Advertisement

ಸಂಶೋಧನೆಗೆ ದಾಖಲೆಯ ದಾಖಲಾತಿ!

11:23 AM Oct 07, 2021 | Team Udayavani |

ಬೆಂಗಳೂರು: ಬೆಂವಿವಿಯಲ್ಲಿ ಈ ವರ್ಷ ಬರೋಬ್ಬರಿ 720 ಅಭ್ಯರ್ಥಿಗಳು ಪಿಎಚ್‌.ಡಿ ಅಧ್ಯಯನಕ್ಕೆ ಪ್ರವೇಶಪಡೆದಿದ್ದು, ಇಂದೊಂದು ವಿಶೇಷ ದಾಖಲೆಯ ಜತೆಗೆ ಮುಂದಿನ ಕೆಲವೇ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯ ಸಂಶೋಧಕರು ಹೊರಬರಲಿದ್ದಾರೆ.

Advertisement

2019ರಲ್ಲಿ ಕೇಂದ್ರ ಮಾನವಸಂಪನ್ಮೂಲ ಅಭಿವೃದ್ಧಿ(ಈಗ ಶಿಕ್ಷಣ ಇಲಾಖೆ ಆಗಿದೆ) ಸಚಿವಾಲಯ ಪಿಎಚ್‌.ಡಿ ಪದವೀಧರ ಸಂಖ್ಯೆಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿದ್ದ ವರದಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು. ಹೀಗೆ ಕರ್ನಾಟಕ ಸಂಶೋಧನೆಯಲ್ಲಿ ಸದಾ ಮುಂದಿದೆ. ರಾಜ್ಯದ ವಿವಿಧ ವಿವಿಗಳಲ್ಲಿ ಪ್ರತಿ ವರ್ಷ ಪಿಎಚ್‌.ಡಿಗೆ ದಾಖಲಾತಿ ಪಡೆಯುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ವಿಶೇಷ ಎಂಬಂತೆ ಬೆಂಗಳೂರು ವಿವಿಯಲ್ಲಿ 720 ಅಭ್ಯರ್ಥಿಗಳು ಪಿಎಚ್‌. ಡಿಗೆ ದಾಖಲಾಗಿದ್ದು, ಅಧ್ಯಯನ ಆರಂಭಿಸಿದ್ದಾರೆ.

ಪಿಎಚ್‌.ಡಿಗೆ ಅವಕಾಶ ಹೇಗೆ?: ಯುಸಿಜಿ ಮಾರ್ಗಸೂಚಿಯಂತೆ ಪ್ರತಿ ಪ್ರಾಧ್ಯಾಪಕರು 8 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ಸಂಶೋಧನಾ ಮಾರ್ಗದರ್ಶನ ಮಾಡಬಹುದು. ಇದರ ಜತೆಗೆ ಇಬ್ಬರು ವಿದೇಶಿ ಅಭ್ಯರ್ಥಿಗಳಿಗೂ ಮಾರ್ಗದರ್ಶನ ಮಾಡುವ ಅವಕಾಶವಿದೆ. ಹಾಗೆಯೇ ಸಹ ಪ್ರಾಧ್ಯಾಪಕರು 6 ಅಭ್ಯರ್ಥಿಗಳಿಗೆ ಹಾಗೂ ಸಹಾಯಕ ಪ್ರಾಧ್ಯಾಪಕರು 4 ಅಭ್ಯರ್ಥಿಗಳಿಗೆ ಏಕಕಾಲದಲ್ಲಿ ಸಂಶೋಧನಾ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಲು ಅವಕಾಶವಿದೆ.

ಇದನ್ನೂ ಓದಿ:- ಆಧಾರ್‌ ಅಕ್ರಮ ನೋಂದಣಿ ಭದ್ರತೆಗೆ ಮಾರಕ: ಹೈಕೋರ್ಟ್‌

ಗರಿಷ್ಠ ಸಂಖ್ಯೆಯ ಸಂಶೋಧಕರು: ರಾಜ್ಯದ ಮಂಗಳೂರು, ಮೈಸೂರು, ಧಾರವಾಡ, ಕುವೆಂಪು ವಿವಿ ಸೇರಿದಂತೆ ಬಹುತೇಕ ವಿವಿಗಳಲ್ಲಿ ವರ್ಷಕ್ಕೆ 200ರಿಂದ 300 ಅಭ್ಯರ್ಥಿಗಳು( ಆಯಾ ವಿಶ್ವವಿದ್ಯಾಲಯದ ಖಾಲಿ ಸೀಟಿಗೆ ಅನ್ವಯ) ಪಿಎಚ್‌.ಡಿಗೆ ದಾಖಲಾಗುತ್ತಾರೆ. ಬೆಂವಿವಿಯಲ್ಲಿ ಕಳೆದ 4 ವರ್ಷದಿಂದ ಪಿಎಚ್‌.ಡಿ ಪ್ರವೇಶ ಪ್ರಕ್ರಿಯೆ ನಡೆಯದೇ ಇರುವುದರಿಂದ ಒಂದೇ ವರ್ಷದಲ್ಲಿ 720 ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗಿದೆ.

Advertisement

ಇದರಲ್ಲಿ 350 ಮಂದಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದಾರೆ. ಪೂರ್ಣವಧಿ ಸಂಶೋಧಕರಿಗೆ 18 ಸಾವಿರ ರೂ. ಶಿಷ್ಯ ವೇತನ ನೀಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಬೆಂವಿವಿ ಕುಲಪತಿ ಪ್ರೊ.ಕೆ. ಆರ್‌.ವೇಣುಗೋಪಾಲ್‌ ತಿಳಿಸಿದರು.

ಮಂಗಳೂರು ವಿವಿಯಲ್ಲಿ ವಿನೂತನ ಕ್ರಮ ಪ್ರಸಕ್ತ ಸಾಲಿನ ಅನ್ವಯ ಆಗುವಂತೆ ಕ್ರಮವೊಂದನ್ನು ಜಾರಿಗೆ ತರಲಾಗಿದೆ. ಪಿಎಚ್‌. ಡಿಗೆ ಅರ್ಜಿ ಸಲ್ಲಿಸಿ, ಸೀಟು ಸಿಗದೇ ಅರ್ಹತಾ ಪಟ್ಟಿ(ವೈಟಿಂಗ್‌ ಲಿಸ್ಟ್‌)ಯಲ್ಲಿರುವ ಅಭ್ಯರ್ಥಿಗಳಿಗೆ ಮೆರಿಟ್‌ ಆಧಾರದಲ್ಲಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಸೀಟು ಖಾಲಿಯಾಗುತ್ತಿದ್ದಂತೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಮೊದಲು ಅರ್ಜಿ ಸಲ್ಲಿಸಿ, ಸೀಟು ಸಿಗದ ಅಭ್ಯರ್ಥಿಗಳು ಮುಂದಿನ ವರ್ಷ ಹೊಸದಾಗಿ ಪರೀಕ್ಷೆ ಅಥವಾ ಪ್ರವೇಶ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಿತ್ತು.

ಈ ವರ್ಷದಿಂದ ಸ್ವಲ್ಪ ಬದಲಾವಣೆ ಮಾಡಿದ್ದು, ಅರ್ಹ ಅಭ್ಯರ್ಥಿಗಳಿಗೆ ಸೀಟು ಲಭ್ಯತೆ ಆಧಾರದಲ್ಲಿಶೈಕ್ಷಣಿಕ ವರ್ಷದ ಮಧ್ಯದಲ್ಲೂ ಪಿಎಚ್‌.ಡಿಗೆ ಸೇರಿಕೊಳ್ಳಲು ಅವಕಾಶ ಮಾಡಿದ್ದೇವೆ ಎಂದು ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ವಿವರಿಸಿದರು.

“ಬೆಂವಿವಿಯಲ್ಲಿ 720 ಅಭ್ಯರ್ಥಿಗಳು ಪಿಎಚ್‌.ಡಿಗೆ ದಾಖಲಾಗಿದ್ದಾರೆ. ಮುಂದಿನ ಕೆಲವೇ ವರ್ಷದಲ್ಲಿ ಸಂಶೋಧನೆ ಪೂರೈಸಿ ಹೊರಬಲಿದ್ದಾರೆ. ಎನ್‌ಇಪಿ ಕೂಡ ಅನುಷ್ಠಾನ ಆಗಿರುವುದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಧ್ಯಾಪಕರ ಕೊರತೆ ನಿಗಿಸಲು ಇದು ಅನುಕೂಲ ಆಗಲಿದೆ.”

ಪ್ರೊ.ಕೆ.ಆರ್‌.ವೇಣುಗೋಪಾಲ್‌,

ಕುಲಪತಿ, ಬೆಂಗಳೂರು ವಿಶ್ವವಿದ್ಯಾಲಯ

“ಪಿಎಚ್‌.ಡಿಗೆ ವಿಶ್ವವಿದ್ಯಾಲಯದಲ್ಲಿ ವರ್ಷಕ್ಕೆ ಎಷ್ಟು ಅಭ್ಯರ್ಥಿಗಳು ದಾಖಲಾಗುತ್ತಾರೆ ಎನ್ನುವುದು ಅಲ್ಲಿ ಖಾಲಿ ಇರುವ ಸೀಟುಗಳ ಆಧಾರದಲ್ಲಿ ನಿರ್ಧರವಾಗುತ್ತದೆ. ಒಂದೊಂದು ವಿಶ್ವವಿದ್ಯಾಲಯದಲ್ಲಿ ಒಂದೊಂದು ರೀತಿಯ ದಾಖಲಾತಿ ಇರಲಿದೆ.”

ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ,

ಕುಲಪತಿ, ಮಂಗಳೂರು ವಿವಿ

Advertisement

Udayavani is now on Telegram. Click here to join our channel and stay updated with the latest news.

Next