Advertisement
ಬ್ರಾಡ್‌ಬ್ಯಾಂಡ್ ಸೇವೆ ಸರಿಯಾಗಿಲ್ಲ. ಮೌಲ್ಯಾಧಾರಿತ ವ್ಯಾಸ್ ಸೇವೆಗೆ ಅಧಿಕ ಹಣ ಪಡೆಯಲಾಗುತ್ತಿದೆ. ಠೇವಣಿ ಹಣ ವಾಪಸು ಮಾಡುತ್ತಿಲ್ಲ….. ಮೊದಲಾದ ವಿಚಾರಗಳಲ್ಲಿ ದೂರವಾಣಿ ಸೇವಾದಾತರಿಂದ ಸಮಸ್ಯೆಗೊಳಗಾದ ಗ್ರಾಹಕರು, ಗ್ರಾಹಕ ನ್ಯಾಯಾಲಯಗಳಿಗೆ ದೂರು ಸಲ್ಲಿಸುವುದು ಸಾಮಾನ್ಯ. ಒಂದು ಉದಾಹರಣೆ ನೆನಪಾಗುತ್ತದೆ ಮತ್ತು ಅದು ಇವತ್ತಿಗೂ ಚಾಲ್ತಿಯಲ್ಲಿದೆ. ಗ್ರಾಹಕನೋರ್ವ ಕಾಲರ್ ಟ್ಯೂನ್ ಹಾಕಿಸಿಕೊಂಡಿದ್ದರೆ ಅದು ವ್ಯಾಸ್, ಹಣ ಕೊಟ್ಟು ಪಡೆದಿರುವ ಸೇವೆ. ತಿಂಗಳಿಗಿಷ್ಟು ಎಂದು ಆತ ಅದಕ್ಕೆ ಹಣ ಪೀಕಲೇಬೇಕು. ಅಂತಹ ಗ್ರಾಹಕನಿಗೆ ಕರೆ ಮಾಡಿದರೆ, ನಮಗೆ ಅವನ ಆಯ್ಕೆಯ ಹಾಡು ಕೇಳುವ ಮೊದಲು “ನೀವೂ ಈ ಹಾಡನ್ನು ನಿಮ್ಮ ಕಾಲರ್‌ಟ್ಯೂನ್ ಆಗಿಸಿಕೊಳ್ಳಲು ಈ ಅಂಕಿ ಒತ್ತಿ’ ಎಂಬ ಸಂದೇಶ ಕೇಳಿಸುತ್ತದೆ. ಕೊನೆಗೂ ಆ ಕಡೆ ಆತ ಕಾಲ್ ಇನ್ನೂ ಸ್ವೀಕರಿಸಿರದಿದ್ದರೆ ಹಾಡು ಕೇಳುತ್ತದೆ. ಬೇರೊಬ್ಬ ಖರೀದಿಸಿದ ಸೇವೆಯಲ್ಲಿ ಮೊಬೈಲ್ ಸೇವಾದಾತ ತನ್ನ ಜಾಹೀರಾತು ಮಾಡಿಕೊಳ್ಳಬಹುದೇ?
ಬಹಳ ವರ್ಷಗಳಿಂದ ಗ್ರಾಹಕ ನ್ಯಾಯಾಲಯಗಳು ಇಂತಹ ಪ್ರಕರಣಗಳನ್ನು ವಿಚಾರಣೆ ಮಾಡಿ ಬಹುತೇಕ ಪ್ರಕರಣಗಳಲ್ಲಿ ದೂರವಾಣಿ ಕಂಪನಿಗಳಿಗೆ ಅವರ ತಪ್ಪಿಗೆ ದಂಡ ವಿಧಿಸಿವೆ. ಈ ನಡುವೆ ಮೊಬೈಲ್ ಸೇವಾದಾತರ ಪಕ್ಷದಲ್ಲಿ ಇರುವ ಅಸಾಧ್ಯ ಬುದ್ಧಿವಂತರು ಗ್ರಾಹಕರನ್ನು ವಂಚಿಸಿಯೂ ಬಚಾವಾಗುವ ತಂತ್ರವೊಂದನ್ನು ಕಂಡುಕೊಂಡರು. ಭಾರತದಲ್ಲಿ ಈಗಲೂ ಚಾಲ್ತಿಯಲ್ಲಿರುವ 1885ರ ಭಾರತೀಯ ಟೆಲಿಗ್ರಾಫ್ ಕಾನೂನನ್ನು ಅವರು ಓದಿದ್ದಾರೆ. ಅದರ ಸೆಕ್ಷನ್ 7-ಬಿ ಪ್ರಕಾರ ಟೆಲಿಕಾಂ ಸೇವಾದಾತರ ವಿರುದ್ಧದ ದೂರುಗಳನ್ನು ಅರೆನ್ಯಾಯಾಂಗ ವ್ಯವಸ್ಥೆಯಡಿ ವಿಚಾರಣೆ ಮಾಡಲು ಅಧಿಕಾರ ಇಲ್ಲ ಎಂಬರ್ಥದ ವ್ಯಾಖ್ಯೆಗಳನ್ನು ಅವರು ನೋಡಿದ್ದಾರೆ. ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದವರಿಗೆ ಬ್ರಹ್ಮಾಸ್ತ್ರವೇ ಸಿಕ್ಕಂತಾಗಿತ್ತು!
Related Articles
Advertisement
ಕೋರ್ಟ್ ತೀರ್ಪಿನ ಬೆಂಬಲ2009ರ ಸೆಪ್ಟೆಂಬರ್ ಒಂದರ ಸುಪ್ರೀಂಕೋರ್ಟ್ ತೀರ್ಪು ಇದಕ್ಕೆಲ್ಲ ಮೂಲ ಕಾರಣ. ಜಿಎಂ ಟೆಲಿಕಾಂ ಹಾಗೂ ಕೃಷ್ಣನ್ ಹಾಗೂ ಇತರರ ಪ್ರಕರಣದ ತೀರ್ಪಿನ ಫಲಿತಾಂಶವಿದು. ಟೆಲಿಗ್ರಾಫ್ ಕಾಯ್ದೆಯ ಸೆಕ್ಷನ್ 7-ಬಿ ಪ್ರಕಾರ ದೂರವಾಣಿ ಬಿಲ್ಲಿಂಗ್ ಸಮಸ್ಯೆಗಳ ಸಂಬಂಧ ಅದರಲ್ಲಿಯೇ ವಿಶೇಷ ಪರಿಹಾರ ಸೌಲಭ್ಯ ಕಲ್ಪಿಸಲು ಅವಕಾಶ ಕೊಡಲಾಗಿದೆ. ಈ ವ್ಯವಸ್ಥೆಯಡಿ ನೊಂದ ಗ್ರಾಹಕ, ಪರಿಹಾರಕ್ಕೆ ಮುಂದಾಗಬಹುದು ಎಂದು ಕಾಯ್ದೆ ಹೇಳಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕ ನ್ಯಾಯಾಲಯದ ಪರಿಧಿಯಲ್ಲಿ ಈ ಪ್ರಕರಣಗಳು ಬರುವುದಿಲ್ಲ ಎಂದು ಉತ್ಛ ನ್ಯಾಯಾಲಯ ಸ್ಪಷ್ಟಪಡಿಸಿತು. ಇದನ್ನು ಬಳಸಿಕೊಂಡ ಟಿಎಸ್‌ಪಿ ಅರ್ಥಾತ್ ಸೇವಾದಾತರು ಗ್ರಾಹಕ ನ್ಯಾಯಾಲಯದ ದೂರು ಪ್ರಕರಣಗಳಲ್ಲೆಲ್ಲ ಮೇಲಿನ ತೀರ್ಪು ಉಲ್ಲೇಖೀಸಿ ಅರ್ಜಿಗಳನ್ನು ವಜಾ ಮಾಡಿಸುವಲ್ಲಿ ಯಶಸ್ವಿಯಾದರು. ಬಹುಶಃ ಈ ಕಾಯ್ದೆಯಡಿಯೇ ಟೆಲಿಕಾಂ ಒಂಬುಡ್ಸ್‌ಮನ್ ವ್ಯವಸ್ಥೆಯನ್ನು ಡಿಓಟಿ ತಂದಿದ್ದರೂ ಟೆಲಿಕಾಂ ಕಂಪನಿಗಳಿಗೆ ಮೂಗುದಾರ ಬೀಳುತ್ತಿತ್ತು. ಪಶ್ಚಿಮ ಬಂಗಾಳದ ಸರ್ಕಾರ ಸೇರಿದಂತೆ ವಿವಿಧ ರಾಜ್ಯಗಳು ದೂರವಾಣಿ ಗ್ರಾಹಕರಿಗೆ ಈ ತೀರ್ಪಿನಿಂದ ಸಂಕಷ್ಟ ಆಗಿರುವುದನ್ನು ಹಾಗೂ ಅಗತ್ಯಬಿದ್ದರೆ ಕಾಯ್ದೆಯಲ್ಲಿ ತಿದ್ದುಪಡಿ ಮಾಡಬೇಕಾಗಿರುವುದನ್ನು ದೂರವಾಣಿ ಇಲಾಖೆಯ ಗಮನಕ್ಕೆ ತಂದಿದ್ದವು. ಆದರೆ ಈ ಹಿಂದೆಯೂ ಹಲವು ಬಾರಿ ಟ್ರಾಯ್ ಟೆಲಿಕಾಂ ಒಂಬುಡ್ಸ್‌ಮನ್‌ನ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿದ್ದರೂ ಸರ್ಕಾರ ಕಿಗೇ ಹಾಕಿಕೊಂಡಿರಲಿಲ್ಲ. 2004ರಷ್ಟು ಹಿಂದೆಯೇ ಟ್ರಾಯ್ ಮೊದಲ ಬಾರಿಗೆ ಒಂಬುಡ್ಸ್‌ಮನ್ ಕರಡು ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು. ಒಂದೆಡೆ ಗುಮ್ಮನಂತೆ ಕಾಡತೊಡಗಿದ್ದ ಹಳೆಯ ಟೆಲಿಕಾಂ ಕಾಯ್ದೆ ಮತ್ತು ಅದರ ವ್ಯಾಖ್ಯಾನ ಗ್ರಾಹಕರಿಗೆ ಬಿಸಿ ತುಪ್ಪವಾಗಿತ್ತು. ಕಾಯ್ದೆಯ ತಿದ್ದುಪಡಿಯ ಒತ್ತಡಗಳೂ ನಿರ್ಮಾಣವಾದವು. ಕಾಯ್ದೆ, ಸುಪ್ರೀಂಕೋರ್ಟ್‌ನ ತೀರ್ಪುಗಳನ್ನು ಪರಿಶೀಲನೆ ನಡೆಸಿದ ಡಿಓಟಿ ಂದಿನ ಕಾಯ್ದೆಯ ಸ್ಪಷ್ಟ ವ್ಯಾಖ್ಯಾನ ಮಾಡಿ ಆದೇಶವೊಂದನ್ನು ಹೊರಡಿಸಿತು. ಅದರ ಪ್ರಕಾರ, 1885ರ ಟೆಲಿಗ್ರಾಫ್ ಕಾಯ್ದೆ ಸರ್ಕಾರದ ದೂರವಾಣಿ ಸೇವೆ ಇದ್ದಾಗಿನ ಕಾಲದಲ್ಲಿ ಇರಬೇಕಾದ ದೂರು ಪರಿಹಾರ ವ್ಯವಸ್ಥೆಯ ಬಗ್ಗೆ ಸೂಚಿಸಿದೆ. ಅಂದಿನ ಡಿಓಟಿ ಒಡೆತನದ ಬಿಎಸ್‌ಎನ್‌ಎಲ್ ಪ್ರಕರಣದ ನ್ಯಾಯಾಲಯದ ತೀರ್ಪನ್ನು ಆ ಪ್ರಕರಣದ ಪರಿಧಿಯಲ್ಲಿಯಷ್ಟೇ ಗಮನಿಸಬೇಕಾಗುತ್ತದೆ. ಈಗ ಬಿಎಸ್‌ಎನ್‌ಎಲ್ ಸೇರಿದಂತೆ ಎಲ್ಲ ದೂರವಾಣಿ ಸೇವಾದಾತರದ್ದು ಪ್ರತ್ಯೇಕ ಖಾಸಗಿ ಕಂಪನಿಗಳಾಗಿವೆ. ಈ ಹಿನ್ನೆಲೆಯಲ್ಲಿ ದೂರವಾಣಿ ದೂರುಗಳು ಗ್ರಾಹಕ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡುವ ವ್ಯಾಪ್ತಿಯನ್ನು ಹೊಂದಿವೆ ಎಂದು ಖಚಿತಪಡಿಸಿದೆ. ಡಿಓಟಿ 2-17/2013 ಪಾಲಿಸಿ 1, 24.01.2014 ಆದೇಶವನ್ನು ಎಲ್ಲ ಗ್ರಾಹಕ ನ್ಯಾಯಾಲಯಗಳಿಗೆ ಮುಟ್ಟಿಸಲು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುತ್ತೋಲೆ ಕಳುಹಿಸಿತು. ಇನ್ನು ಮುಂದೆ ಹಳೆಯ ಟೆಲಿಗ್ರಾಫ್ ಕಾಯ್ದೆಯನ್ನು ಹೆಸರಿಸಿ ಗ್ರಾಹಕ ನ್ಯಾಯಾಲಯಗಳು ದೂರವಾಣಿ ಗ್ರಾಹಕರ ದೂರುಗಳನ್ನು ತಿರಸ್ಕರಿಸುವಂತಿಲ್ಲ. ಪದೇ ಪದೇ ಮೌಲ್ಯಾಧಾರಿತ ಸೇವೆ ಎಂಬ ಶೀರ್ಷಿಕೆಯಡಿ ನಷ್ಟಕ್ಕೊಳಗಾಗುತ್ತಿರುವ ಮೊಬೈಲ್ ಬಳಕೆದಾರರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಮತ್ತೆ ಒಂಬುಡ್ಸ್‌ಮನ್ ಹವಾ!
2004ರಲ್ಲಿಯೇ ತನ್ನ ಮೊದಲ ಒಂಬುಡ್ಸ್‌ಮನ್ ಪ್ರಸ್ತಾವನೆ ಇಟ್ಟಿದ್ದ ಟ್ರಾಯ್ ತನ್ನ ಆಸ್ಥೆಯನ್ನು ಬಿಟ್ಟುಕೊಟ್ಟಿಲ್ಲ. ಇತ್ತೀಚೆಗೆ ಮಾರ್ಚ್‌ನಲ್ಲಿ ಮತ್ತೂಮ್ಮೆ ಟೆಲಿಕಾಂ ಒಂಬುಡ್ಸ್‌ಮನ್‌ನ ಸ್ಥಾಪನೆಯ ಪ್ರಸ್ತಾಪವನ್ನು ಕೇಂದ್ರದ ಮುಂದಿರಿಸಿದೆ. ಈಗಿನ ವ್ಯವಸ್ಥೆಯಡಿ ಪ್ರತಿ ತ್ರೆ„ಮಾಸಿಕದಲ್ಲಿ ಸರಾಸರಿ 10 ಮಿಲಿಯನ್ ದೂರುಗಳು ದಾಖಲಾಗುತ್ತಿವೆ. ಇವನ್ನು ನಿರ್ವಹಿಸಲು ಮೂರು ಹಂತಗಳ ದೂರು ನಿವಾರಣಾ ವ್ಯವಸ್ಥೆ ಸ್ಥಾಪನೆಯಾಗಬೇಕು ಎಂದು ಟ್ರಾಯ್ ಪ್ರತಿಪಾದಿಸಿದೆ. 1998ರ ಗ್ರಾಹಕ ದೂರು ನಿವಾರಣಾ ನಿಯಮಗಳ ಅನ್ವಯ ರಚನೆಯಾಗಿರುವ ಮಾ ಲೋಕಪಾಲದ ವ್ಯವಸ್ಥೆಯಂತೆ ಟೆಲಿಕಾಂ ಒಂಬುಡ್ಸ್‌ಮನ್ ಸ್ಥಾಪನೆ ಮಾಡಬೇಕು. ಮೊದಲ ಹಂತದಲ್ಲಿ ಟಿಎಸ್‌ಪಿಯಲ್ಲಿ ದೂರು ನಿರ್ವಹಣೆ, ಇದರ ನಂತರ ನಿವಾರಣೆ ಅಥವಾ ಸಮಾಧಾನ ಪಡೆಯದ ಗ್ರಾಹಕ ದೂರುದಾರರಿಗೆ ಗ್ರಾಹಕ ದೂರು ನಿವಾರಣಾ ವೇದಿಕೆ ಸಿಜಿಆರ್‌ಎಫ್ ಸೌಲಭ್ಯ ಕೊಡಬೇಕು. ಇಲ್ಲೂ ಇತ್ಯರ್ಥವಾಗದಿದ್ದರೆ ಒಂಬುಡ್ಸ್‌ಮನ್‌ಗೆ ಮೊರೆ ಸಲ್ಲಿಸುವ ಅವಕಾಶ ಕೊಡುವುದನ್ನು ಈಗಿರುವ ಆರ್‌ಪಿಜಿ ನಿಯಮಗಳಲ್ಲಿಯೇ ಸುತ್ತೋಲೆ ಮೂಲಕ ಜಾರಿಗೊಳಿಸಬಹುದು. ಸಂಸತ್ತಿನಲ್ಲಿ ಕಾನೂನು ಮಂಜೂರಾತಿ ಪಡೆದೂ ಲೋಕಪಾಲ ರಚಿಸುವುದು ಕಷ್ಟವಲ್ಲ ಎಂಬ ಅಭಿಪ್ರಾಯವಿದೆ. ಟ್ರಾಯ್ ಇದನ್ನು ಹೇಳಲು ಕಾರಣವಿದೆ. ದೂರವಾಣಿ ಗ್ರಾಹಕ ಹಿತರಕ್ಷಣಾ ನಿಯಮಗಳ ಅನ್ವಯ ಒಂಬುಡ್ಸ್‌ಮನ್ ಜಾರಿಯಾಗಬೇಕು ಎಂದರೆ ಮತ್ತೆ ಸಂಸತ್‌ನ ಒಪ್ಪಿಗೆ ಪಡೆಯಬೇಕು. ಟ್ರಾಯ್ ಕಾನೂನಿನ ಸೆಕ್ಷನ್ 11 ಹಾಗೂ 36ರ ಉಪನಿಯಮಗಳ ಅನುಸಾರ ಲೋಕಪಾಲದ ರಚನೆಗೆ ಸಂಕಷ್ಟಗಳಿಲ್ಲ. ಆದರೆ ಜಾರಿಗೆ ಹೆಚ್ಚು ಪ್ರಕ್ರಿಯೆಗಳನ್ನು ಪೂರೈಸಬೇಕಿರುವ ಹಿನ್ನೆಲೆಯಲ್ಲಿ ಮತ್ತಷ್ಟು ವಿಳಂಬವಾಗುತ್ತದೆ. ಇದರ ಬದಲು ಆರ್‌ಪಿಜಿ ನಿಯಮ ಜಾರಿ ಹೆಚ್ಚು ಸುಲಭ ಎಂಬುದು ಅದರ ಇಂಗಿತ. ಇಂದಿನ ದಿನಗಳಲ್ಲಿ ತಾಂತ್ರಿಕವಾಗಿ ಅತ್ಯಾಧುನಿಕವಾಗಿರುವ ವ್ಯವಸ್ಥೆ ತುಂಬಾ ಅಗತ್ಯ. ಟಿಎಸ್‌ಪಿಗಳು ಸ್ಥಳೀಯ ಕಚೇರಿಯಲ್ಲಿ ವೀಡಿಯೋ ಕಾನ್ಫರೆನ್ಸ್ ವ್ಯವಸ್ಥೆಗಳನ್ನು ರೂಪಿಸಬೇಕು. ಸಿಜಿಆರ್‌ಎಫ್ ಅಥವಾ ಒಂಬುಡ್ಸ್‌ಮನ್‌ಗೆ ದೂರು ಸಲ್ಲಿಸುವ ಗ್ರಾಹಕ ಸ್ಥಳೀಯ ಕೇಂದ್ರದಿಂದಲೇ ವಿಚಾರಣೆಗೆ ಪಾಲ್ಗೊಳ್ಳುವಂತಾದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು ಎಂದು ಟ್ರಾಯ್ ಸೂಚಿಸಿದೆ. ಹಲವೆಡೆ ಇದೆ ಲೋಕಪಾಲ!
ಅಷ್ಟಕ್ಕೂ ಮೊಬೈಲ್ ಒಂಬುಡ್ಸ್‌ಮನ್ ನಮ್ಮೂರಿನ ಸಂಶೋಧನೆಯಲ್ಲ. 1993ರ ವೇಳೆಯಲ್ಲಿಯೇ ಆಸ್ಟ್ರೇಲಿಯಾದಲ್ಲಿ ದೂರವಾಣಿ ಒಂಬುಡ್ಸ್‌ಮನ್ ಜಾರಿಯಾಗಿದೆ. 2003ರಲ್ಲಿ ಇಂಗ್ಲೆಂಡ್‌ನಲ್ಲಿ ಚಾಲ್ತಿಗೆ ಬಂದ ಆಫ್ಕಾಮ್ ವ್ಯವಸ್ಥೆ ಸಂಪೂರ್ಣವಾಗಿ ಟೆಲಿಕಾಂ ಒಂಬುಡ್ಸ್‌ಮನ್‌ನ ಪ್ರತಿಕೃತಿಯಂತಿದೆ. ಅಲ್ಲಿನ ಲೋಕಪಾಲರಿಗೆ ಒಟೆಲೋ ಎಂಬ ಹೆಸರು ಕೊಡಲಾಗಿದೆ. ಬಂದ ಕೆಲವೇ ದಿನಗಳಲ್ಲಿ ಅದು ಆಕರ್ಷಕವಾಗಿ ಕೆಲಸ ಮಾಡಿದೆ ಎಂಬ ಉಲ್ಲೇಖಗಳು ಸಿಗುತ್ತವೆ. ಭಾರತದಲ್ಲೂ ಒಂಬುಡ್ಸ್‌ಮನ್ ವ್ಯವಸ್ಥೆ ಹೊಸದಲ್ಲ. ವಿಮಾ ಕ್ಷೇತ್ರದ ಲೋಕಪಾಲ ವ್ಯವಸ್ಥೆ, ಬ್ಯಾಂಕಿಂಗ್ ಒಂಬುಡ್ಸ್‌ಮನ್, ಫೈನಾನ್ಸ್ ಕ್ಷೇತ್ರದ ಜಿಬಿ ವ್ಯವಸ್ಥೆಗಳನ್ನು ಹೆಸರಿಸಬಹುದು. ದೂರವಾಣಿ ದೂರುಗಳ ಇತ್ಯರ್ಥಕ್ಕೆ ಟಿಡಿಸ್ಯಾಟ್‌ನಂತ ವ್ಯವಸ್ಥೆಯೂ ಇದೆ. ಆದರೆ ಇದು ಸೇವಾದಾತರು ಹಾಗೂ ಸರ್ಕಾರದ ನಡುವೆ, ಸೇವಾದಾತರು ಹಾಗೂ ಗ್ರಾಹಕ ಗುಂಪುಗಳ ನಡುವಿನ ಜಿಜಾnಸೆಗಳನ್ನು ಮಾತ್ರ ವಿಚಾರಣೆಗೆ ತೆಗೆದುಕೊಳ್ಳುತ್ತದೆ. ಇಲ್ಲಿನ ನ್ಯಾಯ ವ್ಯವಸ್ಥೆ ದುಬಾರಿ ಕೂಡ. ವೈಯುಕ್ತಿಕ ನೆಲೆಯಲ್ಲಿ ದೂರು ಸಲ್ಲಿಸಿ ನ್ಯಾಯ ಪಡೆಯಬೇಕಾದ ಸುಲಭ ವ್ಯವಸ್ಥೆ ಇಲ್ಲ. ಆ ಸಂಕಷ್ಟಕ್ಕೆ ಒಂಬುಡ್ಸ್‌ಮನ್ ಪರಿಣಾಮಕಾರಿ ಪರಿಹಾರ ಎಂಬುದು ಸ್ಪಷ್ಟ. ಮೊಬೈಲ್ ನಂಬರ್ ಜೊತೆ ಆಧಾರ್ ಲಿಂಕ್
ಕೇಂದ್ರ ಸರ್ಕಾರದ ನಿರ್ದೇಶನದ ಅನ್ವಯ ಎಲ್ಲ ಮೊಬೈಲ್ ಕಂಪನಿಗಳು ತಮ್ಮ ಗ್ರಾಹಕರಿಗೆ ಎಸ್‌ಎಂಎಸ್ ಕಳುಹಿಸಿ ಆದಷ್ಟು ಶೀಘ್ರ ನಿಮ್ಮ ನಿಮ್ಮ ಆಧಾರ್ ನಂಬರ್ ಹಾಗೂ ಬಯೋಮೆಟ್ರಿಕ್‌ನ್ನು ಕಂಪನಿಗೆ ಒದಗಿಸಿ ಸಿಮ್ ನಂಬರ್‌ನ್ನು ಸದಾ ಚಾಲನೆಯಲ್ಲಿಡಿ ಎಂಬ ಸೂಚನೆ ನೀಡುತ್ತಿವೆ. ಕೇಂದ್ರದ ನಿರ್ದೇಶನ ಇರುವುದು ನಿಜವಾದರೂ, ಈ ಪ್ರಕ್ರಿಯೆಗೆ ಬರುವ 2018ರ ಫೆಬ್ರವರಿ ಆರರವರೆಗೆ ಸಮಯವಿದೆ ಎಂಬ ಅಂಶವನ್ನು ಅರಿತಿರಬೇಕಾದುದು ಕ್ಷೇಮ. ಗಡಿಬಿಡಿ ತರವಲ್ಲ. ಅಲ್ಲದೆ, ಈ ಅವಧಿಯ ನಂತರ ಆಧಾರ್ ನೀಡದ ಸಿಮ್ ನಿಷ್ಕ್ರಿಯವಾಗುತ್ತದೆ ಎಂದು ನಿರ್ದೇಶನ ಎಲ್ಲೂ ಹೇಳಿಲ್ಲ. ಕೆಲವು ಮೊಬೈಲ್ ಕಂಪನಿಗಳ ಅಧಿಕೃತ ಔಟ್‌ಲೆಟ್‌ಗಳಲ್ಲಿ ಕೂಡ ಆಧಾರ್ ಹಾಗೂ ಬಯೋಮೆಟ್ರಿಕ್ ಪಡೆಯಲು 100, 50, 20 ಎಂದು ಶುಲ್ಕ ಹೇರುತ್ತಿವೆ. ಕೇಂದ್ರದ ನಿರ್ದೇಶನದ ಅನ್ವಯ ಎಲ್ಲ ಮೊಬೈಲ್ ಕಂಪನಿಗಳು ಈ ಪ್ರಕ್ರಿಯೆ ಸಂಪೂರ್ಣ ಉಚಿತ ಎಂದು ಸ್ಪಷ್ಟಪಡಿಸಿವೆ. ಹಾಗೆಯೇ ಡಿಟಿಹೆಚ್, ಸಿಮ್ ಆಧಾರಿತವಲ್ಲದ ಬ್ರಾಡ್‌ಬ್ಯಾಂಡ್ ಗ್ರಾಹಕರಿಗೆ ಇದು ಅನ್ವಯವಲ್ಲ. ಒಮ್ಮೆ ಲಿಂಕ್ ಮಾಡುತ್ತಿದ್ದಂತೆ ಗ್ರಾಹಕರ ಎಲ್ಲ ವಿವರಗಳು ಆಧಾರ್ ದಾಖಲೆಯಲ್ಲಿದ್ದಂತೆ ಬದಲಾಗಲಿದೆ. ಸದ್ಯ ಸರ್ಕಾರ ಕಾರ್ಪೊರೇಟ್ ಸದಸ್ಯರ ಮೊಬೈಲ್‌ಗಳ ಕುರಿತು ಯಾವುದೇ ಆದೇಶ ನೀಡಿಲ್ಲ. ಆದರೆ ರೋಮಿಂಗ್‌ನಲ್ಲಿರುವ ಗ್ರಾಹಕರು ತಮ್ಮ ಹೋಂ ಸರ್ಕಲ್‌ನಲ್ಲಿಯೇ ಅಪ್‌ಡೇಟ್ ಮಾಡಿಸಬೇಕಾಗುತ್ತದೆ. ಸಿಮ್ ಬದಲಾಗುವುದಿಲ್ಲ, ಪ್ಲಾನ್ ಮಾರ್ಪಡುವುದಿಲ್ಲ ಅಥವಾ ಟಾಕ್‌ಟೈಮ್‌ಗೆ ಕತ್ತರಿ ಬೀಳುವುದಿಲ್ಲ. ಓರ್ವ ಗ್ರಾಹಕ ಒಂದಕ್ಕಿಂತ ಹೆಚ್ಚು ಮೊಬೈಲ್ ಸಿಮ್‌ಗಳನ್ನು ಹೊಂದಿದ್ದರೆ ಅಷ್ಟಕ್ಕೂ ಆಧಾರ್ ಲಿಂಕ್ ಮಾಡಿಸಲೇಬೇಕು. ಒಂದು ಆಧಾರ್‌ಗೆ ಒಂದು ಸಿಮ್ ಮಾತ್ರ ಎಂಬ ಷರತ್ತು ಇಲ್ಲ. ಡಾಟಾ ಕಾರ್ಡ್‌ನಲ್ಲಿರುವ ಸಿಮ್‌ಗೂ ಆಧಾರ್ ಲಿಂಕ್ ಮಾಡಬೇಕು. ದೃಢೀಕರಣಕ್ಕೆ ಅಗತ್ಯವಾದ ಒಟಿಪಿಯನ್ನು ಮತ್ತೂಂದು ಪರ್ಯಾಯ ನಂಬರ್‌ಗೆ ರವಾನಿಸಲಾಗುತ್ತದೆ. ಈಗಾಗಲೇ ಆಧಾರ್ ನಂಬರ್ ಕೊಟ್ಟಿದ್ದವರೂ ಬಯೋಮೆಟ್ರಿಕ್‌ನ್ನು ಮೊಬೈಲ್ ಕಂಪನಿ ಡಾಟಾಬೇಸ್‌ಗೆ ಒದಗಿಸಬೇಕಾಗುತ್ತದೆ. – ಮಾ.ವೆಂ.ಸ.ಪ್ರಸಾದ್ ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ