ಬೆಂಗಳೂರು: ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಿರುವ 44 ಸೇವೆಗಳನ್ನು ಪಡೆಯಲು ಆನ್‌ಲೈನ್‌ನಲ್ಲಿ ಸಲ್ಲಿಸಲಾಗುವ ಅರ್ಜಿಗಳಿಗೆ ಯಾವುದೇ ದಾಖಲೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವಂತೆ ಕೋರಬಾರದು ಎಂದು ಅಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದರು.
ಗ್ರಾಮ ಲೆಕ್ಕಿಗರು ಕ್ಷೇತ್ರ ಪರಿಶೀಲನೆಗಾಗಿ ಅವಶ್ಯವಿರುವ ಅರ್ಜಿಗಳು ಮತ್ತು ಅವುಗಳ ದಾಖಲೆಗಳನ್ನು ನಾಡಕಚೇರಿಯ ತಂತ್ರಾಂಶದಿಂದಲೇ ಪಡೆದುಕೊಂಡು ನಿಗದಿತ ಅವಧಿಯಲ್ಲಿಯೇ ಈ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದಿದ್ದಾರೆ.
ಗ್ರಾಪಂ ಕಚೇರಿಗಳ 44 ಸೇವೆಗಳನ್ನು ಪಡೆಯಲು ಪಂಚತಂತ್ರ 2.0 ತಂತ್ರಾಂಶವನ್ನು ನಾಡಕಚೇರಿ ತಂತ್ರಾಂಶದೊಂದಿಗೆ ಸಂಯೋಜನೆ ಮಾಡಲಾಗಿದೆ. ಅದರಂತೆ ಗ್ರಾಮೀಣ ಜನರು ದಾಖಲೆಗಳನ್ನು ಪಡೆಯಲು ಪಂಚಾಯತ್ ಕಚೇರಿಗಳ ಬಾಪೂಜಿ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸುತ್ತಿದ್ದಾರೆ. ಆದರೆ ಗ್ರಾಮ ಲೆಕ್ಕಿಗರು, ಕ್ಷೇತ್ರ ಪರಿಶೀಲನೆಗಾಗಿ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಾಡಕಚೇರಿ ತಂತ್ರಾಂಶದ ಲಾಗಿನ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಲಾಗುತ್ತಿರುವ ಅರ್ಜಿಗಳನ್ನು ಮತ್ತು ಅವುಗಳ ದಾಖಲೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವಂತೆ ಗ್ರಾಪಂಗಳನ್ನು ಕೋರುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ.
44 ಪ್ರಮುಖ ಸೇವೆಗಳನ್ನು ತ್ವರಿತವಾಗಿ ಪಡೆದುಕೊಳ್ಳಲು ಗ್ರಾಪಂಗಳ ಬಾಪೂಜಿ ಸೇವಾ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಸೇವೆಗಳನ್ನು ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಸರಕಾರಿ ಸೇವೆಗಳನ್ನು ಮತ್ತಷ್ಟು ಸುಲಲಿತಗೊಳಿಸಲು ಆಡಳಿತ ಯಂತ್ರವನ್ನು ಸಜ್ಜುಗೊಳಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.