Advertisement

“ಮಾರುಕಟ್ಟೆಗಳ ಸ್ಥಿತಿ-ಗತಿ ಅಧ್ಯಯನಕ್ಕೆ ಶೀಘ್ರ ವಿಶೇಷ ತಂಡ’

11:06 PM Apr 22, 2021 | Team Udayavani |

ಮಹಾನಗರ: ಮಂಗಳೂರಿನಲ್ಲಿ ಈಗಾ ಗಲೇ ನಿರ್ಮಾಣಗೊಂಡಿರುವ ಮಾರುಕಟ್ಟೆಗಳ ಸ್ಥಿತಿ-ಗತಿ, ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧ್ಯಯನ ನಡೆಸಿ ಎಲ್ಲ ಮಾರುಕಟ್ಟೆಗಳನ್ನು ಗ್ರಾಹಕ-ವ್ಯಾಪಾರಸ್ಥ ಸ್ನೇಹಿಯಾಗಿ ರೂಪಿಸುವುದಕ್ಕೆ ಪರಿಣತರನ್ನು ಒಳಗೊಂಡ ವಿಶೇಷ ತಂಡ ರಚಿಸ ಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್‌ ಪ್ರೇಮಾನಂದ ಶೆಟ್ಟಿ ಹಾಗೂ ಆಯಕ್ತ ಅಕ್ಷಯ್‌ ಶ್ರೀಧರ್‌ ತಿಳಿಸಿದ್ದಾರೆ.

Advertisement

“ಮಾರುಕಟ್ಟೆ ಸುಧಾರಣೆ ಎಂದು?’ಎಂಬ ಶೀರ್ಷಿಕೆ ಯಡಿ ಉದಯವಾಣಿ ಸುದಿನವು ಸುಮಾರು 2 ವಾರಗಳ ಕಾಲ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಪೂರಕವಾಗಿ ಗುರುವಾರ ಉದಯವಾಣಿ ಕಚೇರಿಯಲ್ಲಿ ಆಯೋಜಿಸಿದ್ದ ನೇರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರವಾಣಿ ಕರೆಗಳಿಗೆ ಉತ್ತರಿಸಿದ ಮೇಯರ್‌ ಹಾಗೂ ಆಯುಕ್ತರು, ನಗರದಲ್ಲಿ ಈಗಾಗಲೇ ನಿರ್ಮಾಣಗೊಂಡಿ

ರುವ ಮಾರುಕಟ್ಟೆಗಳು ನಾನಾ ರೀತಿಯ ಸಮಸ್ಯೆ ಎದುರಿಸು ತ್ತಿರುವುದು ನಿಜ. ಆಯಾ ಮಾರುಕಟ್ಟೆಗಳಲ್ಲಿ ಗ್ರಾಹಕರು, ವ್ಯಾಪಾರಸ್ಥರ ಅನುಕೂಲಕ್ಕೆ ತಕ್ಕಂತೆ ಕೆಲವೊಂದು ಸುಧಾರಣೆ ತರಲು ಪ್ರಯತ್ನಿಸಲಾಗುವುದು. ಈ ಹಿನ್ನೆಲೆಯಲ್ಲಿ ಪ್ರತಿ ಮಾರುಕಟ್ಟೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಆ ಮೂಲಕ ಪರಿಹಾರ ಕಂಡು ಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ವಿಶೇಷ ತಂಡ ರಚಿಸಲಾಗುವುದು. ಈ ತಜ್ಞರ ತಂಡದಲ್ಲಿ ಪಾಲಿಕೆ ಎಂಜಿನಿಯರ್‌, ನಗರ ಯೋಜನ ವಿಭಾಗದ ಅಧಿಕಾರಿಗಳು, ಜನ ಪ್ರತಿನಿಧಿಗಳು ಹಾಗೂ ಸ್ಥಳೀಯ ಮಾರುಕಟ್ಟೆ ವ್ಯಾಪಾರಸ್ಥರ ಪ್ರತಿನಿಧಿಗಳು ಒಳಗೊಂಡಿರುತ್ತಾರೆ. ಈ ತಂಡ ಈಗಾಗಲೇ ನಿರ್ಮಾಣವಾಗಿರುವ ಮಾರುಕಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವ ಸ್ಥಿತಿ, ಸಮಸ್ಯೆ, ಸುಧಾರಣೆಗಳನ್ನು ಪರಿಶೀಲಿಸಲಿದೆ. ಅಲ್ಲಿನ ವ್ಯಾಪಾರಸ್ಥರಿಂದಲೂ ಅಭಿಪ್ರಾಯ ಪಡೆಯ ಲಾಗುವುದು ಎಂದರು. ನಗರದಲ್ಲಿ ಹೊಸದಾಗಿ ಸಹಿತ ಕೆಲವು ಕಡೆ ಮಂದಿನ ಹಂತದಲ್ಲಿ ಮಾರುಕಟ್ಟೆಗಳ ನಿರ್ಮಾಣಕ್ಕೆ ಪ್ರಸ್ತಾವನೆಗಳಿವೆ.

ಫೋನ್‌-ಇನ್‌ಗೆ  ಉತ್ತಮ ಸ್ಪಂದನೆ :

ಮಂಗಳೂರಿನ ಮಾರುಕಟ್ಟೆಗಳ ಸ್ಥಿತಿ-ಗತಿ ಕುರಿತಂತೆ ಉದಯವಾಣಿ ಸುದಿನವು “ಮಾರುಕಟ್ಟೆ ಸುಧಾರಣೆ ಎಂದು?’ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಪೂರಕವಾಗಿ ಗುರುವಾರ ಮೇಯರ್‌ ಪ್ರೇಮಾನಂದ ಶೆಟ್ಟಿ ಹಾಗೂ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರೊಂದಿಗೆ ನಡೆಸಿದ ನೇರ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಸಾರ್ವ ಜನಿಕರು ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೆ ನೀಡಿರುವ ಉತ್ತರ ಇಲ್ಲಿದೆ.   ಮೊಹಮ್ಮದ್‌ ಅಶ್ರಫ್‌, ಕಾವೂರು

Advertisement

ಕಾವೂರು ಜಂಕ್ಷನ್‌ನಲ್ಲಿಯೇ ವ್ಯಾಪಾರ ನಡೆಸಲಾಗುತ್ತಿದೆ. ಹತ್ತಿರದಲ್ಲಿರುವ ಹೊಸ ಮಾರುಕಟ್ಟೆಗೆ ಇನ್ನೂ ವ್ಯಾಪಾರಿಗಳು ತೆರಳುತ್ತಿಲ್ಲ. ಇದರ ಬಗ್ಗೆ ಗಮನಹರಿಸಿ.

ಆಯುಕ್ತರು: ಜಂಕ್ಷನ್‌ನಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗುವ ಹಾಗೆ ವ್ಯಾಪಾರ ನಡೆಸಲು ಅವಕಾಶ ಇಲ್ಲ. ಹೊಸ ಮಾರುಕಟ್ಟೆಗೆ ಅವರನ್ನು ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು.

ಯು.ರಾಮರಾವ್‌, ಮಂಗಳೂರು

ಉರ್ವಸ್ಟೋರ್‌ನ ಮಾರುಕಟ್ಟೆ ಸಮಸ್ಯೆಯಲ್ಲಿದೆ. ಹತ್ತಿರವೇ ಮೈದಾನವಿ ರುವ ಕಾರಣದಿಂದ ಉತ್ತಮ ಮಾರುಕಟ್ಟೆ ಇಲ್ಲಿ ನಿರ್ಮಿಸಲು ಸಾಧ್ಯವಿದೆ.

ಮೇಯರ್‌: ಉರ್ವಸ್ಟೋರ್‌ನಲ್ಲಿ ಹೊಸ ಮಾರುಕಟ್ಟೆ ನಿರ್ಮಾಣದ ಬಗ್ಗೆ ಪ್ರಸ್ತಾವವಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ವಲ್ಸಿ ರೇಗೋ, ಮಂಗಳೂರು

ಕಾವೂರಿನಲ್ಲಿ ರಸ್ತೆ ಬದಿಯಲ್ಲಿಯೇ ಮೀನು, ತರಕಾರಿ ಮಾರಾಟ ಮಾಡಲಾಗುತ್ತಿದೆ. ಫುಟ್‌ಪಾತ್‌ನಲ್ಲಿ ಸಮಸ್ಯೆ ಆಗುತ್ತಿದೆ.

ಮೇಯರ್‌: ಕಾವೂರು ಸುಸಜ್ಜಿತ ಮಾರುಕಟ್ಟೆ ನಿರ್ಮಿಸಲಾಗಿದೆ. ವ್ಯಾಪಾರಿಗಳು ಅಲ್ಲಿಗೆ ತೆರಳಬೇಕಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

-ವಸಂತಿ, ಕಂಕನಾಡಿ

ಕಂಕನಾಡಿ ಹೊಸ ಮಾರುಕಟ್ಟೆ ಕಾಮಗಾರಿ ಸಂದರ್ಭ ಪರಿಸರದಲ್ಲಿ ಹಲವು ಸಮಸ್ಯೆಗಳಾಗುತ್ತಿದೆ. ವಾಹನ ಅಪಘಾತಕ್ಕೂ ಕಾರಣವಾಗಿದೆ.

ಮೇಯರ್‌: ಅಲ್ಲಿನ ಸಮಸ್ಯೆ ಬಗ್ಗೆ ಗಮನಕ್ಕೆ ಬಂದಿದೆ. ಮಳೆಗಾಲದ ಮೊದಲೇ ಇಲ್ಲಿ ಪೂರಕ ಕೆಲಸಗಳನ್ನು ಕೈಗೊಳ್ಳಲಾಗುವುದು. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಗಮನಿಸಲಾಗುವುದು.

ಪ್ರಕಾಶ್‌ ಬಿ.ಸಾಲ್ಯಾನ್‌, ಮಂಗಳೂರು

ಬಿಜೈ ಮಾರುಕಟ್ಟೆಯ ವ್ಯಾಪಾರಿಗಳ ನೀರಿನ ಬಿಲ್‌ ಅನ್ನು ಅಧಿಕಾರಿ ಗಳು ದಿಢೀರ್‌ ಕಟ್‌ ಮಾಡಿ ರು ವುದು ಸರಿಯಲ್ಲ. ಜತೆಗೆ ಎಲ್ಲ ಮಾರುಕಟ್ಟೆಗಳ ನಿರ್ವಹ ಣೆಗಾಗಿ ಉಸ್ತುವಾರಿ ಸಮಿತಿ ರಚಿಸಬೇಕು.

ಮೇಯರ್‌: ಎಲ್ಲ ಮಾರುಕಟ್ಟೆಗಳ ನಿರ್ವಹಣೆ ದೊಡ್ಡ ಸವಾಲಿದೆ. ಈ ಬಗ್ಗೆ ಎಲ್ಲ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿ ವ್ಯಾಪಾರಿಗಳನ್ನು ಒಳಗೊಂಡಂತೆ ಸಮಿತಿ ರಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.

-ಇಕ್ಬಾಲ್‌ ಕಂಕನಾಡಿ

ಕಂಕನಾಡಿಯಲ್ಲಿ ಹೊಸ ಮಾರುಕಟ್ಟೆ ಕಾಮಗಾರಿಯಿಂದಾಗಿ ಸೂಕ್ತ ರಸ್ತೆ ವ್ಯವಸ್ಥೆಯಿಲ್ಲ. ಕಾಮಗಾರಿಗೆ ಬೇಕಾಗುವ ವಸ್ತುಗಳ ಸಾಗಾಟಕ್ಕೆ ಪರ್ಯಾಯ ರಸ್ತೆ ಬಳಸಿದರೆ ಉತ್ತಮ.

ಆಯುಕ್ತರು: ಇಲ್ಲಿನ ರಸ್ತೆ ದುರಸ್ತಿಗೆ ಸಂಬಂಧಿಸಿ 1 ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಎಂ.ಪಿ.ಕಾಮತ್‌, ಮಂಗಳೂರು

ಸೆಂಟ್ರಲ್‌ ಮಾರುಕಟ್ಟೆಯ ಸುತ್ತ ಬೀದಿ ಬದಿ ವ್ಯಾಪಾರವೇ ತುಂಬಿದ್ದು, ಪಾರ್ಕಿಂಗ್‌ಗೆ ಜಾಗ ಇಲ್ಲದಾಗಿದೆ. ಇದನ್ನು ತೆರವು ಮಾಡಬೇಕು.

ಮೇಯರ್‌: ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಗೋಪಾಲಕೃಷ್ಣ ಕಾವೂರು

ಕಾವೂರು ಮಾರುಕಟ್ಟೆ ಸುಸಜ್ಜಿತವಾಗಿದ್ದರೂ ವ್ಯಾಪಾರಿಗಳು ಅಲ್ಲಿಗೆ ತೆರಳುತ್ತಿಲ್ಲ. ರಸ್ತೆಬದಿಯಲ್ಲಿಯೇ ವ್ಯಾಪಾರ ನಡೆಯುತ್ತಿದೆ.

ಆಯುಕ್ತರು: ರಸ್ತೆ ಬದಿ ವ್ಯಾಪಾರ ನಡೆಸುವವರ ತೆರವಿಗೆ ಕ್ರಮ ಕೈಗೊಳ್ಳುತ್ತೇವೆ. ಜತೆಗೆ ಕಾವೂರು ಜಂಕ್ಷನ್‌ ಪಕ್ಕದಲ್ಲಿಯೇ ಪಾಲಿಕೆಯ ವಾರ್ಡ್‌ ಕಚೇರಿ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ನಾಗೇಶ್‌ ಕಲ್ಲೂರು, ಹಂಪನಕಟ್ಟೆ

ಕಂಕನಾಡಿ ಮಾರುಕಟ್ಟೆಯ ಕಾಮಗಾರಿ ಸದ್ಯ ಅಪಾಯಕಾರಿ ರೀತಿ ಯಲ್ಲಿ ನಡೆಯುತ್ತಿದೆ. ಮಳೆಗಾಲಕ್ಕೆ ಮತ್ತೆ ಅಪಾಯ ಎದುರಾಗುವ ಸಾಧ್ಯತೆಯಿದೆ.

ಆಯುಕ್ತರು: ಸ್ಥಳೀಯರಿಗೆ ಹಾಗೂ ಪಾರ್ಕಿಂಗ್‌ ಸಮಸ್ಯೆ ಆಗದಂತೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

ಜಿ.ಕೆ.ಭಟ್‌, ಮಂಗಳೂರು

ಕೋಟ್ಯಾಂತರ ರೂ. ಖರ್ಚು ಮಾಡಿದ ಉರ್ವ ಮಾರುಕಟ್ಟೆ ಉಪ ಯೋಗಕ್ಕೆ ದಕ್ಕಿಲ್ಲ. ಇದರ ಬದಲು ಬೇರೆ ಯಾರಿಗಾದರೂ ಈ ಮಾರುಕಟ್ಟೆ ಒದಗಿಸಲಿ.

ಮೇಯರ್‌: ಉರ್ವ ಮಾರುಕಟ್ಟೆಯ ಎರಡು ಅಂತಸ್ತುಗಳನ್ನು ಬೇರೆ ಇಲಾಖೆಯವರಿಗೆ ನೀಡುವ ಬಗ್ಗೆ ಮುಡಾ ವತಿಯಿಂದ ಚರ್ಚೆ ನಡೆಯುತ್ತಿದೆ. ಸದ್ಯ ಇರುವ ಮಾರುಕಟ್ಟೆಯನ್ನು ಸುಧಾರಿಸಿಕೊಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಸುಧೀರ್‌ ಜಪ್ಪು

ಜಪ್ಪುವಿನ ಮೀನಿನ ಮಾರುಕಟ್ಟೆ ಪೂರ್ಣವಾಗಿ ಬಳಕೆಯಾಗುತ್ತಿಲ್ಲ. ಮೇಲಿನ ಮಹಡಿ ಖಾಲಿ ಇದೆ. ಪಾರ್ಕಿಂಗ್‌ ವ್ಯವಸ್ಥೆಯೂ ಇಲ್ಲ.

ಮೇಯರ್‌: ಮೀನಿನ ಮಾರುಕಟ್ಟೆಯನ್ನು ಮೀನು ಫೆಡರೇಶನ್‌ ವತಿಯಿಂದ ನಿರ್ಮಿಸಲಾಗಿದೆ. ಇದನ್ನು ಇತರ ಕಾರಣ ಕ್ಕಾಗಿ ಬಳಸಲು ಅವಕಾಶ ಇದೆಯೇ ಎಂಬುದನ್ನು ಪರಿಶೀಲಿ ಸಲಾಗುವುದು.

ರಾಜೇಂದ್ರ ಚಿಲಿಂಬಿ

ಉರ್ವ ಮಾರುಕಟ್ಟೆ ನಿರ್ಮಾಣವಾದರೂ ಬಳಕೆಗೆ ದೊರಕಿಲ್ಲ. ಸೆಂಟ್ರಲ್‌ ಮಾರುಕಟ್ಟೆ ಇದೀಗ ನನೆಗುದಿಗೆ ಬಿದ್ದಿದೆ. ಯಾಕಾಗಿ ಈ ಸಮಸ್ಯೆ?

ಆಯುಕ್ತರು: ಉರ್ವ ಮಾರುಕಟ್ಟೆಯ ಸಮಸ್ಯೆ ಬೇಗನೆ ಸರಿಯಾ ಗಲಿದೆ. ಈ ಮೂಲಕ ಬಳಕೆಗೆ ಲಭಿಸಲಿದೆ. ಸೆಂಟ್ರಲ್‌ ಮಾರುಕಟ್ಟೆ ನ್ಯಾಯಾಲಯದಲ್ಲಿ ಇದ್ದ ಕಾರಣದಿಂದ ತಡವಾಯಿತು.

-ಶ್ರೀನಿವಾಸ್‌ ಮಂಗಳೂರು

ಉರ್ವ ಮಾರುಕಟ್ಟೆ ಆಗಿದ್ದರೂ ಅದು ಪ್ರಯೋಜನ ಇಲ್ಲದಂತಹ ಪರಿಸ್ಥಿತಿಯಲ್ಲಿದೆ. ಯಾಕೆ ಈ ದುಸ್ಥಿತಿ?

ಮೇಯರ್‌: ಇದು ಮುಡಾ ವತಿಯಿಂದ ಮಾಡಿದ ಮಾರುಕಟ್ಟೆ. ಇದನ್ನು ಪಾಲಿಕೆಗೆ ಹಸ್ತಾಂತರ ಮಾಡಬಹುದಾದರೂ ಸುಮಾರು 13 ಕೋ.ರೂ. ಭರಿಸುವುದು ಪಾಲಿಕೆಗೆ ಸದ್ಯ ಕಷ್ಟ ಸಾಧ್ಯ. ಇದರ ಕೆಲವು ಮಹಡಿ ಯನ್ನು ಸಾರ್ವಜನಿಕರಿಗೆ ಬಾಡಿಗೆ ರೂಪದಲ್ಲಿ ನೀಡಲು ನಿರ್ಧರಿಸಿದೆ.

ನವೀನ್‌ ಡಿ’ಸೋಜಾ, ಮಂಗಳೂರು

ಕಂಕನಾಡಿ ಮಾರುಕಟ್ಟೆ ನಿರ್ಮಾಣದ ವೇಳೆ “ಲೋಕಲ್‌ ಸೇಫ್ಟಿ’ಗೆ ಆದ್ಯತೆ ನೀಡಬೇಕು. ರಿಟೈನಿಂಗ್‌ ಹಾಲ್‌ ನಿರ್ಮಿಸಬೇಕು.

ಮೇಯರ್‌: ಕಂಕನಾಡಿ ಮಾರುಕಟ್ಟೆಯನ್ನು ಜನಸ್ನೇಹಿಯಾಗಿ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು.

ಸಾರ್ವಜನಿಕರು, ಸೆಂಟ್ರಲ್‌ ಮಾರ್ಕೆಟ್‌

ಸೆಂಟ್ರಲ್‌ ಮಾರುಕಟ್ಟೆ ಸ್ಥಳಾಂತರದ ನೆಪದಲ್ಲಿ ಎಲ್ಲರಿಗೂ ಪರ್ಯಾಯ ವ್ಯವಸ್ಥೆ ಮಾಡದೆ ಬೀದಿಗೆ ತಳ್ಳಲಾಗಿದೆ. ಆದರೆ ಹೊರಗಡೆ ವ್ಯಾಪಾರ ಈಗಲೂ ಸಾಂಗವಾಗಿ ನಡೆಯುತ್ತಿದೆ.

ಆಯುಕ್ತರು: ಟ್ರೇಡ್‌ ಲೈಸೆನ್ಸ್‌ ಇರುವವರಿಗೆ ವ್ಯಾಪಾರಕ್ಕೆ ಅವಕಾಶ ನೀಡ ಲಾಗಿದೆ. ಉಳಿದಂತೆ ತೊಂದರೆ  ಆಗುತ್ತಿರುವವರು ಪಾಲಿಕೆಯ ಗಮನಕ್ಕೆ ತರಲಿ. ಮೇಯರ್‌: ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಆ ವೇಳೆಯಲ್ಲಿ ಕಾನೂನಾತ್ಮಕ ಸಮಸ್ಯೆ ಎದುರಾಗಿತ್ತು.

ರಾಜೇಶ್‌ ಶೆಟ್ಟಿ, ಮಂಗಳೂರು

ನಗರದ ಒಂದೊಂದು ಮಾರುಕಟ್ಟೆಗಳು ಒಂದೊಂದು ಸಮಸ್ಯೆ ಎದುರಿಸುತ್ತಿರುವ ಕಾರಣದಿಂದ ಇದರ ಬಗ್ಗೆ ಸೂಕ್ತವಾಗಿ ತಿಳಿದು ಮುಂದಿನ ಹೆಜ್ಜೆ ಇಡಲು ಆಯಾ ಮಾರುಕಟ್ಟೆಯ ಪ್ರಮುಖರ ಒಳಗೊಂಡ ತಜ್ಞರ ಸಮಿತಿ ರಚಿಸಬೇಕು.

ಆಯುಕ್ತರು: ಮಾರುಕಟ್ಟೆಗಳ ಬಗ್ಗೆ ಅಧ್ಯಯನ ಮಾಡುವ ಸಲುವಾಗಿ ಮಾರುಕಟ್ಟೆಯ ಒಬ್ಬ ಪ್ರತಿನಿಧಿ ಒಳಗೊಂಡತೆ ತಜ್ಞರ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು.

- ಸಂತೋಷ್‌ ಸುರತ್ಕಲ್‌

ಸುರತ್ಕಲ್‌ ಮಾರುಕಟ್ಟೆ ಕಾಮಗಾರಿ ಆರಂಭವಾಗಿ 4 ವರ್ಷ ಆಗಿದೆ. ಇನ್ನೂ ಮುಗಿದಿಲ್ಲ ಯಾವಾಗ ಪೂರ್ಣವಾಗಬಹುದು?

  ಮೇಯರ್‌: ಬೇರೆ ಬೇರೆ ಇಲಾಖೆಗಳ ಜಾಗವನ್ನು ಒಟ್ಟು ಮಾಡಿ ಸುರತ್ಕಲ್‌ ಮಾರುಕಟ್ಟೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಈ ಪ್ರಕ್ರಿಯೆ ಕೆಲವೊಂದು ತಾಂತ್ರಿಕ ಕಾರಣದಿಂದ ತಡವಾಗಿತ್ತು. ಇದೀಗ ಎಲ್ಲವೂ ಸರಿಯಾದ ಸ್ಥಿತಿಗೆ ಬಂದಿದೆ. ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಸರಕಾರಕ್ಕೆ ಅನುದಾನಕ್ಕಾಗಿ ಪತ್ರ ಬರೆಯಲಾಗುವುದು. ಅದಾದ ಬಳಿಕ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು.

 ಮಾರುಕಟ್ಟೆಗಳಿಗೆ ಭೇಟಿ :

ಉದಯವಾಣಿ-ಸುದಿನವು ಸುಮಾರು 2 ವಾರಗಳ ಕಾಲ ನಗರದ ಮಾರುಕಟ್ಟೆಗಳ ಕುರಿತು ನಡೆಸಿರುವ ಈ ಅಭಿಯಾನದಲ್ಲಿ ಸಾಕಷ್ಟು ಅಂಶಗಳು ಉಲ್ಲೇಖವಾಗಿದೆ. ಆಯಾ ಮಾರುಕಟ್ಟೆಗಳಿಗೆ ಸಂಬಂಧಿಸಿದಂತೆ ಪ್ರಕಟಗೊಂಡಿದ್ದ ವರದಿಗಳಲ್ಲಿ ಅಲ್ಲಿನ ಸಮಸ್ಯೆ, ನ್ಯೂನತೆಗಳು, ವ್ಯಾಪಾರಸ್ಥರು, ಗ್ರಾಹಕರು ನೀಡಿರುವ ಸಲಹೆಗಳು ನಮ್ಮ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರು, ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಶೀಘ್ರದಲ್ಲೇ ಎಲ್ಲ ಪ್ರಮುಖ ಮಾರುಕಟ್ಟೆಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವಾಂಶದ ಬಗ್ಗೆ ಪರಿಶೀಲಿಸಲು ಉದ್ದೇಶಿಸಲಾಗಿದೆ ಎಂದು ಮೇಯರ್‌ ಹೇಳಿದ್ದಾರೆ.

ಕಾಲಮಿತಿಯೊಳಗೆ ಪೂರ್ಣ :

ಪ್ರಸ್ತುತ ಕದ್ರಿ, ಕಂಕನಾಡಿ ಮಾರುಕಟ್ಟೆ ನಿರ್ಮಾಣ ಕಾಮಗಾರಿಗಳು  ನಡೆಯುತ್ತಿದ್ದು, ಇವುಗಳನ್ನು ಕಾಲಮಿತಿಯೊಳಗೆ ಪೂರ್ಣ ಗೊಳಿಸಲಾಗುವುದು. 12.30 ಕೋ.ರೂ. ವೆಚ್ಚದ ಕದ್ರಿ ಮಾರುಕಟ್ಟೆಗೆ ಎದುರಾಗಿದ್ದ ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿದೆ. ಈ ಮಾರುಕಟ್ಟೆಯ ಶೇ. 30ರಷ್ಟು ಕಾಮ ಗಾರಿಗಳು ಮುಗಿದ್ದು, ಉಳಿದ ಕಾಮಗಾರಿ ಪೂರ್ಣಗೊಳಿಸಲು 10 ತಿಂಗಳುಗಳ ಕಾಲಮಿತಿ ನೀಡಲಾಗಿದೆ. ಕಂಕನಾಡಿ ಮಾರು ಕಟ್ಟೆಯ ಕಾಮಗಾರಿ ಭರದಿಂದ ಸಾಗುತ್ತಿದ್ದು, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕ್ರಮ ವಹಿಸಲಾಗಿದೆ ಎಂದು ಮೇಯರ್‌ ತಿಳಿಸಿದರು.

ಸಕಾಲಿಕ ಅಭಿಯಾನ :

ನಗರದ ಸಮಸ್ಯೆಗಳು, ಮೂಲಸೌಕರ್ಯಗಳಲ್ಲಿನ ಲೋಪಗಳು, ಆವಶ್ಯಕತೆಗಳ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆಯುವ ಎಚ್ಚರಿಸುವ ಹಲವಾರು ಅಭಿಯಾನಗಳು ನಡೆದಿವೆ. ನಾನು 25 ವರ್ಷಗಳಿಂದ ಜನಪ್ರತಿನಿಧಿ ಯಾಗಿದ್ದೇನೆ. ಆದರೆ ಈ ಬಾರಿ ಉದಯವಾಣಿ – ಸುದಿನ ನಡೆಸಿದ ಈ ನಗರ ಮಾರುಕಟ್ಟೆ ಅಭಿಯಾನ ಸಕಾಲಿಕವಾಗಿ ಮತ್ತು ವಿಭಿನ್ನವಾಗಿ ಮೂಡಿಬಂದಿದೆ. ಮಾರುಕಟ್ಟೆಗಳ ಬಗ್ಗೆ ಅಧ್ಯಯನ ನಡೆಸಿ, ವಾಸ್ತವಾಂಶಗಳನ್ನು ತಿಳಿದುಕೊಂಡು ವರದಿಗಳಲ್ಲಿ ಪ್ರತಿಬಿಂಬಿ

ಸಲಾಗಿದೆ. ಮಾರುಕಟ್ಟೆಗಳಿಗೆ ಸಂಬಂಧಿಸಿದಂತೆ ಈವರೆಗೆ ಬೆಳಕಿಗೆ ಬಾರದ ಹಲವು ಹೊಸ ಅಂಶಗಳ ಬಗ್ಗೆ ಗಮನ ಸೆಳೆಯಲಾಗಿದೆ. ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ದೂರವಾಣಿ ಕರೆಗಳನ್ನು ಮಾಡಿರು ವುದು ಈ ರೀತಿಯ ಅಭಿಯಾನಕ್ಕೆ ಲಭಿಸಿರುವ ಯಶಸ್ವಿ, ಔಚಿತ್ಯಪೂರ್ಣತೆಗೆ ಸಾಕ್ಷಿ.-ಪ್ರೇಮಾನಂದ ಶೆಟ್ಟಿ , ಮೇಯರ್‌

“ಮಾರುಕಟ್ಟೆ ಸುಧಾರಣೆ ಎಂದು?’ ಉದಯವಾಣಿ ಸುದಿನ ಅಭಿಯಾನ ಯಲ್ಲಿ ನಗರದಲ್ಲಿ ಪ್ರಸ್ತುತ ನಿರ್ಮಾಣಗೊಂಡಿರುವ ಮಾರುಕಟ್ಟೆಗಳು, ನಿರ್ಮಾಣ ಗೊಳ್ಳುತ್ತಿರುವ ಮಾರುಕಟ್ಟೆಗಳ ವಾಸ್ತವಿಕಾಂಶಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಗಿದೆ. ಅಭಿಯಾನದಲ್ಲಿ ಪ್ರಕಟಗೊಂಡಿರುವ ಅಂಶಗಳು, ಫೋನ್‌ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಗಮನಸೆಳೆದಿರುವ ವಿಚಾರಗಳನ್ನು ಗಮನಕ್ಕೆ ತೆಗೆದುಕೊಂಡಿದ್ದೇವೆ. ಮಾರುಕಟ್ಟೆಗಳಿಗೆ ಮೇಯರ್‌ ಜತೆ ಸೇರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಇವುಗಳ ಪರಿಹಾರಕ್ಕೆ ಪೂರಕವಾಗಿ ಕ್ರಮಗಳನ್ನು ಕೈಗೊಳ್ಳುತ್ತೇವೆ. -ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮಹಾನಗರ ಪಾಲಿಕೆ

Advertisement

Udayavani is now on Telegram. Click here to join our channel and stay updated with the latest news.

Next