ಲ್ಯಾಂಡ್‌ಸ್ಕೇಪ್ ಛಾಯಾಗ್ರಹಣಕ್ಕೆ ಅದರದ್ದೇ ಆದ ಮಹತ್ವವಿದೆ. ಸವಿಸ್ತಾರವಾಗಿ, ಕಣ್ತುಂಬುವಂತೆ ದೃಶ್ಯಗಳನ್ನು ಸೆರೆಹಿಡಿಯುವುದರಿಂದಲೇ ಈ ಛಾಯಾಗ್ರಹಣವೆಂದರೆ ಪ್ರಕೃತಿ ಪ್ರೇಮಿಗಳಿಗೆ ಒಲವು ಹೆಚ್ಚು. ಭಾರತದಾದ್ಯಂತ ಓಡಾಡಿ ಸೆರೆಹಿಡಿಯಲಾದ ಸುಂದರ ಭೂದೃಶ್ಯಗಳ ಛಾಯಾಚಿತ್ರ ಪ್ರದರ್ಶನ ‘ಲ್ಯಾಂಡ್‌ಸ್ಕೇಪ್ಸ್ ಆಫ್ ಇಂಡಿಯಾ’ ನಗರದಲ್ಲಿ ಏರ್ಪಾಡಾಗಿದೆ. ಛಾಯಾಗ್ರಾಹಕ ಶಿವ ಗಾಂಧಿ ಅವರು ಸೆರೆಹಿಡಿದ ಅತ್ಯುದ್ಭುತ, ವಿಶಿಷ್ಟ ನಿಸರ್ಗ ಚಿತ್ರಣ, ಪರ್ವತಗಳು, ನದಿಗಳು, ಪ್ರವಾಸದ ಸ್ಮರಣೀಯ ಛಾಯಾಚಿತ್ರಗಳನ್ನು ಈ ಪ್ರದರ್ಶನದಲ್ಲಿ ನೋಡಬಹುದಾಗಿದೆ. ಒಂದು ಚಿತ್ರವನ್ನು ಸೆರೆಹಿಡಿಯುವಾಗ ಅದರ ಸ್ಕೆಚ್, ಫ್ರೇಮ್‌ವರ್ಕ್ ತಲೆಯಲ್ಲಿ ನಡೆದಿರುತ್ತೆ. ಅದಕ್ಕೆ ಸಂಬಂಧಿಸಿದ ಅನೇಕ ಸರಣಿ ಆಲೋಚನೆಗಳು, ಕ್ರಿಯಾಶೀಲ ತಂತ್ರಗಳು ನಂತರ ಹೊಳೆಯುತ್ತವೆ. ಈ ಪ್ರಕ್ರಿಯೆಯಲ್ಲಿ ಕಾಲ್ಪನಿಕ ಚಿತ್ರಣ ಮನಸ್ಸಿನಲ್ಲಿ ಮೂಡುತ್ತದೆ. ಅದನ್ನು ಕ್ಯಾಮೆರಾದ ಲೆನ್ಸಿನ ಸಹಾಯದಿಂದ ಫೋಟೋಗ್ರಾಫರ್ ಸೆರೆಹಿಡಿಯುತ್ತಾನೆ ಎನ್ನುತ್ತಾರೆ ಶಿವ ಗಾಂಧಿ. ಅವರ ನೆರಳು ಬೆಳಕಿನ ಕತೆ ಹೇಳುವ ಚಿತ್ರಗಳು ಪ್ರದರ್ಶನದಲ್ಲಿವೆ.•