Advertisement

ಫೈಜರ್‌ ಲಸಿಕೆ ಶೇ.95ಪರಿಣಾಮಕಾರಿ

11:47 PM Nov 18, 2020 | mahesh |

ನ್ಯೂಯಾರ್ಕ್‌/ಹೊಸದಿಲ್ಲಿ: ಜಾಗತಿಕ ಔಷಧೋದ್ಯಮಗಳಾದ ಫೈಜರ್‌ ಮತ್ತು ಬಯೋಎನ್‌ಟೆಕ್‌ ಸಂಸ್ಥೆಗಳು ತಾವು ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆ ಶೇ.95ರಷ್ಟು ಪರಿಣಾಮಕಾರಿ ಎಂದು ಘೋಷಿಸಿವೆ. ಕೆಲವೇ ದಿನಗಳ ಹಿಂದಷ್ಟೇ ಜಾಗತಿಕ ಬಯೋಟೆಕ್‌ ಕಂಪೆನಿ ಮಾಡರ್ನಾ ತನ್ನ ಲಸಿಕೆಯು 94.5 ಪ್ರತಿಶತ ಪರಿಣಾಮಕಾರಿ ಎಂದು ಹೇಳಿತ್ತು.

Advertisement

ಫೈಜರ್‌ ಲಸಿಕೆಯು ಎಲ್ಲ ವಯೋಮಾನ, ಎಲ್ಲಾ ಭೂಪ್ರದೇಶ ಹಾಗೂ ವಾತಾವರಣದಲ್ಲೂ ಏಕರೀತಿಯಲ್ಲೇ ಪರಿಣಾಮಕಾರಿಯಾಗಿದೆ. 65 ವರ್ಷಕ್ಕೂ ಮೇಲ್ಪಟ್ಟವರಲ್ಲೂ ಇದು ಶೇ.95ರಷ್ಟು ಪರಿಣಾಮಕಾರಿ ಎಂದು ಸಂಸ್ಥೆ ಹೇಳಿಕೊಂಡಿದೆ. ಪ್ರಸಕ್ತ ಲೆಕ್ಕಾಚಾರದ ಪ್ರಕಾರ 2020ರ ಅಂತ್ಯದೊಳಗೆ ಜಾಗತಿಕವಾಗಿ 5 ಕೋಟಿ ಫೈಜರ್‌ ಲಸಿಕೆಯ ಡೋಸ್‌ಗಳ ಉತ್ಪಾದನೆಯ ಗುರಿಯಿದ್ದು, 2021ರ ಅಂತ್ಯದೊಳಗೆ 130 ಕೋಟಿ ಡೋಸ್‌ಗಳನ್ನು ಉತ್ಪಾದಿಸುವ ಗುರಿ ತಮಗಿದೆ ಎಂದು ಫೈಜರ್‌ ಮತ್ತು ಬಯೋಎನ್‌ಟೆಕ್‌ ಹೇಳಿವೆ.

ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೊರೊನಾ ಲಸಿಕೆಯ ಸಂಶೋಧನೆ ನಡೆದಿದಿದೆ. ಈಗಾಗಲೇ ಆಕ್ಸ್‌ಫ‌ರ್ಡ್‌, ಸ್ಪುಟ್ನಿಕ್‌, ಮಾಡರ್ನಾ ಸಂಸ್ಥೆಗಳ ಜತೆ ಭಾರತವು ಒಪ್ಪಂದ ಮಾಡಿಕೊಂಡಿದ್ದು, ಈಗ ಫೈಸರ್‌ ಲಸಿಕೆಯ ವಿಚಾರದಲ್ಲೂ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ.

ಬ್ರಿಕ್ಸ್‌ ಶೃಂಗದ ವೇಳೆ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಭಾರತದ ಸಹಭಾಗಿತ್ವದಲ್ಲಿ ಕೊರೊನಾ ಲಸಿಕೆ ಅಭಿವೃದ್ಧಿಪಡಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಈ ಅಂಶದ ಬಗ್ಗೆ ಚೀನ ಸರಕಾರದ ಜತೆಗೆ ಭಾರತ ಸರಕಾರ ಚರ್ಚೆ ನಡೆಸಲಿದೆ.

ಅಮೆರಿಕದಲ್ಲಿ ಮತ್ತೆ ಲಾಕ್‌ಡೌನ್‌
ಕೊರೊನಾ ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕದಲ್ಲೂ ಹಲವು ಪ್ರಾಂತ್ಯಗಳು ಪೂರ್ಣ ಅಥವಾ ಆಂಶಿಕ ಲಾಕ್‌ಡೌನ್‌ ಹಾದಿಯಲ್ಲಿವೆ. ಕ್ಯಾಲಿಫೋರ್ನಿಯಾ, ಮಿಚಿಗನ್‌, ಒರೆಗಾಂ, ವಾಷಿಂಗ್ಟನ್‌, ನ್ಯೂಜೆರ್ಸಿಯಲ್ಲಿ ಈಗಾಗಲೇ ಜನರ ಓಡಾಟಕ್ಕೆ ಹಲವು ನಿರ್ಬಂಧ ವಿಧಿಸಲಾಗಿದ್ದು, ಪರಿಸ್ಥಿತಿ ಕೈ ಮೀರಿದರೆ ಕಟ್ಟುನಿಟ್ಟಾದ ಲಾಕ್‌ಡೌನ್‌ ಜಾರಿಮಾಡಲು ಯೋಚಿಸುತ್ತಿವೆ.

Advertisement

ಸಮಾನ ರೀತಿಯಲ್ಲಿ ವಿತರಣೆ ಇರಲಿ: ವಿಶ್ವ ವಾಣಿಜ್ಯ ಸಂಘಟನೆಯ ಉದ್ದಿಮೆ ಆಧಾರಿತ ಬೌದ್ಧಿಕ ಆಸ್ತಿ ಹಕ್ಕುಗಳ ಮಂಡಳಿ ಕೊರೊನಾ ಲಸಿಕೆಗಳಿಗೆ ಪೇಟೆಂಟ್‌ನಿಂದ ವಿನಾಯಿತಿ ನೀಡುವ ಬಗ್ಗೆ ಶುಕ್ರವಾರ ನಡೆವ ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ. ಇದೇ ವೇಳೆ ಎಲ್ಲಾ ರಾಷ್ಟ್ರಗಳಿಗೂ ಸಮಾನ ರೀತಿಯಲ್ಲಿ ಲಸಿಕೆ ನೀಡಬೇಕು ಎಂದು ಬ್ರಿಕ್ಸ್‌ ರಾಷ್ಟ್ರಗಳು ಒತ್ತಾಯಿಸಿವೆ.

ದಿಲ್ಲಿಯ ಕೆಲವೆಡೆ ಲಾಕ್‌ಡೌನ್‌
ಮುಂದಿನ ದಿನಗಳಲ್ಲಿ ಕೊರೊನಾ ಹಾಟ್‌ಸ್ಪಾಟ್‌ ಎಂದು ಗುರುತು ಪಡೆಯಲಿರುವ ಮಾರುಕಟ್ಟೆ ಪ್ರದೇಶಗಳಲ್ಲಿ ಲಾಕ್‌ಡೌನ್‌ ಜಾರಿ ಮಾಡಲು ದಿಲ್ಲಿ ಸರಕಾರ ಚಿಂತನೆ ನಡೆಸಿದೆ. ಈ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದು ಸಿಎಂ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ಇದೇ ವೇಳೆ ಮದುವೆ ಕಾರ್ಯಕ್ರಮ­ಗಳಿಗೆ 50 ಮಂದಿಯನ್ನು ಮಿತಿಗೊಳಿಸುವ ಆದೇಶಕ್ಕೆ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಒಪ್ಪಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next