Advertisement
ನಗರದ ಕೌಲ್‌ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ಈತನನ್ನು ಹೈದರಾಬಾದ್ ಪೊಲೀಸರು ಇತ್ತೀಚೆಗೆ ಬಂಧಿಸಿ ಕರೆದೊಯ್ದಿದ್ದು ತಡವಾಗಿ ಬೆಳಕಿಗೆ ಬಂದಿದೆ. ನೆರೆಯ ಆಂಧ್ರಪ್ರದೇಶದ ನಂದ್ಯಾಲ ಮೂಲದ ನೋಸ್ಸಮ್ ಮೊಹಮ್ಮದ್ ಯೂನುಸ್ (33) ಎಂಬಾತನೇ ಬಂಧಿತ ಆರೋಪಿ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ತಿಳಿಸಿದೆ. ಕಳೆದ ವರ್ಷದ ಜುಲೈ 4ರಂದು ತೆಲಂಗಾಣ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಕೇಸು ದಾಖಲಿಸಿಕೊಂಡಿದ್ದರು. ಬಳಿಕ ತನಿಖೆಯ ಹೊಣೆಯನ್ನು ಎನ್‌ಐಎ ವಹಿಸಿಕೊಂಡಿತ್ತು.
ನಿಜಾಮಾಬಾದ್ ಉಗ್ರ ಸಂಚು ಪ್ರಕರಣದಲ್ಲಿ ಈತ ಹೈದರಾಬಾದ್ ಪೊಲೀಸರಿಗೆ ಬೇಕಾಗಿದ್ದ. ಯುವಕರನ್ನು ಉಗ್ರ ಸಂಘಟನೆಗೆ ನೇಮಿಸಿಕೊಂಡು, ಅವರಿಗೆ ತರಬೇತಿ ನೀಡಿ, ವಿಧ್ವಂಸಕ ಕೃತ್ಯಗಳಿಗೆ ಸಿದ್ಧಗೊಳಿಸಲು ಪಿಎಫ್ಐ ನಡೆಸಿದ್ದ ಸಂಚು ಇದಾಗಿತ್ತು. 2022ರ ಸೆಪ್ಟಂಬರ್‌ನಲ್ಲಿ ಈತನ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾಗ, ಈತ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪರಾರಿಯಾಗಿದ್ದ. ಬಳಿಕ ಆತನ ಸುಳಿವೇ ಇರಲಿಲ್ಲ. ಇತ್ತೀಚೆಗೆ ಯೂನುಸ್ ತನ್ನ ಇಡೀ ಕುಟುಂಬವನ್ನು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಸ್ಥಳಾಂತರಿಸಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ಕುರಿತು ತನಿಖೆ ನಡೆಸಿದಾಗ, ಆತ ಬಳ್ಳಾರಿ ಜಿಲ್ಲೆಯ ಕೌಲ್‌ಬಜಾರ್ ಬಜಾರ್ ಠಾಣೆ ವ್ಯಾಪ್ತಿಯ ಜಾಗೃತಿ ನಗರದಲ್ಲಿ ವಾಸವಿರುವುದು ತಿಳಿದುಬಂತು.
Related Articles
ಬಳ್ಳಾರಿಗೆ ಬಂದು ತಲೆಮರೆಸಿಕೊಂಡಿದ್ದ ಯೂನುಸ್ ತನ್ನ ಗುರುತನ್ನು ಮರೆಮಾಚಲು ಹೆಸರನ್ನು “ಬಶೀರ್’ ಎಂದು ಬದಲಾಯಿಸಿ ಪ್ಲಂಬರ್ ವೃತ್ತಿಯನ್ನು ಆರಂಭಿಸಿದ್ದ. ಈಗ ಮೊಬೈಲ್ ಲೊಕೇಷನ್ ಮೂಲಕ ಆತ ತಲೆಮರೆಸಿಕೊಂಡಿದ್ದ ಸ್ಥಳವನ್ನು ಪತ್ತೆ ಹಚ್ಚಿದ್ದ ಹೈದರಾಬಾದ್ ಪೊಲೀಸರು, ಎರಡು ದಿನಗಳ ಹಿಂದೆ ಬಂದು ಬಂಧಿಸಿ ಕರೆದೊಯ್ದಿದ್ದಾರೆ.
Advertisement
ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದ!ಯೂನುಸ್ ಪಿಎಫ್ಐನ ಶಸ್ತ್ರಾಸ್ತ್ರ ತರಬೇತಿಯ ಮಾಸ್ಟರ್ ಆಗಿದ್ದ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಿಂದ ಪಿಎಫ್ಐ ನೇಮಕ ಮಾಡುತ್ತಿದ್ದ ಯುವಕರಿಗೆ ಈತನೇ ಶಸ್ತ್ರಾಸ್ತ್ರಗಳ ಬಳಕೆಯ ತರಬೇತಿ ನೀಡುತ್ತಿದ್ದ. ನಿಜಾಬಾಮಾದ್ ಪಿಎಫ್ಐ ಪ್ರಕರಣದಲ್ಲೂ ಈತ ಉಗ್ರರಿಗೆ ದೈಹಿಕ ಶಿಕ್ಷಣ ತರಬೇತಿಯ ರಾಜ್ಯ ಸಮನ್ವಯಕಾರನಾಗಿ ಕೆಲಸ ಮಾಡಿದ ಆರೋಪ ಎದುರಿಸುತ್ತಿದ್ದ. ಈತನನ್ನು ವಿಚಾರಣೆ ನಡೆಸಿದಾಗ, ಶೇಖ್ ಅಲಿಯಾಸ್ ಅಹ್ಮದ್ ಎಂಬಾತ ಪಿಎಫ್ಐ ಶಸ್ತ್ರಾಸ್ತ್ರ ತರಬೇತಿಯ ಸಂಚಿನಲ್ಲಿ ಭಾಗಿಯಾಗಿದ್ದಾಗಿ ಬಾಯಿಬಿಟ್ಟಿದ್ದಾನೆ. ಆದರೆ ಶೇಖ್ ಈಗ ತಲೆಮರೆಸಿಕೊಂಡಿದ್ದಾನೆ ಎಂದು ಎನ್‌ಐಎ ತಿಳಿಸಿದೆ.