ಚೆನ್ನೈ : ಸೇಲಂ-ಚೆನ್ನೈ ಅಷ್ಟ ಪಥ ಹೆದ್ದಾರಿ ನಿರ್ಮಾಣವನ್ನು ಪ್ರತಿಭಟಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭೇಟಿಯಾಗಲು ಹೋಗುತ್ತಿದ್ದ ಸ್ವರಾಜ್ ಇಂಡಿಯಾ ಸಂಘಟನೆ ಸ್ಥಾಪಕ ಮತ್ತು ರಾಜಕಾರಣಿ, 55ರ ಹರೆಯದ ಯೋಗೇಂದ್ರ ಯಾದವ್ ಅವರನ್ನು ತಡೆದು ವಶಕ್ಕೆ ತೆಗೆದುಕೊಂಡ ತಮಿಳು ನಾಡು ಪೊಲೀಸರು ಯಾದವ್ ಅವರ ಮೊಬೈಲ್ ಫೋನನ್ನು ಕಸಿದು, ತಳ್ಳಾಡಿ, ವ್ಯಾನಿಗೆ ತುರುಕಿದರೆಂದು ಆರೋಪಿಸಲಾಗಿದೆ.
ಯೋಗೇಂದ್ರ ಯಾದವ್ ಅವರು 2015ರಲ್ಲಿ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷದಿಂದ ಹೊರಬಿದ್ದ ಬಳಿಕ ಸ್ವರಾಜ್ ಇಂಡಿಯಾ ಸಂಘಟನೆಯನ್ನು ಸ್ಥಾಪಿಸಿದ್ದರು.
ತಮಿಳು ನಾಡು ಪೊಲೀಸರು ತನ್ನನ್ನು ವಶಕ್ಕೆ ತೆಗೆದುಕೊಂಡು ವರ್ತಿಸಿದ ರೀತಿಯನ್ನು ಖಂಡಿಸಿ ಯಾದವ್ ಈ ರೀತಿ ಟ್ವೀಟ್ ಮಾಡಿದ್ದಾರೆ :
“ತಮಿಳು ನಾಡು ಪೊಲೀಸರು ತಿರು ಅಣ್ಣಾಮಲೆ ಜಿಲ್ಲೆಯ ಚೆಂಗಂ ಪಿಎಸ್‌ನಲ್ಲಿ ನನ್ನನ್ನು ಮತ್ತು ತಂಡದವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ನಾವಿಲ್ಲಿ ಅಷ್ಟಪಥ ಹೆದ್ದಾರಿ ವಿರುದ್ಧದ ಆಂದೋಲನಕಾರರ ಆಹ್ವಾನದ ಮೇರೆಗೆ ಬಂದಿದ್ದೇವೆ; ಪ್ರತಿಭಟನೆ ನಿರತ ರೈತರನ್ನು ಭೇಟಿಯಾಗದಂತೆ ಪೊಲೀಸರು ನಮ್ಮನ್ನು ತಡೆದಿದ್ದಾರೆ. ನನ್ನ ಫೋನನ್ನು ಕಸಿದುಕೊಂಡು ನನ್ನನ್ನು ತಳ್ಳಾಡಿ ಪೊಲೀಸ್ ವ್ಯಾನಿಗೆ ನನ್ನನ್ನು ತುರುಕಿದ್ದಾರೆ; ತಮಿಳು ನಾಡು ಪೊಲೀಸರಿಂದ ನನಗಾಗಿರುವ ನೇರ ಅನುಭವ ಇದಾಗಿದೆ’
“ನಾನು ತಿರು ಅಣ್ಣಾಮಲೆ ಕಲೆಕ್ಟರ್ ಕುಂದಸಾಮಿ ಜತೆಗೆ ಫೋನಿನಲ್ಲಿ ಮಾತನಾಡಿದ್ದೇನೆ; ಅಷ್ಟಪಥ ಹೆದ್ದಾರಿ ಸಂಬಂಧ ಪೊಲೀಸರು ನಡೆಸಿರುವ ಅತಿರೇಕಗಳ ಬಗೆಗಿನ ರೈತರ ದೂರು ಮತ್ತು ಬಲವಂತದ ಭೂಸ್ವಾಧೀನದ ಬಗ್ಗೆ ಅವರಿಗೆ ಹೇಳಿದ್ದೇನೆ. ಆದರೆ ಅವರು ಪೊಲೀಸರ ಹಸ್ತಕ್ಷೇಪವನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದಾರೆ. ಕಲೆಕ್ಟರ್‌ಗೆ ಫೋನ್ ಮಾಡಿದ ನಿಮಿಷದೊಳಗೆ ನನ್ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ’ ಎಂದು ಯಾದವ್ ಹೇಳಿದ್ದಾರೆ.