ಸುಳ್ಯ: ತಾಲೂಕಿನ ತೊಡಿಕಾನ ಸಮೀಪದ ದೇವರಗುಂಡಿ ಜಲಪಾತದ ಪರಿಸರದಲ್ಲಿ ಬೆಂಗಳೂರಿನ ಮಾಡೆಲ್ ತಂಡವೊಂದು ತುಂಡೂಡುಗೆ ಧರಿಸಿ ಫೋಟೋ ಶೂಟ್ ನಡೆಸಿದ್ದು, ಧಾರ್ಮಿಕ ಹಿನ್ನೆಲೆಯುಳ್ಳ ಪ್ರದೇಶದಲ್ಲಿ ಈ ರೀತಿಯ ವರ್ತನೆಯ ಬಗ್ಗೆ ಭಕ್ತವೃಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಒಂದು ವಾರದ ಹಿಂದೆ ಬೆಂಗಳೂರಿನಿಂದ ಬಂದಿದ್ದ ತಂಡವೊಂದು ತೊಡಿಕಾನದ ಮನೆಯೊಂದಕ್ಕೆ ಬಂದು ಅಲ್ಲಿಂದ ತೊಡಿಕಾನ ದೇವಸ್ಥಾನದಿಂದ ಎರಡೂವರೆ ಕಿ.ಮೀ. ದೂರದಲ್ಲಿರುವ ದೇವರಗುಂಡಿ ಜಲಪಾತ ಬಳಿ ತೆರಳಿ ಫೋಟೋಶೂಟ್ ನಡೆಸಿದ್ದರು. ಈ ಫೋಟೋ ಶೂಟ್ ದೃಶ್ಯಗಳನ್ನು ಇನ್ ಸ್ಟಾಗ್ರಾಂಗೆ ಅಪ್ ಲೋಡ್ ಮಾಡಿದ್ದರು. ಈ ಫೋಟೋಗಳನ್ನು ನೋಡಿದ ಸುಳ್ಯ ಆಸುಪಾಸಿನ ಕೆಲವರಿಗೆ ದೇವರಗುಂಡಿಯ ಪರಿಸರ ಎನ್ನುವ ಅಂಶ ಬೆಳಕಿಗೆ ಬಂತು. ನಂತರದಲ್ಲಿ ತೊಡಿಕಾನ ದೇವಸ್ಥಾನಕ್ಕೆ ಮಾಹಿತಿ ನೀಡಿದ್ದಾರೆ.
ದೇವರಗುಂಡಿ ಜಾಗ ದೇವಸ್ಥಾನದಿಂದ ಎರಡೂವರೆ ಕಿ.ಮೀ. ದೂರದಲ್ಲಿದೆ. ಅದು ದೇವಸ್ಥಾನದ ಜಾಗವಲ್ಲ. ರಿಸರ್ವ್ ಫಾರೆಸ್ಟ್ ನೊಳಗಿರುವ ಜಾಗ. ಅಲ್ಲಿ ಈ ಮೊದಲು 2 ಸಾವು ಸಂಭವಿಸಿದ ಬಳಿಕ ನಾವು ದೇವಸ್ಥಾನದ ವತಿಯಿಂದ ‘ಅಪಾಯಕಾರಿ ಸ್ಥಳ. ಇಲ್ಲಿ ಫೋಟೋಶೂಟ್ ಮಾಡಬಾರದು’ಎಂಬ ಫಲಕ ಹಾಕಿದ್ದೇವೆ. ಅಲ್ಲಿಗೆ ಯಾರಾದರೂ ಹೋಗುವುದಿದ್ದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆದು ಹೋಗಬೇಕು ಎಂದು ದೇವಸ್ಥಾನ ಮಂಡಳಿಯವರು ತಿಳಿಸಿದ್ದಾರೆ.
ಈ ದೇವರ ಗುಂಡಿಯಿಂದ ಪ್ರತಿವರ್ಷ ದೇವಳಕ್ಕೆ ತೀರ್ಥ ತರುವ ಸಂಪ್ರದಾಯ ಇರುವುದರಿಂದ ದೇವರಗುಂಡಿ ತೊಡಿಕಾನ ದೇವಸ್ಥಾನದೊಂದಿಗೆ ಧಾರ್ಮಿಕ ಸಂಬಂಧ ಹೊಂದಿದೆ. ಇಂತಹ ಸ್ಥಳದಲ್ಲಿ ಅಸಭ್ಯ ರೀತಿಯಲ್ಲಿ ಫೋಟೋ ಶೂಟ್ ನಡೆಸಿರುವುದರಿಂದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆಂದು ದೂರು ದಾಖಲಿಸಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ದೇವಳದ ಆಡಳಿತಾಧಿಕಾರಿ ಮತ್ತು ಸುಳ್ಯ ತಹಶೀಲ್ದಾರ್ ರವರ ಗಮನಕ್ಕೆ ತರಲಾಗಿದ್ದು, ಅವರು ಕಾನೂನು ಕ್ರಮದ ಬಗ್ಗೆ ಚರ್ಚಿಸುತ್ತಿದ್ದಾರೆಂದು ಎನ್ನಲಾಗಿದೆ. ಬೆಂಗಳೂರಿನಿಂದ ಬಂದ ರೂಪದರ್ಶಿಗಳ ಮತ್ತು ಛಾಯಾಗ್ರಾಹಕರ ತಂಡವನ್ನು ದೇವರಗುಂಡಿ ಜಲಪಾತದ ಬಳಿಗೆ ಕರೆದೊಯ್ದವರಾರೆಂಬ ಬಗ್ಗೆ ಕೂಡ ಚರ್ಚೆ ನಡೆಯುತ್ತಿದೆ.
ನಟಿ ಬೃಂದಾ ಅರಸ್ ಕ್ಷಮೆ ಯಾಚನೆ:
ತೊಡಿಕಾನ ದೇವರಗುಂಡಿ ಜಲಪಾತದ ಬಂಡೆಯಲ್ಲಿ ಫೋಟೊಶೂಟ್ ನಡೆಸಿದವರು, ಬೆಂಗಳೂರಿನ ಚಿತ್ರನಟಿ ಬೃಂದಾ ಅರಸ್ ಮತ್ತು ತಂಡವಾಗಿದ್ದು ಈ ಫೋಟೊಶೂಟ್ ವಿಚಾರ ವೈರಲ್ ಆಗಿ ವಿವಾದವೆದ್ದಿದೆ. ಈ ಹಿನ್ನೆಲೆಯಲ್ಲಿ ಅವರು ಬಹಿರಂಗ ಕ್ಷಮೆ ಕೇಳಿದ್ದಾರೆ. “ನಾನು ಅಕ್ಟೋಬರ್ ಪ್ರಥಮ ವಾರದಲ್ಲಿ ತೊಡಿಕಾನಕ್ಕೆ ಹೋಗಿ ಜಲಪಾತದ ಸ್ಥಳದಲ್ಲಿ ಫೋಟೋಶೂಟ್ ನಡೆಸಿದ್ದೆ. ಅದು ಧಾರ್ಮಿಕ ಸ್ಥಳ ಎಂದು ನನಗಾಗಲಿ, ನನ್ನ ಫೋಟೋಗ್ರಾಫರ್ ಗಾಗಲಿ ಗೊತ್ತಿರಲಿಲ್ಲ. ಸ್ಥಳೀಯರು ಕೂಡ ಮಾಹಿತಿ ನೀಡಿರಲಿಲ್ಲ. ಫೋಟೋಶೂಟ್ ಮಾಡುವ ಸಂದರ್ಭದಲ್ಲಿ ಕೂಡ ಯಾರೂ ಕೂಡ ನಮ್ಮ ತಂಡಕ್ಕೆ ತೊಂದರೆ ನೀಡಿಲ್ಲ. ನಾನು ಆ ಫೋಟೋಗಳನ್ನು ಇನ್ ಸ್ಟಾಗ್ರಾಂ ಗೆ ಅಪ್ಲೋಡ್ ಮಾಡಿದ್ದೆ. ಇದುವರೆಗೆ ಏನೂ ಸಮಸ್ಯೆಯಾಗಿರಲಿಲ್ಲ. ಸ್ಥಳೀಯರ ಆಕ್ಷೇಪ ಬಂತೆಂಬ ವಿಷಯ ಗೊತ್ತಾಗಿ ನಾನು ಎಲ್ಲಾ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದೇನೆ. ನಾನು ಅಲ್ಲಿನ ದೇವಸ್ಥಾನದವರನ್ನು ಮತ್ತು ಸ್ಥಳೀಯರನ್ನು ಕ್ಷಮಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ” ಎಂದು ಬೆಂಗಳೂರಿನ ನಟಿ ಬೃಂದಾ ಅರಸ್ ದೃಶ್ಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.