲಿ ಎಂ.ಕೆ. ದಯಾನಂದ ಎಂಬುವರ ಮನೆಗೆ ನದಿ ಹಾದಿಯ ಮೂಲಕ ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸಿ ವಾಪಸಾಗುತ್ತಿದ್ದ ಸಂದರ್ಭ ನೀರು ಬಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.
ಪಿಕಪ್ ಚಲಾಯಿಸಲು ಸಾಧ್ಯವಾಗದಿದ್ದಾಗ ಅಪಾಯ ಅರಿತು ಭಯಭೀತರಾದ ಪಿಕಪ್ ಚಾಲಕ ಹಾಗೂ ಪಿಕಪ್ ನಲ್ಲಿದ್ದ ಇನ್ನೋರ್ವ ಬಾಗಿಲು ಭದ್ರಗೊಳಿಸಿ ಇಳಿದು ನದಿಯಿಂದ ಮೇಲೆ ಬಂದಿದ್ದಾರೆ.
ಪಿಕಪ್ ಅಲ್ಲಿಯೇ ಸಿಲುಕೊಕೊಂಡಿದ್ದು, ಚಾಲಕ ದೂರವಾಣಿ ಕರೆ ಮಾಡಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಯುವಕರು ನೀರಿಗೆ ಇಳಿದು ಪಿಕಪ್ ವಾಹನಕ್ಕೆ ಹಗ್ಗ ಹಾಕಿ ಮರಕ್ಕೆ ಕಟ್ಟಿದ್ದಾರೆ. ನೀರಿನಲ್ಲಿ ಪಿಕಪ್ ಸಂಪೂರ್ಣ ಮುಳುಗಿ ಮಗುಚಿ ಬಿದ್ದಿದೆ.
ಎಸ್ಕೆ ಎಸ್.ಎಸ್ ಏಫ್ ನ ವಿಖಾಯ ತಂಡದವರು ಹಗ್ಗ ಹಾಗೂ ರೋಪ್ ತಂದು ಉಕ್ಕಿ ಹರಿಯುತ್ತಿದ್ದ ನದಿಗೆ ಧುಮುಕಿ ಪಿಕಪನ್ನು ಸಾಹಸಪಟ್ಟು ಎಳೆದು ನದಿಯಿಂದ ಮೇಲೆತ್ತಿದ್ದಾರೆ.