– ಅರ್ಜಿ ಸಲ್ಲಿಸಿದ ಮರುಕ್ಷಣವೇ ಕಾರ್ಡ್
ಬೆಂಗಳೂರು: ಇನ್ನು ಮುಂದೆ ಅರ್ಜಿ ಸಲ್ಲಿಸಿದ ಮರುಕ್ಷಣವೇ ಎಪಿಎಲ್ ಪಡಿತರ ಚೀಟಿ ನಿಮ್ಮ ಕೈಯಲ್ಲಿರುತ್ತದೆ!
– ಈ ನೂತನ ವ್ಯವಸ್ಥೆಗೆ ರಾಜ್ಯಾದ್ಯಂತ ಸೋಮವಾರ ಚಾಲನೆ ದೊರಕಿದೆ. ಹೊಸ ಆನ್‌ಲೈನ್ ವ್ಯವಸ್ಥೆಯಲ್ಲಿ ಎಪಿಎಲ್ ಕಾರ್ಡ್‌ಗಾಗಿ ಗ್ರಾಹಕರು ಯಾವುದೇ ಮೂಲೆಯಿಂದ ಅರ್ಜಿ ಸಲ್ಲಿಸಿದ ಮರುಕ್ಷಣವೇ “ತಾತ್ಕಾಲಿಕ ಎಪಿಎಲ್ ಕಾರ್ಡ್’ ಪಡೆಯಬಹುದು. ನಂತರ 15 ದಿನಗಳಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಶಾಶ್ವತ ಎಪಿಎಲ್ ಕಾರ್ಡ್ ಮನೆಗೇ ಬರಲಿದೆ. ಇದಕ್ಕಾಗಿ ಗ್ರಾಹಕರು ನೂರು ರೂ. ಪಾವತಿಸಬೇಕಾಗುತ್ತದೆ.
Advertisement
ಆನ್‌ಲೈನ್ ವ್ಯವಸ್ಥೆ ಮೂಲಕ ಎಪಿಎಲ್ ಕಾರ್ಡ್ ಪಡೆಯುವ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ರಾಜ್ಯಾದ್ಯಂತ ಎಪಿಎಲ್ ಕಾರ್ಡ್ ಅನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ಅರ್ಜಿ ಸಲ್ಲಿಸಿದ ತಕ್ಷಣ ತಾತ್ಕಾಲಿಕ ಚೀಟಿಯನ್ನು ಪಡೆಯಬಹುದು. 15 ದಿನಗಳಲ್ಲಿ ಎಪಿಎಲ್ ಕಾರ್ಡ್‌ನ ಮೂಲ ಪ್ರತಿ ಪಡೆಯಬಹುದು. ಎಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆ ಇದ್ದರೆ ಸಾಕು ಎಂದು ಹೇಳಿದರು.
ಎಪಿಎಲ್ ಕಾರ್ಡ್ ಪಡೆಯಲು ಇರುವ ಹಂತಗಳು ಕೂಡ ಸುಲಭ. ಗ್ರಾಹಕರು ahara.kar.nic.inಗೆ ಹೋಗಿ ಅಲ್ಲಿ ಹೊಸ ಕಾರ್ಡ್‌ಗಾಗಿ ಇರುವ ಆಯ್ಕೆ ಗುಂಡಿಯನ್ನು ಒತ್ತಬೇಕು. ಅಲ್ಲಿ ಆಧಾರ್ ಸಂಖ್ಯೆ ಕೇಳುತ್ತದೆ. ನಂತರ ಅದನ್ನು ಭರ್ತಿ ಮಾಡಿದ ನಂತರ ಆಧಾರ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆಗ, ಅರ್ಜಿದಾರರ ಮೊಬೈಲ್‌ಗೆ “ಒನ್ ಟೈಮ್ ಪಾಸ್‌ವರ್ಡ್’ (ಒಟಿಪಿ) ಬರುತ್ತದೆ. ಅದನ್ನು ನಮೂದಿಸಿದ ತಕ್ಷಣ ಪರದೆ ಮೇಲೆ ಅರ್ಜಿದಾರರ ಎಪಿಎಲ್ ಕಾರ್ಡ್ ಮಾಹಿತಿ ಬರುತ್ತದೆ. ಅದನ್ನು ಪ್ರಿಂಟ್ ತೆಗೆದುಕೊಳ್ಳಬಹುದು ಎಂದು ವಿವರಿಸಿದರು.
ನಗರ ಪ್ರದೇಶದಲ್ಲಿರುವವರು ಪುರಸಭೆ ಮತ್ತು ಪಾಲಿಕೆಯಲ್ಲೂ ಅರ್ಜಿ ಸಲ್ಲಿಸಬಹುದು ಎಂದು ಯು.ಟಿ. ಖಾದರ್ ತಿಳಿಸಿದರು.
Related Articles
Advertisement