ಸಿಡ್ನಿ: ಬೌನ್ಸರ್ ಏಟಿಗೆ ಸಿಲುಕಿ ದುರ್ಮರಣಕ್ಕೀಡಾದ ಫಿಲಿಪ್ ಹ್ಯೂಸ್ ಅವರ 5ನೇ ಪುಣ್ಯಸ್ಮರಣೆಯನ್ನು ಬುಧವಾರ ಆಚರಿಸಿದ ಕ್ರಿಕೆಟ್ ಆಸ್ಟ್ರೇಲಿಯ, ಈ ಸಂದರ್ಭದಲ್ಲಿ ನೆಕ್ ಗಾರ್ಡ್ ಕಡ್ಡಾಯ ನಿಯಮ ಜಾರಿಗೆ ಬಂದೀತೆಂಬ ವಿಶ್ವಾಸ ವ್ಯಕ್ತಪಡಿಸಿತು.
“ಈ 5 ವರ್ಷಗಳಲ್ಲಿ ಆಸ್ಟ್ರೇಲಿಯದ ಕ್ರಿಕೆಟ್ ಕುಟುಂಬ ಫಿಲಿಪ್ ಹ್ಯೂಸ್ ಅವರನ್ನು ನೆನೆಯದ ದಿನವಿಲ್ಲ’ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆವಿನ್ ರಾಬರ್ಟ್ಸ್ ಹೇಳಿದರು.
2014ರ ನ. 25ರಂದು ಸಿಡ್ನಿಯಲ್ಲಿ ನಡೆದ ಶೆಫೀಲ್ಡ್ ಶೀಲ್ಡ್ ಪಂದ್ಯಾವಳಿಯ ವೇಳೆ ಸೀನ್ ಅಬೋಟ್ ಅವರ ಶಾರ್ಟ್‌ಪಿಚ್ ಎಸೆತವೊಂದು ಫಿಲಿಪ್ ಹ್ಯೂಸ್ ಅವರನ್ನು ಬಲಿಪಡೆದಿತ್ತು. ಜೀವನ್ಮರಣ ಹೋರಾಟದ ಬಳಿಕ ನ. 27ರಂದು ಹ್ಯೂಸ್ ದುರಂತ ಅಂತ್ಯ ಕಂಡಿದ್ದರು.
“ನೆಕ್ ಗಾರ್ಡ್’ ಬಳಕೆ ಕಡ್ಡಾಯ?
ಅಂದು ಫಿಲಿಪ್ ಹ್ಯೂಸ್ ಹೆಲ್ಮೆಟ್ ಧರಿಸಿದ್ದರು, ಚೆಂಡು ಅವರ ಕುತ್ತಿಗೆಯ ಭಾಗಕ್ಕೆ ಹೋಗಿ ಬಡಿದಿತ್ತು. ಇಂಥ ದುರಂತ ಮರುಕಳಿಸಬಾರದೆಂಬ ಆಶಯ ವ್ಯಕ್ತಪಡಿಸಿದ ಆಸ್ಟ್ರೇಲಿಯ, ಕುತ್ತಿಗೆಯನ್ನು ರಕ್ಷಿಸುವ “ನೆಕ್ ಗಾರ್ಡ್’ ಬಳಕೆಯನ್ನು ಕಡ್ಡಾಯಗೊಳಿಸುವುದು ಕ್ಷೇಮಕರ ಎಂದು ಪ್ರತಿಪಾದಿಸಿತು.
ಇದಕ್ಕೆ ಆಸ್ಟ್ರೇಲಿಯದವರೇ ಆದ ಸ್ಟೀವನ್ ಸ್ಮಿತ್ ಒಮ್ಮೆ ವಿರೋಧ ವ್ಯಕ್ತಪಡಿಸಿದ್ದರು. ನೆಕ್ ಗಾರ್ಡ್ ಹಾಕಿಕೊಂಡರೆ ಎಂಆರ್‌ಐ ಯಂತ್ರದೊಳಗೆ ಇದ್ದಂತೆ ಭಾಸವಾಗುತ್ತದೆ ಎಂದಿದ್ದರು. ಆದರೆ ಕಳೆದ ಆ್ಯಶಸ್ ಸರಣಿಯ ಟೆಸ್ಟ್ ಪಂದ್ಯವೊಂದರ ವೇಳೆ 211 ರನ್ ಬಾರಿಸಿದ ಬಳಿಕ ಸ್ಮಿತ್ ಮನಸ್ಸು ಬದಲಾಯಿಸಿ ನೆಕ್ ಗಾರ್ಡ್ ಬಳಸಲು ಆರಂಭಿಸಿದ್ದಾಗಿ ಹೇಳಿಕೊಂಡಿದ್ದಾರೆ.