Advertisement
ರಾಜ್ಯದಲ್ಲಿ 224 ಶಾಸಕರು, 75 ವಿಧಾನ ಪರಿಷತ್ ಸದಸ್ಯರು ಹಾಗೂ ಓರ್ವ ನಾಮ ನಿರ್ದೇಶಿತ ವಿಧಾನಸಭೆ ಸದಸ್ಯರೂ ಸೇರಿದಂತೆ ಒಟ್ಟು ಮುನ್ನೂರು ಶಾಸಕರಿಗೆ ತಲಾ ಎರಡು ಕೋಟಿಯಂತೆ ವಾರ್ಷಿಕ 600 ಕೋಟಿ ರೂಪಾಯಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಬೇಕಿತ್ತು. ಆದರೆ, 2016-17 ನೇ ಹಣಕಾಸು ವರ್ಷ ಅಂತ್ಯಗೊಳ್ಳುತ್ತಾ ಬಂದರೂ ಬಹುತೇಕ ಶಾಸಕರಿಗೆ ಪೂರ್ಣ ಪ್ರಮಾಣದ ಶಾಸಕರ ನಿಧಿಯ ಅನುದಾನ ಲಭ್ಯವಾಗಿಲ್ಲ. ಇದುವರೆಗೂ ಎರಡು ಕಂತುಗಳಲ್ಲಿ ಒಂದು ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದ್ದು, ಮೊದಲ ಕಂತಿನಲ್ಲಿ ಒಟ್ಟು 144.82 ಕೋಟಿ ಹಾಗೂ ಎರಡನೇ ಕಂತಿನಲ್ಲಿ 148.83 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಮೊದಲ ಕಂತಿನಲ್ಲಿ ವಿಧಾನ ಪರಿಷತ್ತಿನ ಕೆಲವು ಸದಸ್ಯರ ಅವಧಿ ಮುಗಿಯುತ್ತಿದ್ದರಿಂದ ವಿ. ಸೋಮಣ್ಣ, ಲೆಹರ್‌ಸಿಂಗ್, ಅಶ್ವಥ ನಾರಾಯಣ ಹಾಗೂ ನಾರಾಯಣಸಾ ಬಾಂಢಗೆ ಯವರಿಗೆ ಅನುದಾನ ಬಿಡುಗಡೆ ಮಾಡಲಾಗಿಲ್ಲ. ಹೀಗಾಗಿ ಇದುವರೆಗೂ 600 ಕೋಟಿ ರೂಪಾಯಿಯಲ್ಲಿ 293.65 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಎಲ್ಲ ಶಾಸಕರಿಗೂ ಒಂದು ಕೋಟಿ ರೂಪಾಯಿಗಿಂತ ಹೆಚ್ಚಿಗೆ ಅನುದಾನದ ಹಣ ಮಂಜೂರಾಗದೇ ಇರುವುದು ಜನಪ್ರತಿನಿಧಿಗಳನ್ನು ಕೆರಳಿಸಿದೆ.
Related Articles
Advertisement
ಸಂಸದರಿಗೆ ನೀಡುವ ಅನುದಾನದ ಮಾದರಿಯಲ್ಲಿಯೇ ಶಾಸಕರ ನಿಧಿಯನ್ನೂ ಸಹ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ಆರಂಭಿಸಲಾಗಿತ್ತು. ಅಂದಿನಿಂದ ಇಂದಿನವರೆಗೂ ಶಾಸಕರ ನಿಧಿಗೆ ವರ್ಷದಿಂದ ವರ್ಷಕ್ಕೆ ಹಣವನ್ನು ಹೆಚ್ಚಿಸುತ್ತ ಬರಲಾಗುತ್ತಿದೆ ಆದರೂ, ಸರ್ಕಾರ ಸಕಾಲಕ್ಕೆ ಸರಿಯಾಗಿ ಹಣ ಬಿಡುಗಡೆ ಮಾಡದೇ ಇರುವುದರಿಂದ ಕ್ಷೇತ್ರಾಭಿವೃದ್ಧಿ ಯೋಜನೆ ಫಲ ಸಾರ್ವಜನಿಕರಿಗೂ ಮತ್ತೂ ಶಾಸಕರಿಗೂ ಪರಿಣಾಮಕಾರಿಯಾಗಿ ಲಭ್ಯವಾಗುತ್ತಿಲ್ಲ ಎಂದು ಹಲವು ಶಾಸಕರು ಹೇಳುತ್ತಾರೆ.
ಶಾಸಕರ ಅನುದಾನವನ್ನು ಬಿಡಿ ಬಿಡಿಯಾಗಿ ಬಿಡುಗಡೆ ಮಾಡುವುದರಿಂದ ಸರಿಯಾಗಿ ಯೋಜನೆ ಕೈಗೆತ್ತಿಕೊಳ್ಳಲು ಆಗುವುದಿಲ್ಲ. ನಮ್ಮ ನಿಧಿಯ ಹಣ ಬರುತ್ತದೆ ಎಂದು ಅನೇಕರಿಗೆ ಕೆಲಸದ ಶಿಫಾರಸ್ಸು ಪತ್ರವನ್ನು ನೀಡಿರುತ್ತೇವೆ. ಆದರೆ, ಹಣ ಬಿಡುಗಡೆ ಮಾಡದೇ ಕೆಲಸ ಆಗುವುದಿಲ್ಲ. ದುಡ್ಡು ಬರದಿರುವುದರಿಂದ ಜನರಿಗೆ ಏನಾದರೂ ಸಮಜಾಯಿಷಿ ನೀಡಿ ತಪ್ಪಿಸಿಕೊಳ್ಳಬೇಕು. ಕಂತಿನಲ್ಲಿ ಹಣ ಬಿಡುಗಡೆ ವ್ಯವಸ್ಥೆಯನ್ನು ಸರ್ಕಾರ ಕೈ ಬಿಡಬೇಕು. – ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ ನನ್ನ ಅನುದಾನದ ಹಣದ ಕ್ರಿಯಾ ಯೋಜನೆಯನ್ನು ಜಿಲ್ಲಾಧಿಕಾರಿಗೆ ಕೊಟ್ಟು ಹಣಕ್ಕಾಗಿ ದಾರಿ ಕಾಯುತ್ತ ಕುಳಿತಿದ್ದೇವೆ. ತೀವ್ರ ಬರ ಪರಿಸ್ಥಿತಿ ಇರುವುದರಿಂದ ಹೆಚ್ಚಿನ ಕಾಮಗಾರಿ ಕೈಗೊಳ್ಳಲು ಹಣ ಇಲ್ಲ. ಸರ್ಕಾರದಿಂದ ಅನುದಾನದ ಹಣ ಬರುತ್ತದೆಂದು ಅನೇಕ ಕಾಮಗಾರಿಗಳನ್ನು ಉದ್ರಿ ಮಾಡಿಸಿದ್ದೇವೆ. ಹಣ ಬಿಡುಗಡೆ ವಿಳಂಬವಾಗಿರುವುದರಿಂದ ಗುತ್ತಿಗೆದಾರರು ನಮ್ಮ ಮನೆಯ ಮುಂದೆ ಬಂದು ನಿಲ್ಲುವಂತಾಗಿದೆ.
-ಎನ್.ಎಚ್. ಕೋನರೆಡ್ಡಿ, ಜೆಡಿಎಸ್ ಶಾಸಕ. ನನ್ನ ಕ್ಷೇತ್ರದ ಅನುದಾನ ಪೂರ್ಣ ಬಂದಿಲ್ಲ. ನಾನು ಈಗಾಗಲೇ ಅಡ್ವಾನ್ಸ್ ಕೆಲಸ ಮಾಡಿಸುತ್ತಿದ್ದೇನೆ. ಹಣ ಬಂದಾಗ ಕೊಡುವ ಭರವಸೆಯಿಂದ ಕೆಲಸ ನಡೆದಿದೆ. ಇದರಿಂದ ಶಾಸಕರಿಗೆ ತೊಂದರೆಯಾಗಿದೆ. ಆದರೆ, ಹಣ ಅಪನಗದೀಕರಣದಿಂದ ಸರ್ಕಾರದ ಪರಿಸ್ಥಿತಿ ಹೇಗಿದೆ ಅಂತಾನೂ ನಾವು ಯೋಚನೆ ಮಾಡಬೇಕು. ಸರ್ಕಾರ ಎಂಎಲ್‌ಎ ಫಂಡ್ ರಿಲೀಜ್ ಮಾಡಲು ಬೇರಾವುದೋ ಇಲಾಖೆ ಹಣವನ್ನು ತೆಗೆದು ಕೊಡುವುದು ಬೇಡ. ಸರ್ಕಾರಕ್ಕೆ ಆರ್ಥಿಕ ಶಿಸ್ತು ಇರಬೇಕು.
-ಪಿ.ರಾಜೀವ್, ಬಿಎಸ್‌ಆರ್ ಶಾಸಕ ಶಾಸಕರ ಅನುದಾನಕ್ಕಾಗಿ ಈಗಾಗಲೇ ಕ್ರಿಯಾ ಯೋಜನೆ ಸಿದ್ದಪಡಿಸಿ ಜಿಲ್ಲಾಧಿಕಾರಿಗೆ ಕಳುಹಿಸಿಕೊಟ್ಟಿದ್ದೇನೆ. ಆದರೆ, ಪೂರ್ಣ ಹಣ ಬಿಡುಗಡೆಯಾಗಿಲ್ಲ. ಕೆಲವು ಕಾಮಗಾರಿಗೆ ಅನುಮತಿ ನೀಡಿದ್ದೇನೆ. ಅನುದಾನದ ಹಣ ಯಾವಾಗ ಬರುತ್ತದೋ ಆವಾಗ ನೀಡುತ್ತೇನೆ. ಅನುದಾನದ ವಿಷಯದಲ್ಲಿ ಪ್ರತಿವರ್ಷವೂ ಹೀಗೇ ಆಗುತ್ತದೆ.
-ಮಾಲಿಕಯ್ಯ ಗುತ್ತೇದಾರ, ಕಾಂಗ್ರೆಸ್ ಶಾಸಕ – ಶಂಕರ ಪಾಗೋಜಿ