Advertisement
ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ ಅನಂತರ ಲಕ್ಷ್ಮಣ್ ನಿಂಬರ್ಗಿ ಅವರು ಜ.11ರಂದು ಎಸ್‌ಪಿ ಕಚೇರಿಯಲ್ಲಿ ನಡೆಸಿದ ತನ್ನ ಮೊದಲ “ಪೊಲೀಸ್ ಪೋನ್-ಇನ್’ ಕಾರ್ಯಕ್ರಮದಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಕುರಿತಾಗಿ ಹೆಚ್ಚಿನ ದೂರುಗಳನ್ನು ಸ್ವೀಕರಿಸಿದರು.
ಮಣಿಪಾಲದಿಂದ ಕರೆ ಮಾಡಿದ ನಾಗರಿಕರೋರ್ವರು “ಮಣಿಪಾಲ ಪರಿಸರದಲ್ಲಿ ಹೆಲ್ಮೆಟ್, ನಂಬರ್‌ಪ್ಲೇಟ್, ಹೆಡ್‌ಲೈಟ್ ಇಲ್ಲದ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆ. ವಿರುದ್ಧ ದಿಕ್ಕಿನಿಂದಲೂ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಲಾಗುತ್ತಿದೆ. ಇದರಿಂದಾಗಿ ಅಪಘಾತಗಳು ಹೆಚ್ಚಾಗುತ್ತಿವೆ. ಈ ಹಿಂದೆ ಎಸ್‌ಪಿಯಾಗಿದ್ದ ಅಣ್ಣಾಮಲೈ ಅವರು ಇಂತಹ ವಾಹನ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು. ಅದೇ ರೀತಿ ನೀವು ಕೂಡ ಕಾರ್ಯಾಚರಿಸಿ’ ಎಂದು ಮನವಿ ಮಾಡಿದರು. ದೂರಿಗೆ ಪ್ರತಿಕ್ರಿಯಿಸಿದ ಎಸ್‌ಪಿ ಅವರು, “ಅಣ್ಣಾಮಲೈ ದಿನಗಳು ಮತ್ತೆ ಬರುತ್ತವೆ. ನನಗೆ ಒಂದು ವಾರ ಕಾಲಾವಧಿ ನೀಡಿ. ಸೂಕ್ತ ಕ್ರಮ ಕೈಗೊಳ್ಳುತ್ತೇನೆ’ ಎಂದು ಭರವಸೆ ನೀಡಿದರು. ಬಸ್, ಲಾರಿ ಮತ್ತಿತರ ಘನ ವಾಹನಗಳು ಕರ್ಕಶ ಶಬ್ದ ಹೊರಡಿಸುವ ವ್ಯಾಕ್ಯೂಮ್ ಹಾರ್ನ್ನ್ನು ಬಳಸುತ್ತಿರುವ ಕುರಿತು ಕೂಡ ದೂರುಗಳು ಬಂದವು. ಪೆರಂಪಳ್ಳಿ ರಸ್ತೆಯ ಆಹಾರ ನಿಗಮದ ಗೋದಾಮು ಬಳಿ ತಿರುವು ರಸ್ತೆಯಲ್ಲಿ ಉಂಟಾಗುತ್ತಿರುವ ಸಮಸ್ಯೆಯ ಬಗ್ಗೆ ದೂರು ಬಂತು.
Related Articles
Advertisement
ಕಲ್ಯಾಣಪುರ ಸಂತೆಕಟ್ಟೆ ಜಂಕ್ಷನ್ ರಾ.ಹೆದ್ದಾರಿಯಲ್ಲಿ ಬಸ್‌ನಿಲ್ದಾಣವಲ್ಲದ ಜಾಗದಲ್ಲಿ ಬಸ್ ನಿಲುಗಡೆ ಮಾಡುತ್ತಿರುವುದರಿಂದ ಅಪಾಯ ಉಂಟಾಗಿದೆ ಎಂದು ಎಸ್‌ಪಿಯವರಿಗೆ ದೂರು ಸಲ್ಲಿಸಲಾಯಿತು.
ಸಿಸಿಟಿವಿಗಳನ್ನು ಸುಸ್ಥಿಯಲ್ಲಿಡುವುದು, ಸಂಚಾರ ನಿಯಮ ಉಲ್ಲಂಘನೆಯನ್ನು ಕ್ಯಾಮೆರಾಗಳ ಮೂಲಕವೂ ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವುದು ಮೊದಲಾದ ಯೋಜನೆಗಳನ್ನು ಕಾರ್ಯಗತಗೊಳಿಸುವ ಉದ್ದೇಶವಿದೆ ಎಂದು ಎಸ್‌ಪಿ ತಿಳಿಸಿದರು.
ಕಲ್ಲು ಗಣಿಗಾರಿಕೆ, ಮರಳುಗಾರಿಕೆ ತೊಂದರೆ ಬಾರಕೂರು ಹಾಳೆಕೋಡಿಯಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಲಾರಿಗಳ ಓಡಾಟದಿಂದ ಶಾಲಾ ವಿದ್ಯಾರ್ಥಿಗಳು ನಡೆದಾಡುವುದಕ್ಕೂ ತೊಂದರೆಯಾಗಿದೆ. ಶಿರ್ವದಲ್ಲಿ ಕಲ್ಲು ಕ್ವಾರೆಯಲ್ಲಿನ್ಪೋಟಗಳನ್ನು ಬಳಸುತ್ತಿರುವುದರಿಂದ ಮನೆಯ ಬಿರುಕು ಬಿಟ್ಟಿದೆ ಎಂಬ ದೂರುಗಳು ಬಂದವು. ಕಾರ್ಕಳ ಮಾರ್ಕೆಟ್ ರಸ್ತೆ ಅವ್ಯವಸ್ಥೆ
ಕಾರ್ಕಳ ಮಾರ್ಕೆಟ್ ರಸ್ತೆ ಅವ್ಯವಸ್ಥೆಯಿಂದ ಕೂಡಿದೆ. ಇಲ್ಲಿನ ಎಸ್‌ವಿಟಿ ಶಾಲಾ ವಿದ್ಯಾರ್ಥಿಗಳು ಮತ್ತು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ತೀವ್ರ ತೊಂದರೆಯಾಗುತ್ತಿದೆ. ಹಾಗಾಗಿ ಶಾಲಾ ಸಮಯದಲ್ಲಿ, ಮುಖ್ಯವಾಗಿ ವಾರದ ಸಂತೆಯ ದಿನವಾದ ಶನಿವಾರದಂದು ಭಾರೀ ಸಮಸ್ಯೆಯಾಗುತ್ತದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸ್‌ಪಿ ಅವರು “ಪ್ರತಿ ಶನಿವಾರ ಆ ಸ್ಥಳದಲ್ಲಿ ಓರ್ವ ಪೊಲೀಸ್ ಸಿಬಂದಿಯನ್ನು ನಿಯೋಜಿಸುತ್ತೇನೆ. ರಸ್ತೆಗುಂಡಿ ಸರಿಪಡಿಸುವ ಕುರಿತು ಕಾರ್ಕಳ ಪುರಸಭೆ ಜತೆಗೂ ಮಾತನಾಡುತ್ತೇನೆ’ ಎಂದು ಹೇಳಿದರು. ತಮ್ಮನ ಸಾವಿನ ಮಾಹಿತಿ ಕೊಡಿ
“ನನ್ನ ತಮ್ಮ ನವೆಂಬರ್‌ನಲ್ಲಿ ಮೃತಪಟ್ಟಿದ್ದಾನೆ. ಆತ ಆತ್ಮಹತ್ಯೆ ಮಾಡಿಕೊಂಡನೋ ಅಥವಾ ಅವನನ್ನು ಕೊಲೆ ಮಾಡಲಾಯಿತೋ ಎಂಬುದು ಇನ್ನೂ ಕೂಡ ತಿಳಿದಿಲ್ಲ. ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರ ಬಗ್ಗೆ ನಮಗೆ ಮಾಹಿತಿ ನೀಡಿ’ ಎಂದು ಗಂಗೊಳ್ಳಿಯ ಮಹಿಳೆಯೋರ್ವರು ಮನವಿ ಮಾಡಿದರು. “ಈ ಸಾವಿನ ಕುರಿತು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ. ಅತೀ ಶೀಘ್ರವಾಗಿ ಮಾಹಿತಿ ನೀಡುತ್ತೇನೆ’ ಎಂದು ಎಸ್‌ಪಿ ಲಕ್ಷ್ಮಣ್ ನಿಂಬರ್ಗಿ ಭರವಸೆ ನೀಡಿದರು. ಕೇಳಿಬಂದದ್ದು…
-ಕಾರ್ಕಳ ತಾ| ಮಟ್ಟದಲ್ಲಿಯೂ ಪೋನ್ -ಇನ್ ಮಾಡಬೇಕು.
– ಮಿಷನ್ ಕಂಪೌಂಡ್ ಬಳಿ ನಡೆಯುತ್ತಿರುವ ಗುಟ್ಕಾ ಮಾರಾಟ ನಿಲ್ಲಿಸಿ.
– ಉಡುಪಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪರಿಸರದಲ್ಲಿ ಹೆಚ್ಚುತ್ತಿರುವ ವೇಶ್ಯಾವಾಟಿಕೆಗೆ ಕಡಿವಾಣ ಹಾಕಿ.
– ಬೈಂದೂರಿನಲ್ಲಿ ಓರ್ವ ಪೊಲೀಸ್ ಸಿಬಂದಿಯೇ ವಸೂಲಿ ಮಾಡುತ್ತಿದ್ದಾರೆ. ಕ್ರಮ ಕೈಗೊಳ್ಳಿ.
– ಕೋಟೇಶ್ವರ ವಕ್ವಾಡಿಯಲ್ಲಿ ನಡೆಯುತ್ತಿರುವ ಮೀಟರ್ ಬಡ್ಡಿ ವ್ಯವಹಾರ ನಿಲ್ಲಿಸಿ.
– “ನಾನು ಕೆಲಸ ಮಾಡುವ ಕಚೇರಿಯಲ್ಲಿ ಕಿರುಕುಳವಾಗುತ್ತಿದೆ’- ಮಹಿಳೆಯ ದೂರು