ಬಿನಾನ್: ಫಿಲಿಪ್ಪೀನ್‌ನಲ್ಲಿ ಕಳೆದ ವಾರ ಸ್ಫೋಟಗೊಂಡ ಜ್ವಾಲಾಮುಖೀಯು ಅಲ್ಲಿನ ಅನೇಕ ಗ್ರಾಮಗಳನ್ನು ಬೂದಿಯ ಹೊದಿಕೆಯಡಿ ಹುದುಗಿಸಿದ್ದರೂ, ಅಲ್ಲಿನ ಜನರ ಜೀವನೋತ್ಸಾಹ ಸ್ವಲ್ಪವೂ ತಗ್ಗಿಲ್ಲ. “ಕಸದಿಂದಲೇ ರಸ’ ಎನ್ನುವಂತೆ ಬಿನಾನ್ ನಗರದ ಜನರು, ಜ್ವಾಲಾಮುಖೀಯಿಂದ ಹೊರಬಿದ್ದಿರುವ ಬೂದಿಯನ್ನು ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ ಮಿಶ್ರ ಮಾಡಿ ಇಟ್ಟಿಗೆಗಳನ್ನು ತಯಾರಿಸುತ್ತಿದ್ದಾರೆ!
ಏಕಾಏಕಿ ಚಿಮ್ಮಿದ ಈ ಜ್ವಾಲೆಯ ಬೂದಿಯ ರಾಶಿಯನ್ನು ನೋಡುತ್ತಾ, ಮುಂದೇನು ಮಾಡುವುದು ಎಂದು ತಲೆ ಮೇಲೆ ಕೈಹೊತ್ತುಕೊಳ್ಳುವ ಬದಲು, ಅದನ್ನೇ ಬಳಸಿಕೊಂಡು ನಮ್ಮ ಪ್ರಯೋಜನಕ್ಕೆ ಬರುವ ವಸ್ತುವನ್ನಾಗಿ ಬದಲಿಸುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಮೊದಲೇ ಫಿಲಿಪ್ಪೀನ್ಸ್ ತ್ಯಾಜ್ಯದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇಲ್ಲಿ ಒಂದೇ ಬಾರಿ ಬಳಸಿ ಬಿಸಾಡುವಂಥ ಪ್ಲಾಸ್ಟಿಕ್‌ನ ಬಳಕೆ ಅತಿಯಾಗಿದೆ. ವರ್ಷಕ್ಕೆ 60 ಶತಕೋಟಿ ಪ್ಲಾಸ್ಟಿಕ್ ಸ್ಯಾಶೆಗಳನ್ನು ಬಳಸಿ ಬಿಸಾಕಲಾಗುತ್ತದೆ. ಒಂದು ಕಡೆ ಜ್ವಾಲಾಮುಖೀಯ ಬೂದಿ, ಮತ್ತೂಂದೆಡೆ ಪ್ಲಾಸ್ಟಿಕ್‌ನ ರಾಶಿ ಎರಡೂ ಹೇರಳವಾಗಿ ಸಿಗುವ ಕಾರಣ ಇಟ್ಟಿಗೆ ತಯಾರಿಸುವ ಯೋಜನೆಯು ಉತ್ತಮ ನಡೆ ಎನ್ನುತ್ತಾರೆ ಪರಿಸರ ವಿಜ್ಞಾನಿಗಳು.
ದಿನಕ್ಕೆ 5 ಸಾವಿರ ಇಟ್ಟಿಗೆ!
ಜ್ವಾಲಾಮುಖೀಯ ಬೂದಿಯನ್ನು ಮರಳು, ಸಿಮೆಂಟ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯದೊಂದಿಗೆ ಮಿಶ್ರಣ ಮಾಡಿ ಇಟ್ಟಿಗೆಗಳನ್ನು ತಯಾರಿಸಲಾಗುತ್ತದೆ. ಪ್ರತಿ ದಿನ ಹೀಗೆ ಸುಮಾರು 5 ಸಾವಿರ ಇಟ್ಟಿಗೆ ತಯಾರಿಸಿದ್ದೇವೆ. ಇವುಗಳನ್ನು ಸ್ಥಳೀಯ ಕಟ್ಟಡ ನಿರ್ಮಾಣಕ್ಕೆ ಬಳಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.