Advertisement

ಫಿಲಿಪ್ಪೆ„ನ್ಸ್‌ ದೇಶದ ಕತೆ: ಮೊಲದ ಜಾಣ್ಮೆ

03:50 AM Apr 02, 2017 | |

ಒಂದು ಕಾಡಿನಲ್ಲಿ ಎಲ್ಲ ಬಗೆಯ ಪ್ರಾಣಿಗಳೂ ವಾಸವಾಗಿದ್ದರೂ ಹುಲಿ ಮಾತ್ರ ಇರಲಿಲ್ಲ. ಒಂದು ಸಲ ಬೇರೆ ಕಾಡಿನಿಂದ ಒಂದು ಹೆಬ್ಬುಲಿ ಅಲ್ಲಿಗೆ ಬಂದಿತು. ಓಹ್‌, ಕಾಡು ಬಹು ಸೊಗಸಾಗಿದೆ! ಇಲ್ಲಿ ಎಷ್ಟೊಂದು ಪ್ರಾಣಿಗಳಿವೆ. ದಿನವೂ ಒಂದೊಂದಾಗಿ ಅವುಗಳನ್ನು ಕೊಂದು ಮೃಷ್ಟಾನ್ನ ಉಣ್ಣಬಹುದು ಎಂದು ನೆನೆದು ದೊಡ್ಡದಾಗಿ ಒಮ್ಮೆ ಘರ್ಜಿಸಿತು. ಆಗ ಕಾಡು ಗಡಗಡನೆ ನಡುಗಿತು. ಇದೇನು ಧ್ವನಿ ಎಂದು ನೋಡಲು ಎಲ್ಲ ಜೀವಿಗಳೂ ಓಡೋಡಿ ಬಂದವು. ಮೈ ತುಂಬ ಪಟ್ಟೆಗಳಿರುವ ದೈತ್ಯ ಪ್ರಾಣಿ ಹುಲಿಯನ್ನು ಇದು ವರೆಗೂ ಅವು ಕಂಡಿರಲಿಲ್ಲ. ಅದರ ಕೈಯ ಉಗುರುಗಳು, ಕೋರೆ ಹಲ್ಲುಗಳನ್ನು ಕಂಡು ಭಯಭೀತವಾದವು. ಒಂದು ಜಿಂಕೆಯನ್ನು ಹೊಡೆದುರುಳಿಸಿ ಹುಲಿ ತಿನ್ನುವ ದೃಶ್ಯವನ್ನು ಕಂಡ ಮೇಲೆ ತಮಗಿನ್ನು ಉಳಿಗಾಲವಿಲ್ಲವೆಂದೇ ಭಾವಿಸಿ ದಿಕ್ಕಾಪಾಲಾಗಿ ಓಡಿಹೋದವು.

Advertisement

ಹುಲಿಗೆ ಹೆದರಿದ ಪ್ರಾಣಿಗಳೆಲ್ಲವೂ ಒಟ್ಟುಗೂಡಿ ಕಾಡಿನ ಒಂದು ಮೂಲೆಯಲ್ಲಿ ರಹಸ್ಯವಾಗಿ ಸಭೆ ನಡೆಸಿದವು. “”ಈ ಭಯಂಕರ ಪ್ರಾಣಿಯಿಂದ ಪಾರಾಗುವ ಬಗೆ ಹೇಗೆ? ಕೋತಿಯ ಹಾಗಿದ್ದರೆ ತೊಂದರೆಯಿಲ್ಲ. ಮರವೇರಿ ಕುಳಿತು ಪ್ರಾಣ ಉಳಿಸಿಕೊಳ್ಳಬಹುದು. ಆದರೆ ನಮಗಿನ್ನೂ ಮರವೇರುವ ಕಲೆ ಗೊತ್ತಿಲ್ಲ. ಕಾಡು ಬಿಟ್ಟು ಊರಿಗಿಳಿದರೆ ಜನ ಕೊಲ್ಲುತ್ತಾರೆ ” ಎಂದು ಹಂದಿ ದುಃಖದಿಂದ ಹೇಳಿತು. ಕೋತಿಯೂ ಸಂತೋಷಪಡದೆ, “”ನೀವು ನನ್ನದು ನಿಶ್ಚಿಂತೆಯ ಬದುಕು ಅಂದುಕೊಂಡಿದ್ದರೆ ಅದು ನಿಮ್ಮದೇ ತಪ್ಪು. ಆ ದೈತ್ಯನಿಗೆ ಮರ ಹತ್ತುವುದಕ್ಕೂ ಬರುತ್ತದೆ ಎಂಬುದು ನಿಮಗೆ ತಿಳಿದಿಲ್ಲವೆ? ರಾತ್ರೆ ನಾನು ಹೆಂಡತಿ, ಮಕ್ಕಳೊಂದಿಗೆ ಹಾಯಾಗಿ ಮರದ ಕೊಂಬೆಯಲ್ಲಿ ಮಲಗಿ ನಿದ್ರಿಸುತ್ತೇನೆ. ಆಗ ಈ ರಕ್ಕಸ ಮರವೇರಿ ಬಂದರೆ ಕತ್ತಲಲ್ಲಿ ಹೋಗುವುದಾದರೂ ಎಲ್ಲಿಗೆ?” ಎಂದು ಅದೂ ಮುಖ ಚಿಕ್ಕದು ಮಾಡಿತು.

ಆಮೆಗೂ ಚಿಂತೆ ತಪ್ಪಿರಲಿಲ್ಲ. “”ನೀರೊಳಗಿದ್ದು ಬೇಸರವಾದಾಗ ಒಂದೊಂದು ಸಲ ನೀರಿನಿಂದ ಮೇಲಕ್ಕೆ ಬಂದು ರುಚಿಯಾದ ಆಹಾರ ಏನಾದರೂ ತಿಂದು ತೇಗುತ್ತಿದ್ದೆ. ಇನ್ನು ಅದಕ್ಕೂ ಕೊರತೆ ಬಂದ ಹಾಗಾಯಿತು. ಮೇಲೆ ಬಂದಿರುವಾಗ ಈ ಪಟ್ಟೆ ಮೈಯ ಪ್ರಾಣಿ ಬೆಂಬತ್ತಿ ಬಂತು ಅಂತಾದರೆ ನಾನು ಓಡಿ ಅದರ ಕೈಯಿಂದ ಪಾರಾಗಲು ಉಂಟೇ?” ಎಂದು ಅದು ದುಃಖಪಟ್ಟಿತು. ಹಾಗಿದ್ದರೆ ಏನು ಮಾಡುವುದು? ಎಂದು ಚಿಂತಿಸಿದಾಗ, “”ನಾವು ನಮ್ಮ ಸಂಸಾರದೊಂದಿಗೆ ನೆಮ್ಮದಿಯಿಂದ ಇರಬೇಕಿದ್ದರೆ ಎಲ್ಲರೂ ಜೊತೆಗೂಡಿ ಬೇರೆ ಸುರಕ್ಷಿತವಾದ ಕಾಡಿಗೆ ಹೋಗುವುದೇ ಒಳ್ಳೆಯದು” ಎಂದು ಒಂಟೆ ಸಲಹೆ ನೀಡಿತು.

ಒಂಟೆ ಎಲ್ಲರಿಗಿಂತ ಎತ್ತರ ಮಾತ್ರವಲ್ಲ, ಅನುಭವದಲ್ಲಿಯೂ ಹಿರಿಯ. ಅದರ ಮಾತನ್ನು ತಳ್ಳಿ ಹಾಕದೆ ಎಲ್ಲವೂ ಸಾಲಾಗಿ ಕಾಡು ಬಿಟ್ಟು ದೂರ ಹೋಗಲು ಯಾತ್ರೆ ಆರಂಭಿಸಿದವು. ಆಗ ಎದುರಿನಿಂದ ಒಂದು ಮೊಲ ತಲೆಯ ಮೇಲೆ ಗಜ್ಜರಿಯ ಮೂಟೆ ಹೊತ್ತುಕೊಂಡು ಬರುತ್ತ ಇತ್ತು. ಪ್ರಾಣಿಗಳ ಸಾಲು ಕಂಡು ಅದು ಅಚ್ಚರಿಯಿಂದ, “”ಅರರೇ, ಎಲ್ಲರೂ ಮಕ್ಕಳು, ಮರಿಗಳನ್ನು ಕೂಡಿಕೊಂಡು ಎಲ್ಲಿಗೆ ಹೊರಟಿದ್ದೀರಿ? ಸಮುದ್ರಕ್ಕೆ ಬೀಳಲು ಹೊರಟಿದ್ದೀರೋ?” ಎಂದು ನಗುತ್ತ ಕೇಳಿತು. ಪ್ರಾಣಿಗಳಿಗೆ ನಗು ಬರಲಿಲ್ಲ. ತೋಳವು ಖನ್ನತೆಯಿಂದ, “”ನಿನಗೆ ತಮಾಷೆ ಮಹಾರಾಯಾ. ಇಡೀ ಕಾಡಿಗೆ ಬಂದಿರುವ ವಿಪತ್ತು ಏನೆಂಬುದನ್ನು ತಿಳಿದುಕೊಂಡರೆ ಹೀಗೆಲ್ಲ ಮಾತನಾಡಲು ನಿನಗೂ ಧೈರ್ಯ ಬರಲಿಕ್ಕಿಲ್ಲ. ಎಲ್ಲ ಪ್ರಾಣಿಗಳ ವಂಶವೇ ನಿರ್ಮೂಲವಾಗುವ ಸಮಯ ಸನ್ನಿಹಿತವಾಗಿದೆ?” ಎಂದು ಹೇಳಿತು.

ಮೊಲ ಈಗಲೂ ಚಿಂತಿಸಲಿಲ್ಲ. “”ಏನಾಯಿತು, ಮೊದಲು ಹೇಳಿ. ಆಮೇಲೆ ವಿಪತ್ತಿಗೆ ಪರಿಹಾರ ಏನೆಂಬುದನ್ನು ಆಲೋಚಿಸೋಣ. ಬನ್ನಿ, ಇಲ್ಲಿ ಮರದ ನೆರಳಿನಲ್ಲಿ ಕುಳಿತುಕೊಂಡು ಆ ವಿಷಯವಾಗಿ ಚರ್ಚೆ ಮಾಡೋಣ” ಎಂದು ಕರೆಯಿತು. ಪ್ರಾಣಿಗಳು ಮರದ ಕೆಳಗೆ ಕುಳಿತು ಹುಲಿಯ ಕಥೆ ಹೇಳಿದವು. “”ನಮ್ಮ ಕಣ್ಣೆದುರೇ ಓಟದಲ್ಲಿ ಶೂರನಾದ ಜಿಂಕೆಯನ್ನು ಹೊಡೆದುರುಳಿಸಿ ಅದು ತಿನ್ನುವುದನ್ನು ನೋಡಿದೆವು. ಇನ್ನು ಇಷ್ಟು ಸಣ್ಣ ಗಾತ್ರದ ನೀನು ಅಷ್ಟು ದೊಡ್ಡ ಪ್ರಾಣಿಯ ಕಾಟ ನಿವಾರಿಸಲು ಪರಿಹಾರ ಹುಡುಕುವೆಯಂತೆ! ಅದು ಆಗಲಿಕ್ಕುಂಟೆ?” ಎಂದು ಕೇಳಿದವು.

Advertisement

ಮೊಲ ಸ್ವಲ್ಪವೂ ಭಯಪಡಲಿಲ್ಲ. “”ಫ‌ೂ, ಇದಕ್ಕೆ ಭಯಪಡಬೇಕೆ? ನಾನು ಗಾತ್ರದಲ್ಲಿ ಸಣ್ಣಗಿರುವ ಮಾತ್ರಕ್ಕೆ ನನ್ನಲ್ಲಿ ಜಾಣ್ಮೆಯಿಲ್ಲವೆಂದು ಭಾವಿಸಬೇಡಿ. ಯಾವ ಕಾಯಿಲೆಗೆ ಯಾವ ಬೇರು ಅರೆಯಬೇಕೆಂದು ನನಗೆ ತಿಳಿದಿದೆ. ಇದೊಂದು ದಿನ ನಿಮ್ಮ ಮನೆಗಳ ಒಳಗೆ ಅಡಗಿಕೊಳ್ಳಿ. ಯಾರೂ ಹೊರಗೆ ಬರಬೇಡಿ. ಬಂದ ಸಂಕಷ್ಟ ನಿವಾರಣೆಗೆ ಏನಾದರೂ ಉಪಾಯ ಹುಡುಕಲು ಸಾಧ್ಯವೇ ನಾನು ನೋಡುತ್ತೇನೆ” ಎಂದು ಭರವಸೆ ಹೇಳಿ ಪ್ರಾಣಿಗಳನ್ನು ಅವುಗಳ ಮನೆಗಳಿಗೆ ಕಳುಹಿಸಿತು. ತಾನೊಬ್ಬನೇ ಕಾಡಿನಲ್ಲಿ ಸವಾರಿ ಹೊರಟಿತು. ಎಲ್ಲ ಪ್ರಾಣಿಗಳೂ ಅಡಗಿಕೊಂಡ ಕಾರಣ ಹುಲಿಗೆ ಎಷ್ಟು ಹುಡುಕಿದರೂ ಏನೂ ಆಹಾರ ಸಿಕ್ಕಿರಲಿಲ್ಲ. ಅದು ಹಸಿವಿನಿಂದ ಬಳಲಿ ಅರಣ್ಯದಲ್ಲಿ ಕಾಲೆಳೆದುಕೊಂಡು ಬರುತ್ತ ಇತ್ತು. ಆಗ ಅದರ ಮುಂದೆ ಧಿಮಾಕಿನಿಂದ ಮೊಲ ನಡೆದುಕೊಂಡು ಬಂತು. ಹುಲಿ ಒಂದು ಸಲ ಘರ್ಜನೆ ಮಾಡಿತು. “”ಯಾರೋ ಅದು ಅಷ್ಟು ಪೊಗರಿನಿಂದ ಹೋಗುತ್ತಿರುವುದು? ಕಾಡಿನ ರಾಜ ನಾನಿಲ್ಲಿ ಬರುತ್ತಿರುವಾಗ ನನ್ನ ಮುಂದೆ ಮೊಣಕಾಲೂರಿ ಸಲಾಮು ಹೊಡೆಯಬೇಕೆಂಬುದು ತಿಳಿದಿಲ್ಲವೆ?” ಎಂದು ಪ್ರಶ್ನಿಸಿತು.

ಮೊಲ ನಿರ್ಲಕ್ಷ್ಯದಿಂದ, “”ಈ ಕಾಡಿಗೆ ನಿಮಗಿಂತ ದೊಡ್ಡವರಾದ, ಪರಾಕ್ರಮಿಯೊಬ್ಬರು ರಾಜರಾಗಿರುವಾಗ ಅವರಿಗೆ ಗೌರವ ಕೊಡುತ್ತೇವೆ ವಿನಃ ನಿಮಗೆ ನಾನೇಕೆ ಸಲಾಮು ಹೊಡೆಯಬೇಕು?” ಎಂದು ಕೇಳಿತು. ಹುಲಿ ಕೋಪದಿಂದ, “”ಏನೆಂದೆ? ನನಗಿಂತ ದೊಡ್ಡವರು ಈ ಕಾಡಿಗೆ ರಾಜರಾಗಿದ್ದಾರೆಯೇ? ಇದು ನಂಬುವ ಸಂಗತಿಯೇ?” ಎಂದು ಘರ್ಜಿಸಿತು. “”ಕೋಪ ಮಾಡಿಕೊಳ್ಳಬೇಡಿ. ಅಷ್ಟೇ ಏಕೆ, ಆ ರಾಜನಿಗೆ ಮಂತ್ರಿಯಾಗಿರುವುದು ನನ್ನ ಅಣ್ಣ. ಸುಳ್ಳು ಅಂದುಕೊಂಡಿರಾ? ನನ್ನ ಜೊತೆಗೆ ಬನ್ನಿ, ಅವರಿಬ್ಬರನ್ನೂ ತೋರಿಸುತ್ತೇನೆ” ಎಂದು ಮೊಲ ಸವಾಲು ಹಾಕಿತು.

“”ಓಹೋ, ನಿನ್ನ ವಂಶದವರಿಗೂ ರಾಜನ ಬಳಿ ಉದ್ಯೋಗವಿದೆಯೇ? ಈ ಚೋದ್ಯವನ್ನೊಮ್ಮೆ ಕಣ್ಣಾರೆ ನೋಡಿ ಆ ರಾಜನನ್ನು ಕಾಳಗಕ್ಕೆ ಕರೆಯುತ್ತೇನೆ. ಕ್ಷಣಮಾತ್ರದಲ್ಲಿ ಅವನನ್ನು ಸೋಲಿಸಿ ಮುಂದೆ ನನಗೆ ಎದುರಾಳಿಯಿಲ್ಲದ ಹಾಗೆ ಮಾಡುತ್ತೇನೆ. ಮೊದಲು ನನಗವರನ್ನು ತೋರಿಸು” ಎಂದಿತು ಹುಲಿ. ಮೊಲ ತುಂಬ ನೀರಿರುವ ಆಳವಾದ ಬಾವಿಯ ಬಳಿಗೆ ಹುಲಿಯನ್ನು ಕರೆದುಕೊಂಡು ಹೋಗಿ, “”ಬಾಗಿ ನೋಡಿ. ಅಲ್ಲಿ ನಿಮಗಿಂತ ಶೂರರಾದ ರಾಜರು, ಅವರ ಬಳಿ ಮಂತ್ರಿಯಾಗಿ ನಿಂತಿರುವ ನನ್ನ ಅಣ್ಣ ಕಾಣಿಸುತ್ತಾರೆ. ಮತ್ತೆ ಯುದ್ಧಕ್ಕೆ ಕರೆಯಿರಿ” ಎಂದು ಹೇಳಿತು. ಹುಲಿ ಬಾವಿಗೆ ಬಾಗಿ ನೋಡಿದಾಗ ಅದರ ಪ್ರತಿಬಿಂಬದ ಜೊತೆಗೆ ಮೊಲದ ಪ್ರತಿಬಿಂಬವೂ ಕಂಡುಬಂತು. ಮೊಲ ಹೇಳಿದ್ದು ಸುಳ್ಳಲ್ಲ, ಇಲ್ಲಿ ಪರಾಕ್ರಮಿ ಹುಲಿಯೊಂದು ಇದೆ, ಅದರೊಂದಿಗೆ ಮೊಲವೂ ಇದೆ ಎಂದು ನಂಬಿ ಘರ್ಜಿಸುತ್ತ ಅದರ ಕಡೆಗೆ ನೆಗೆಯಿತು. ಆದರೆ ತುಂಬಿದ್ದ ನೀರಿಗೆ ಬಿದ್ದು ಮೇಲೆ ಬರಲಾಗದೆ ಮೊಲದೊಂದಿಗೆ, “”ಮೋಸ, ಮೋಸ! ನೀನು ಮೋಸ ಮಾಡಿದೆ” ಎಂದು ಕೂಗಿತು. “”ಮೋಸ ಎಲ್ಲಿಯದು? ನಿನ್ನನ್ನು ಹೀಗೆಯೇ ಬಿಟ್ಟರೆ ಉಳಿದ ಪ್ರಾಣಿಗಳು ಬದುಕಬೇಡವೆ?” ಎಂದು ಮೊಲ ಹಿಗ್ಗುತ್ತ ಹೊರಟುಹೋಯಿತು.

ಪರಾಶರ

Advertisement

Udayavani is now on Telegram. Click here to join our channel and stay updated with the latest news.

Next