Advertisement
ಕಾಡಿನಲ್ಲಿ ಹೆಚ್ಚು ಅಪಾಯ ಒಡ್ಡುವ ಪ್ರಾಣಿಗಳ ಸಾಲಿನಲ್ಲಿ ಮೊದಲಿಗೆ ಬರುವುದೇ ಆನೆ. ಆನಂತರ ಕರಡಿ. ಅನೇಕರು ಹುಲಿ, ಚಿರತೆಗಳು ಭಯಾನಕ ಪ್ರಾಣಿಗಳೆಂದು “ಅವು ದಾಳಿ ಮಾಡಿದರೆ ಹೇಗೆ?’ ಎಂದು ಮುಗ್ಧವಾಗಿ ಪ್ರಶ್ನಿಸುತ್ತಾರೆ. ಆದರೆ ಆನೆ ಮತ್ತು ಕರಡಿಗಳಿಗೆ ಹೋಲಿಸಿದರೆ ಹುಲಿ ಮತ್ತು ಚಿರತೆಗಳು ಅಂಜಿಕೆ ಸ್ವಭಾವದ ಮತ್ತು ಜಗಳವನ್ನು ಅಷ್ಟಾಗಿ ಇಷ್ಟಪಡದ ಪ್ರಾಣಿಗಳು. ಅನಗತ್ಯವಾಗಿ ಆಕ್ರಮಣ ಮಾಡುವ ಬಯಕೆ ಹೊಂದಿಲ್ಲದ ಪ್ರಾಣಿಗಳು ಕೂಡ ಹೌದು. ತಮ್ಮ ಮರಿಗಳಿಗೆ ಅಪಾಯ ಇದೆ ಎಂದು ಗೊತ್ತಾದಾಗ, ಒಂದು ಸಣ್ಣ ಪಕ್ಷಿಯಿಂದ ಹಿಡಿದು ದೊಡ್ಡ ಪ್ರಾಣಿಯತನಕವೂ ಅವು ತಮ್ಮ ಎದುರಾಳಿಯನ್ನು ಎದುರಿಸಲು ಹಾಗೂ ಮಣಿಸಲು ಸಜ್ಜಾಗಿಬಿಡುತ್ತವೆ. ಇದಕ್ಕೆ ಅವುಗಳಲ್ಲಿರುವ ಭಯ ಪ್ರವೃತ್ತಿಯೇ ಕಾರಣ.
Related Articles
Advertisement
ಇನ್ನೊಮ್ಮೆ ಬಂಡೀಪುರದಲ್ಲಿ ಫೋಟೋ ತೆಗೆಯುವಾಗ ಮರಿಗಳ ಕಾವಲು ಕಾಯುತ್ತಿದ್ದ ಗುಂಪಿನ ಯಜಮಾನ ನಮ್ಮ ಮೇಲೆ ದಾಳಿ ನಡೆಸಿದ. ಹೀಗಾಗಬಹುದು ಎಂದು ಗುಮಾನಿ ಇದ್ದ ನಾವು ವಾಹನವನ್ನು ಮೊದಲೇ ಪರಾರಿಯಾಗುವ ಸನ್ನದ್ದ ಸ್ಥಿತಿಯಲ್ಲಿ ಇಟ್ಟುಕೊಂಡಿ¨ªೆವು. ಅದು ಬೆನ್ನಟ್ಟಿ ಬಂದಾಗ ಜೀಪನ್ನು ವೇಗವಾಗಿ ಓಡಿಸಿಕೊಂಡು ಹೋದೆವು. ತುಂಬಾ ಸಿಟ್ಟಿನಲ್ಲಿದ್ದ ಆನೆ ಹೆಚ್ಚು ಕಡಿಮೆ ಅರ್ಧ ಕಿಲೋಮೀಟರ್ ತನಕ ಬೆನ್ನಟ್ಟಿ ಬಂದಿತ್ತು. ಇನ್ನು ನಾವು ಸಿಗುವುದಿಲ್ಲ ಎನ್ನುವುದು ಖಾತ್ರಿಯಾದ ಮೇಲೆ ಬೇಸರದಲ್ಲಿ ವಾಪಸ್ಸು ಹೋಯಿತು. ಒಂದು ವೇಳೆ ಸಿಕ್ಕಿದ್ದರೆ ಅದು ಏನು ಕೂಡ ಮಾಡಲು ಸಾಧ್ಯವಿತ್ತು.
ಪುಂಡಾನೆಯ ರಹಸ್ಯ:
ಆನೆಯ ಮನೋಪ್ರವೃತ್ತಿ ಯಾವಾಗ ಹೇಗಿರುತ್ತದೆ? ಎಂದು ಹೇಳುವುದು ಬಹು ಕಷ್ಟ. ಕೆಲವೊಮ್ಮೆ ಆಕ್ರಮಣ ಮಾಡುವ ಪುಂಡ ಆನೆಯೂ ಸೌಮ್ಯವಾಗಿ, ನಮ್ಮ ಮೇಲೆ ಯಾವ ಭಾವನೆ ಹೊಂದದೆ ಮಂಕುತಿಮ್ಮನಂತೆ ನೋಡಬಹುದು. “ಈ ಆನೆ ಏನೂ ಮಾಡುವುದಿಲ್ಲ’ ಎಂದುಕೊಂಡ ಕಾಲಕ್ಕೆ ಅದು ಒಮ್ಮೆಲೆ ಆಕ್ರಮಣ ಮಾಡಿಬಿಡಬಹುದು. ಹೀಗೆ ಎರಡೂ ಸಾಧ್ಯತೆಗಳೂ ಉಂಟು. ಭದ್ರಾ ಕಾಡಿನಲ್ಲಿರುವ ಒಂದು ಪುಂಡ ಗಂಡಾನೆ ಕೂಡ ಹೀಗೆಯೇ. ಒಮ್ಮೊಮ್ಮೆ ಆಕ್ರಮಣ ಮಾಡುವುದು; ಅನೇಕ ಬಾರಿ ಸೌಮ್ಯ ಸ್ವಭಾವದಲ್ಲಿ ತೆಪರನಂತೆ ನಿಂತ ಭಂಗಿಯನ್ನು ಗಮನಿಸಿದ್ದೇನೆ. ಕೆಲವರು ಈ ಆನೆ ಮೊದಲು ಮಡಿಕೇರಿಯ ಬಳಿ ಇತ್ತು; ಅಲ್ಲಿನ ಜನ ಇದರ ಕಾಟ ಸಹಿಸಲಾರದೆ ಪಟಾಕಿ ಹೊಡೆದು ಇತ್ತ ಕಡೆ ಓಡಿಸಿದರೆಂದು ಹೇಳುತ್ತಾರೆ. ನಮ್ಮ ಓಡಾಟದ ದಾರಿಯಲ್ಲಿ ಕೆಲವೊಮ್ಮೆ ವಾರ, ತಿಂಗಳುಗಟ್ಟಲೆ ಕಾಣದಂತೆ ಮಾಯವಾಗುವ ಈ ಪುಂಡಾನೆ ಮತ್ತೆ ಒಂದು ದಿನ ದಿಢೀರ್ ಪ್ರತ್ಯಕ್ಷವಾಗಿ ಬಿಡುತ್ತದೆ. ಅಲ್ಲಿಯತನಕ ಈ ಆನೆ ಎಲ್ಲಿಗೆ ಹೋಗಿರುತ್ತದೆ, ಏನು ಮಾಡುತ್ತದೆ ಎನ್ನುವುದು ಒಂದು ಚಿದಂಬರ ರಹಸ್ಯ.
ಲೆಕ್ಕಾಚಾರದ ಬದುಕು:
ಒಂದು ಮಟ್ಟಿಗೆ ಹೇಳುವುದಾದರೆ ಆನೆಗಳಿಗೆ ಇಡೀ ಕಾಡಿನ ಪರಿಸರ ಚೆನ್ನಾಗಿ ಗೊತ್ತು. ಕಾಲಕಾಲಕ್ಕೆ ಸಿಗುವ ಹಣ್ಣುಗಳು, ಅದಕ್ಕೆ ಬಲು ಇಷ್ಟವಾದ ಬಿದಿರು ಮತ್ತು ಕಳಲೆ, ಕೆಲವು ಬಗೆಯ ಬಳ್ಳಿಗಳು, ಮರದ ತೊಗಟೆ… ಎಲ್ಲೆಲ್ಲಿ ಲಭ್ಯ ಇದೆಯೋ ಅಲ್ಲೆಲ್ಲ ಆನೆಗಳ ಗುಂಪು ಓಡಾಡುತ್ತಿರುತ್ತವೆ. ಈ ಗುಂಪಿಗೊಬ್ಬ ನಾಯಕ ಇರುತ್ತಾನೆ. ಅನೇಕ ಸಲ ಒಂಟಿ ಸಲಗ; ಸದಾ ಒಂಟಿ, ಅದು ನಡೆದಿದ್ದೇ ದಾರಿ. ಮೇಲ್ನೋಟಕ್ಕೆ ನಮಗೆ ಆನೆಗಳ ಓಡಾಟದ ಪಥಕ್ಕೆ ಯಾವುದೇ ಸ್ಪಷ್ಟ ಕಾರ್ಯಸೂಚಿಗಳಿಲ್ಲ ಎನ್ನುವಂತೆ ಕಾಣುತ್ತದೆ. ಆದರೆ ಅದು ಹಾಗಲ್ಲ. ಅವು ಎಲ್ಲಿಂದ ಎಲ್ಲಿಗೆ ಹೋಗಬೇಕು, ಯಾವ ಸಮಯದಲ್ಲಿ ಎಲ್ಲಿರಬೇಕು ಮತ್ತು ಎಷ್ಟು ದಿನ ತಂಗಬೇಕು, ಏನನ್ನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ತಿಳುವಳಿಕೆ ಆನೆಗಳಿಗೆ ಇರುತ್ತದೆ.
ತಪ್ಪಿಸಿಕೊಂಡು ಬರುವುದು ಕಷ್ಟ…
ಇಕ್ಕಟ್ಟಾದ ಕಾಡಿನ ದಾರಿಯಲ್ಲಿ ಆನೆಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡಾಗ ತಪ್ಪಿಸಿಕೊಂಡು ಬರುವುದು ತುಂಬಾ ಕಷ್ಟ. ಅದರ ವೇಗ, ಅರ್ಭಟ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಗಾಬರಿಯಲ್ಲಿ ನಮಗೂ ಏನು ಮಾಡಬೇಕು, ಹೇಗೆ ತಪ್ಪಿಸಿಕೊಳ್ಳಬೇಕು ಎಂಬುದು ಹೊಳೆಯದಂತಾಗುತ್ತದೆ. ಕೆಲವೊಮ್ಮೆ ಹೀಗಾದಾಗ ಎಲ್ಲರೂ ಸೇರಿ ಗಟ್ಟಿಯಾಗಿ ಕಿರುಚಿಕೊಂಡಾಗ ಅದು ಹೆದರಿ ಓಡಿಹೋಗಿದ್ದೂ ಇದೆ. ಆದರೆ ಅನೇಕ ಸಲ ಇದಕ್ಕೆ ತದ್ವಿರುದ್ಧವಾಗಿ ನಮ್ಮ ಕೂಗಾಟಕ್ಕೆ ಗಾಬರಿಗೊಂಡು ಮುನ್ನುಗ್ಗಿ ಗುದ್ದಲು ಬಂದಿರುವುದೂ ಇದೆ. ಒಟ್ಟಾರೆ ಆನೆಯ ಸ್ವಭಾವ ಕಾಡಿನಲ್ಲಿ ಯಾವಾಗ ಹೇಗೆ ಎಂದು ಹೇಳುವುದು ಕಷ್ಟ. ಅದರ ದಾಳಿಯಿಂದ ಸಿಕ್ಕು ಬಚಾವಾಗಲೂಬಹುದು. ಆಗದೆಯೂ ಇರಬಹುದು. ಎಲ್ಲವೂ ನಮ್ಮ ಅದೃಷ್ಟವನ್ನು ಅವಲಂಬಿಸಿರುತ್ತದೆ.
ಜೀಪನ್ನೇ ಎತ್ತಿ ಬಿಸಾಡಿತ್ತು…
ಸಹಜವಾಗಿ ನಾವು ಆನೆಗಳನ್ನು ದೂರದಿಂದ ನೋಡುವಾಗ ಅವು ನಮ್ಮ ಮೇಲೆ ಎಗರಿ, ಕಾಲು ಕೆರೆದು, ಜಗಳಕ್ಕೆ ಬರುವುದು ಕಡಿಮೆ. ಅದೇ ನಾವು ತೀರ ಅವುಗಳ ಸಮೀಪಕ್ಕೆ ಹೋದಾಗ ಅವು ಸಹಜವಾಗಿಯೇ ಗಾಬರಿಗೊಂಡು ನಮ್ಮ ಮೇಲೆ ಆಕ್ರಮಿಣ ಮಾಡುತ್ತವೆ. ಒಂದು ಸಲ ಪುಣ್ಯಕ್ಕೆ, ನಾನು ಆ ದಿನ ಕಾಡಿನ ಸಫಾರಿಗೆ ಹೋಗಿರಲಿಲ್ಲ. ಆ ದಿನ ಜೀಪಿನಲ್ಲಿ ಹೋದ ಎಲ್ಲರನ್ನೂ ನೋಡಿದ ಆನೆ, ಕೆರಳಿ ಒಮ್ಮೆಗೆ ಎಗರಿ ಬಂದು ಜೀಪನ್ನು ಕೆಡವಿತ್ತು. ಅದರ ಎರಡೂ ದಂತಗಳು ಜೀಪಿನ ಚೆಸ್ಸಿಯನ್ನು ಸೀಳಿಕೊಂಡು ಒಳಗೆ ಬಂದಿದ್ದವು. ದೋಸೆ ಮಗುಚಿ ಹಾಕಿದಂತೆ ಜೀಪನ್ನು ತಲೆಕೆಳಗಾಗಿ ಎತ್ತಿ ಬಿಸಾಡಿತ್ತು. ಪುಣ್ಯಕ್ಕೆ ಅದು ಜೀಪಿನ ಮೇಲೆ ಬಂದು ಕೂತು ತನ್ನ ಭಾರವನ್ನು ಬಿಟ್ಟಿರಲಿಲ್ಲ. ಹಾಗೇನಾದರೂ ಆಗಿದ್ದರೆ ಆ ಜೀಪಿನಲ್ಲಿದ್ದ ಎಂಟØತ್ತು ಜನ ಅಪ್ಪಚ್ಚಿಯಾಗಿ ಹೋಗುತ್ತಿದ್ದರು. ಆನೆಗೆ ತನ್ನ ಅತೀವ ಮೈ ಭಾರದ ಸ್ಪಷ್ಟ ಅರಿವಿದೆ. ಹೀಗಾಗಿ ಅದು ಜೀಪು, ಕಾರು, ಸೈಕಲ್, ಮೋಟರ್ ಬೈಕ್ ಏನೇ ಕಂಡರೂ ಮೊದಲು ಸೊಂಡಿಲಿನಿಂದ ಎತ್ತಿ ಬಿಸಾಡುತ್ತದೆ. ಇಲ್ಲವೇ ದಂತದಿಂದ ಎತ್ತಿ ಕೆಡವಿ ಕೊನೆಗೆ ಅದರ ಮೇಲೆ ಹತ್ತಿ ತುಳಿಯುತ್ತದೆ. ಕೊನೆಯ ಅಸ್ತ್ರವೆಂದರೆ ತನ್ನ ಭಾರವನ್ನು ಬಿಟ್ಟು ಕುಳಿತುಕೊಳ್ಳುವುದನ್ನು ಇಲ್ಲವೇ ಕಾಲಲ್ಲಿ ಚಚ್ಚಿ ಹಾಕುವುದನ್ನು ಸಹಜವಾಗಿ ಮಾಡುತ್ತದೆ.
ಚಿತ್ರ-ಲೇಖನ: ಡಾ. ಕಲೀಂ ಉಲ್ಲಾ, ಶಿವಮೊಗ್ಗ