ದೇಶವೇ ಕಾಯುತ್ತಿದ್ದಂತ ರಾಮಲಲ್ಲಾನ ವಿಗ್ರಹ ಶುಕ್ರವಾರ ಬಹಿ ರಂಗಗೊಂಡ ಬೆನ್ನಲ್ಲೇ ಜಾಲತಾಣಗಳಲ್ಲೆಲ್ಲ ವ್ಯಾಪಕವಾಗಿ ಹರಿದಾಡಿತ್ತು. ವಿಗ್ರಹವನ್ನು ಕೆತ್ತಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರ ಕುಟುಂಬವೂ ಈ ಬಗ್ಗೆ ಧನಾತ್ಮಕ ಪ್ರತಿಕ್ರಿಯೆಯನ್ನೇ ನೀಡಿತ್ತು. ಆದರೀಗ ಅಯೋಧ್ಯಾ ರಾಮ ಮಂದಿರದ ಪ್ರಧಾನ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್ ಅವರು, ಬಹಿರಂಗಗೊಂಡ ವಿಗ್ರಹ ಸತ್ಯವಾದುದಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮಲಲ್ಲಾನ ವಿಗ್ರಹ ಚರ್ಚೆಗೆ ಗ್ರಾಸವಾಗಿದೆ.
ವಿಗ್ರಹದ ಕುರಿತು ಮಾತನಾಡಿರುವ ಆಚಾರ್ಯರು “ವಿಗ್ರಹವಿರುವ ಸ್ಥಳದಲ್ಲಿಯೇ ಪ್ರಾಣಪ್ರತಿಷ್ಠೆಗೆ ವಿಧಿ ವಿಧಾನಗಳನ್ನು ನೆರವೇರಿಸಲು ಸಿದ್ಧತೆ ನಡೆಸಲಾಗುತ್ತಿದೆ. ವಿಗ್ರಹವನ್ನು ಈವರೆಗೆ ವಸ್ತ್ರದಿಂದ ಮುಚ್ಚಲಾಗಿದ್ದು, ಕಣ್ಣಿನ ಬಟ್ಟೆ ತೆರೆದಿರುವ ವಿಗ್ರಹ ಸತ್ಯವಾದುದಲ್ಲ. ಒಂದು ವೇಳೆ ಕಣ್ಣಿನ ಬಟ್ಟೆ ತೆರೆದಿರುವ ವಿಗ್ರಹದ ಫೋಟೋ ಏನಾದರೂ ಕಾಣಿಸಿಕೊಂಡಿದ್ದರೆ ಈ ಬಗ್ಗೆ ತನಿಖೆ ನಡೆಸಬೇಕು’ ಎಂದಿದ್ದಾರೆ. ಈ ಮೂಲಕ ಬಹಿರಂಗಗೊಂಡ ವಿಗ್ರಹ ನಿಜವೋ ಅಥವಾ ಅಕಸ್ಮಾತ್ ಆಗಿ ಯಾರೋ ಫೋಟೋ ತೆಗೆದು ಹರಿ ಯಬಿ ಟ್ಟಿ ದ್ದಾರೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡದೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ.
ಇನ್ನು ವಿಗ್ರಹದ ಚಿತ್ರ ಬಹಿರಂಗಗೊಂಡ ಬಗ್ಗೆ ಟ್ರಸ್ಟ್‌ನ ಅಧಿಕಾರಿಗಳೂ ಆತಂಕ ವ್ಯಕ್ತಪಡಿಸಿದ್ದು, ಮಂದಿರದ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳ ಪೈಕಿ ಯಾರೋ ವಿಗ್ರಹದ ಫೋಟೋವನ್ನು ಬಿಡುಗಡೆಗೊಳಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದು, ಆರೋಪಿಗಳ ವಿರುದ್ಧ ತನಿಖೆ ನಡೆಸಲು ಯೋಜಿಸಿದ್ದಾರೆ ಎನ್ನಲಾಗಿದೆ.
ಜಾಲತಾಣಗಳಲ್ಲಿ ಬಿಲ್ಲು-ಬಾಣ ಹಿಡಿದಿರುವ ಬಾಲರಾಮನ ವಿಗ್ರಹದ ಚಿತ್ರ ಹರಿದಾಡುತ್ತಿರುವುದು ನಕಲಿ. ಮೂರ್ತಿಯ ಪ್ರಾಣ ಪ್ರತಿಷ್ಠೆಯಾದ ಬಳಿಕವೇ ವಿಗ್ರಹದ ಎಡಗೈಗೆ ಬಿಲ್ಲು ಮತ್ತು ಬಲಗೈಗೆ ಬಾಣ ಅಳವಡಿಸಲಾಗುತ್ತದೆ. ಜ.22ರಂದು ಬ್ರಾಹ್ಮೀ ಮಹೂರ್ತದಲ್ಲಿ ಶಿಲ್ಪಿಯು ಉಪವಾಸ ವ್ರತದೊಂದಿಗೆ ಮೂರ್ತಿಗೆ ದೃಷ್ಟಿ ನೀಡಲಿದ್ದಾರೆ. ಈ ವೇಳೆ ಧಾರ್ಮಿಕ ಕಾರ್ಯಗಳು ನಡೆಯುತ್ತಲೇ ಇರುತ್ತವೆ. ದೃಷ್ಟಿ ನೀಡಿದ ಬಳಿಕ ಪ್ರಾಣ ಪ್ರತಿಷ್ಠೆ ನಡೆದು ಅನಂತರ ಬಿಲ್ಲು-ಬಾಣ ಅಳವಡಿಸುವ ಕಾರ್ಯ ಆರಂಭವಾಗುತ್ತದೆ.
ಸೂರ್ಯ ಪ್ರಕಾಶ್, ಶಿಲ್ಪಿ ಅರುಣ್ ಸಹೋದರ