ಕೊಚ್ಚಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ದ ಕೇರಳದ ಸದಸ್ಯರು ಇಸ್ಲಾಮಿಕ್ ಸ್ಟೇಟ್(ಐಸಿಸ್) ಮತ್ತು ಅಲ್‌ಖೈದಾ ನಾಯಕರೊಂದಿಗೆ ಸಂಪರ್ಕದಲ್ಲಿದ್ದರು. ಅಲ್ಲದೆ, ಅವರ ಹಿಟ್ ಲಿಸ್ಟ್‌ನಲ್ಲಿ ಅನೇಕ ಹಿಂದೂ ನಾಯಕರು ಇದ್ದರು ಎಂಬ ಅಘಾತಕಾರಿ ಸಂಗತಿಯನ್ನು ಕೊಚ್ಚಿಯ ವಿಶೇಷ ನ್ಯಾಯಾಲಯಕ್ಕೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮಾಹಿತಿ ನೀಡಿತು.
ಪಿಎಫ್ಐ ಸಂಘಟನೆಯು ಸರ್ಕಾರದ ನೀತಿಗಳ ತಪ್ಪು ವ್ಯಾಖ್ಯಾನದ ಮೂಲಕ ದೇಶದ ಬಗ್ಗೆ ಅಸಮಾಧಾನ ಮತ್ತು ದ್ವೇಷವನ್ನು ಹರಡುತ್ತಿದೆ ಎಂದು ಎನ್‌ಐಎ ತಿಳಿಸಿತು. ಸೆಪ್ಟೆಂಬರ್‌ನಲ್ಲಿ ಬಂಧಿತರಾಗಿರುವ ಪಿಎಫ್ಐನ 14 ನಾಯಕರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಇದೇ ವೇಳೆ ಎನ್‌ಐಎ ನ್ಯಾಯಾಲಯಕ್ಕೆ ಕೋರಿತು.
“ಐಸಿಸ್ ಮತ್ತು ಅಲ್‌ಖೈದಾ ಭಯೋತ್ಪಾದಕ ಸಂಘಟನೆಗಳು ತಮ್ಮ ನೇರ ಕಾರ್ಯಾಚರಣೆ ಸಾಧ್ಯವಾಗದ ದೇಶಗಳಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸಲು ಧಾರ್ಮಿಕ ಸಂಘಟನೆಗಳನ್ನು ಬಳಸಿಕೊಳ್ಳುತ್ತವೆ. ಕೇರಳದ ಪಿಎಫ್ಐ ನಾಯಕರು ಐಸಿಸ್ ಮತ್ತು ಅಲ್‌ಖೈದಾ ನಾಯಕರೊಂದಿಗೆ ಸಂಪರ್ಕದಲ್ಲಿರುವ ಬಗ್ಗೆ ನಮಗೆ ಸಾಕ್ಷ್ಯಗಳು ದೊರೆತಿವೆ,’ ಎಂದು ಎನ್‌ಐಎ ತಿಳಿಸಿದೆ.
“ಭಯೋತ್ಪಾದಕ ಚಟುವಟಿಕೆಗಳಲ್ಲಿ ಯುವಕರು ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಸಾಮಾಜಿಕ ಮಾಧ್ಯಮಗಳನ್ನು ಪಿಎಫ್ಐ ನಾಯಕರು ಬಳಸಿಕೊಂಡಿರುವುದು ತನಿಖೆಯಿಂದ ಬಹಿರಂಗವಾಗಿದೆ. ಈ ಬಗ್ಗೆ ಈಗಾಗಲೇ ಅನೇಕರ ವಿಚಾರಣೆ ನಡೆಸಲಾಗಿದೆ,’ ಎಂದು ಎನ್‌ಐಎ ಮಾಹಿತಿ ನೀಡಿದೆ.
ವಿಚಾರಣೆ ನಂತರ ವಿಶೇಷ ನ್ಯಾಯಾಲಯವು 14 ಪಿಎಫ್ಐ ನಾಯಕರ ನ್ಯಾಯಾಂಗ ಬಂಧನವನ್ನು 90 ದಿನಗಳವರೆಗೆ ವಿಸ್ತರಿಸಿತು.
ಸೆಪ್ಟೆಂಬರ್‌ನಲ್ಲಿ ದೇಶಾದ್ಯಂತ ಎನ್‌ಐಎ ಮತ್ತು ಇಡಿ ಕಾರ್ಯಾಚರಣೆ ನಡೆಸಿ ಪಿಎಫ್ಐನ ಪ್ರಮುಖ ನಾಯಕರನ್ನು ಬಂಧಿಸಿ, ದಾಖಲೆಗಳನ್ನು ವಶಪಡಿಸಿಕೊಂಡಿತು. ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದಲ್ಲಿ ಪಿಎಫ್ಐ ಮತ್ತು ಇತರೆ ಎಂಟು ಸಹ ಸಂಘಟನೆಗಳನ್ನು ಕೇಂದ್ರ ಸರ್ಕಾರ ಸೆ.28ರಂದು ನಿಷೇಧಿಸಿ, ಆದೇಶ ಹೊರಡಿಸಿತ್ತು.