ಆನೇಕಲ್: “ಅಭಿವೃದ್ಧಿ ವಿಚಾರದಲ್ಲಿ ನಾನು ರಾಜಕೀಯ ಮಾಡುವುದಿಲ್ಲ, ಹೆನ್ನಾಗರ ಗ್ರಾಪಂಗೆ ಶಾಸಕ ಎಂ.ಕೃಷ್ಣಪ್ಪ ಅವರ ಅನುದಾನ ಶೂನ್ಯ. ಕೇವಲ ಫೋಟೋಗೆ ಶೋ ನೀಡುವುದಷ್ಟೇ ಅವರ ಸಾಧನೆ’ ಎಂದು ಸಂಸದ ಡಿ.ಕೆ.ಸುರೇಶ್ ಕುಟುಕಿದರು.
ತಾಲೂಕಿನ ಹೆನ್ನಾಗರ ಗ್ರಾಪಂ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮ ಸ್ವರಾಜ್ ಭವನವನ್ನು ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಕಾರ್ಯ ಮಾಡಿಸಿದ್ದೇನೆ:ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನೂರಾರು ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದೇನೆಂದು ತಿಳಿಸಿದರು.
ನಾಚಿಕೆಯಾಗಬೇಕು: ಕಾಂಕ್ರಿಟ್ ರಸ್ತೆಗಳು, ಒಳಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ, ಹಕ್ಕು ಪತ್ರಗಳ ವಿತರಣೆ, ಕಾವೇರಿ ನೀರು, ಏತ ನೀರಾವರಿ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಈ ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಮಾಡಿದ್ದೇನೆ. ಆದರೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳಿಗೆ ಈ ಭಾಗದ ಶಾಸಕರು ಮತ್ತು ಬಿಜೆಪಿ ಸದಸ್ಯರು ಫೋಟೋ ತೆಗೆಸಿಕೊಂಡು ವಾಟ್ಸಪ್, ಫೇಸ್‌ಬುಕ್‌ನಲ್ಲಿ ಫೋಸು ಕೊಡುವ ಕೆಲಸ ಮಾಡುತ್ತಿದ್ದಾರೆ. ನಾಚಿಕೆಯಾಗಬೇಕು ಅವರ ಜನ್ಮಕ್ಕೆ ಎಂದು ಕಿಡಿಕಾಡಿದರು.
ಗ್ರಾಪಂ ಪ್ರಥಮ ಸ್ಥಾನಕ್ಕೆ ಬರಲು ಶ್ರಮ: ಹೆನ್ನಾಗರ ಗ್ರಾಪಂ ಅಧ್ಯಕ್ಷ ಆರ್.ಕೆ.ಕೇಶವರೆಡ್ಡಿ ಮಾತನಾಡಿ, ತಾನು ಗ್ರಾಪಂ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಪಂಚಾಯ್ತಿಗೆ ಏನಾದರೂ ಒಂದು ಉತ್ತಮ ಕೆಲಸ ಕಾರ್ಯ ಮಾಡಲು ಮುಂದಾಗಿದ್ದೇನೆ. ನಮ್ಮ ಪಂಚಾಯ್ತಿಯನ್ನು ಇಡೀ ರಾಜ್ಯದಲ್ಲಿಯೇ ಮಾದರಿ ಪಂಚಾಯ್ತಿಯನ್ನಾಗಿ ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಬೇಕು ಎಂಬ ಹಂಬಲವಿದೆ ಎಂದು ತಿಳಿಸಿದರು.
ಸ್ವರಾಜ್ ಭವನಕ್ಕೆ ಸಹಕಾರ: ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದೇನೆ. ಸುಮಾರು 2 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ರೀತಿಯ ಗ್ರಾಮ ಸ್ವರಾಜ್ ಭವನ ನಿರ್ಮಿಸಲು ನಮ್ಮ ಸಂಸದರಾದ ಡಿ.ಕೆ.ಸುರೇಶ್ ಅವರು ಸಹಕಾರ ಮತ್ತು ಅನುದಾನದ ಫಲವಾಗಿ ಸುಸಜ್ಜಿತ ಸ್ವರಾಜ್ ಭವನ ನಿರ್ಮಾಣವಾಗಿದೆ. ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್, ಜಿಪಂ ಸದಸ್ಯ ಪ್ರಸನ್ನಕುಮಾರ್, ತಾಲೂಕು ಹಾಗೂ ಗ್ರಾಪಂ ಸದಸ್ಯರು, ಇಲಾಖೆ ಅಧಿಕಾರಿಗಳು, ಪಂಚಾಯ್ತಿ ಸಿಬ್ಬಂದಿ ಉಪಸ್ಥಿತರಿದ್ದರು.
ಹೆನ್ನಾಗರ ಗ್ರಾಪಂ ಸುತ್ತಮುತ್ತಲೂ ನೂರಾರು ಕೈಗಾರಿಕೆಗಳು ನಿರ್ಮಾಣ ಗೊಂಡಿದ್ದು ಕೃಷಿ ಭೂಮಿಯು ಮಾಯಾವಾಗಿ ಲೇಔಟ್‌ಗಳಾಗಿವೆ. ಜನಸಂಖ್ಯೆ ಪಂಚಾಯಿತಿ ಮಟ್ಟಕ್ಕಿಂತ ಹೆಚ್ಚಾಗಿದೆ. ನಗರೀಕರಣವಾಗಿ ಮೂಲಭೂತ ಸೌಕರ್ಯಗಳನ್ನು ಕೊಡಲು ಈ ಪಂಚಾಯ್ತಿಯನ್ನು ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಮಾಡಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಶಿಫಾರಸು ಮಾಡುವುದಾಗಿ ಸಂಸದ ಡಿ.ಕೆ.ಸುರೇಶ್ ಭರವಸೆ ನೀಡಿದರು.