ಕಲಾದಗಿ(ಬಾಗಲಕೋಟೆ): “ಮಂಗಳೂರಿನ ದೀಪಕ್ ಹತ್ಯೆ ಪ್ರಕರಣದಲ್ಲಿ ನಾಲ್ವರನ್ನು ಬಂಧಿ ಸಲಾಗಿದೆ. ಈ ಕುರಿತು ತನಿಖೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಯಾರು ಮಾಡಿದ್ದಾರೆ ಎಂಬುದನ್ನು ಈಗಲೇ ಸ್ಪಷ್ಟವಾಗಿ ಹೇಳಲಾಗುವುದಿಲ್ಲ. ಪಿಎಫ್‌ಐ ಮತ್ತು ಎಸ್‌ಡಿಪಿಐ ನಿಷೇಧಿಸುವ ಚಿಂತನೆ ಸದ್ಯಕ್ಕಿಲ್ಲ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಹಿಂದುಗಳ ಹತ್ಯೆ ಕುರಿತು ಬಿಜೆಪಿ ಮಾತನಾಡುತ್ತಿದೆ. 30 ಜನ ಹಿಂದುಗಳು ಕೊಮು ಗಲಭೆಯಿಂದ ಹತ್ಯೆಯಾಗಿದ್ದಾರೆಂದು ಬಿಜೆಪಿ ಹೇಳುತ್ತಿದೆ. ಇದೆಲ್ಲ ಸುಳ್ಳು. ಕೆಲವೊಂದಿಷ್ಟು ಕೊಲೆ ಹಿಂದು ಹಿಂದುಗಳ ವೈಯಕ್ತಿಕ ದ್ವೇಷದಿಂದ ಆಗಿವೆ. 11 ಜನರ ಹತ್ಯೆ ಕೋಮು ಗಲಭೆಯಿಂದ ಆಗಿವೆ. ಪಿಎಫ್‌ಐನ 6 ಜನ ಕೊಲೆಯಾಗಿದ್ದಾರೆ. ಇವರ ಬಗ್ಗೆ ಬಿಜೆಪಿ ತುಟಿ ಬಿಚ್ಚುತ್ತಿಲ್ಲ ಎಂದರು.
ಬಿಜೆಪಿ ನಾಯಕರು ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಿ ಎಂದು ಆಗ್ರಹಿಸುತ್ತಿದ್ದಾರೆ. ಆದರೆ ಸವಣೂರು ಎಂಬ ಗ್ರಾಮದಲ್ಲಿ ಈ ಹಿಂದೆ ಪಂಚಾಯತ್‌ನಲ್ಲಿ ಪಿಎಫ್‌ಐ ಜತೆ ಹೊಂದಾಣಿಕೆ ಮಾಡಿಕೊಂಡು ಆಡಳಿತ ಮಾಡಿದ್ದಾರೆ. ಈಗ ಮತ್ತೆ ಭಟ್ಕಳದ ಸಜಪಾಡು ಎಂಬಲ್ಲಿ ಪಿಎಫ್‌ಐ ಜತೆ ಒಪ್ಪಂದ ಮಾಡಿಕೊಂಡು ಗ್ರಾಪಂ ಬಿಜೆಪಿ ಬೆಂಬಲಿತ ಅಭ್ಯರ್ಥಿ ಉಪಾಧ್ಯಕ್ಷ ಆಗಿದ್ದಾರೆ. ಪಿಎಫ್‌ಐ ಬೆಂಬಲಿತ ಅಭ್ಯರ್ಥಿ ಅಧ್ಯಕ್ಷರಾಗಿದ್ದಾರೆ. ಪಿಎಫ್‌ಐನವರು 6 ಜನ, ಬಿಜೆಪಿಯವರು 3 ಇದ್ದಾರೆ. ಕಾಂಗ್ರೆಸ್‌ನವರು ನಾಲ್ವರಿದ್ದಾರೆ. ಇದಕ್ಕೆ ಏನು ಹೇಳಬೇಕು? ಈಗ ಸಂಘಟನೆಗಳನ್ನು ಬ್ಯಾನ್ ಮಾಡಿ ಎಂದು ಹೇಳುತ್ತಿದ್ದಾರೆ. ಆ ಎರಡೂ ಸಂಘಟನೆಗಳನ್ನು ಬ್ಯಾನ್ ಮಾಡುವುದು ಸದ್ಯಕ್ಕಿಲ್ಲ ಎಂದರು. ಪರೇಶ್ ಮೇಸ್ತ ತಂದೆಯೇ ನಮ್ಮ ಮಗ ಯಾವುದೇ ಪಕ್ಷಕ್ಕೆ ಸೇರಿದವನಲ್ಲ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಮಾತ್ರ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಚುನಾವಣೆ ದೃಷ್ಟಿಯಿಂದ ಈ ಕೆಲಸ ಮಾಡುತ್ತಿದೆ. ಬಿಜೆಪಿಯವರು ಏನೇ ಮಾಡಿದರೂ ಶಾಂತಿ ಸುವ್ಯಸ್ಥೆ ಹದಗೆಡಲು ಬಿಡುವುದಿಲ್ಲ ಎಂದರು.
ಚುನಾವಣೆಗೂ ಮುಂಚೆ ನಡೆಯುವ ಕೊಲೆಗಳು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯಾವುದೇ ಸಂಘಟನೆಯಾದರೂ ದೇಶದ ಕೋಮು ಸೌಹಾರ್ದಕ್ಕೆ ಧಕ್ಕೆ ತರಬಾರದು. ದೇಶದ ಏಕತೆಗೆ ಧಕ್ಕೆ ತರುವ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅಗತ್ಯ.ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೂ ಮೊದಲೇ ಆರೋಪ ಹೊರಿಸೋದು ಸರಿಯಲ್ಲ. ಈ ಬಗ್ಗೆ ಗೃಹ ಸಚಿವರೇ ಅಧಿಕೃತವಾಗಿ ಹೇಳಬೇಕು.
-ಎಚ್.ಆಂಜನೇಯ, ಸಮಾಜ ಕಲ್ಯಾಣ ಸಚಿವ
ಕಳೆದ 3ವರ್ಷಗಳಲ್ಲಿ 21 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದ್ದರೂ, ರಾಜ್ಯ ಗೃಹ ಇಲಾಖೆ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದೆ ಪಿಎಫ್ಐ ಸಂಘಟನೆ ಪಾತ್ರವಿರುವುದು ಎನ್‌ಐಎ ತನಿಖೆಯಿಂದ ಬಯಲಾಗಿದೆ. ದೀಪಕ್ ರಾವ್ ಹತ್ಯೆ ಹಿಂದೆಯೂ ಪಿಎಫ್ಐ ಕೈವಾಡವಿದ್ದರೂ ಅವರ ಮೇಲೆ ಮಮತೆಯೇಕೆ? ಕೂಡಲೇ ಪಿಎಫ್ಐ ಸಂಘಟನೆಯನ್ನು ಸರ್ಕಾರ ನಿಷೇಧಿಸಬೇಕು .
– ರಾಜೇಶ್ ಪದ್ಮಾರ್, ಸಮರ್ಥ ಭಾರತ ಟ್ರಸ್ಟಿ