ಬೆಂಗಳೂರು: ಪಿಎಫ್ಐಯ ಬಂಧಿತ 7 ಮಂದಿ ಅಲ್‌ಕಾಯಿದಾ ಮತ್ತು ಬಾಂಗ್ಲಾದೇಶದ ಅಸಾರುಲ್ಲಾ ಬಾಂಗ್ಲಾ ಟೀಂ(ಎಬಿಟಿ) ಸದಸ್ಯರ ಜತೆ ಸಂಪರ್ಕ ಹೊಂದಿದ್ದರು ಎಂಬ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಬಂಧಿತರ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸೆ.22ರಂದು ಬೆಂಗಳೂರಿನಲ್ಲಿ ಪಿಎಫ್ ಐನ ಅನೀಫ್ ಅಹ್ಮದ್, ಅಫ್ಸರ್ ಪಾಷಾ, ಅಬ್ದುಲ್ ವಹಿದ್ ಸೇಠ್, ಯಾಸೀರ್ ಅರ್ಫತ್ ಹಸನ್, ಮೊಹಮ್ಮದ್ ಶಾಕೀರ್ ಅಲಿಯಾಸ್ ಶಾಕೀಫ್, ಮೈಸೂರಿನ ಮೊಹಮ್ಮದ್ ಫಾರೂಕ್ ಉರ್ ರೆಹಮಾನ್, ಕಲಬುರಗಿಯ ಶಾಹಿದ್ ನಾಸೀರ್ ಅವರನ್ನು ಬಂಧಿಸಲಾಗಿತ್ತು. ಈ ಪೈಕಿ ಬೆಂಗಳೂರಿನ ಆರ್.ಟಿ.ನಗರದ ಯಾಸೀರ್ ಅರ್ಫತ್ ಅಲಿಯಾಸ್ ಯಾಸೀರ್ ಹಸನ್‌ನನ್ನು ಹೆಚ್ಚಿನ ವಿಚಾರಣೆಗೆ ದಿಲ್ಲಿಗೆ ಕರೆದೊಯ್ಯಲಾಗಿತ್ತು.
ಬೆಂಗಳೂರಿನ ದಾಳಿ ಬಳಿಕ ಅಸ್ಸಾಂ ಮತ್ತು ಪಶ್ಚಿಮ ಬಂಗಾಲ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಅಸ್ಸಾಂನ ಪಿಎಫ್ಐ ರಾಜ್ಯಾಧ್ಯಕ್ಷ ಅಮಿನುಲ್ಲಾ ಹಕ್ಯೂ ಮತ್ತು ಪಶ್ಚಿಮ ಬಂಗಾಲ ವಿಭಾಗ ಮುಖ್ಯಸ್ಥ ಡಾ| ಮಿನರುಲ್ ಶೇಕ್ ಎಂಬುವರನ್ನು ಬಂಧಿಸಲಾಗಿತ್ತು. ಈ ವೇಳೆ ಇಬ್ಬರಿಗೂ ಅಲ್ ಕಾಯಿದಾ ಮತ್ತು ಬಾಂಗ್ಲಾದೇಶದ ಅಸ್ಸಾರುಲ್ಲಾ ಬಾಂಗ್ಲಾ ಟೀಂ(ಎಬಿಟಿ) ಜತೆ ಸಂಪರ್ಕ ಇತ್ತು ಎಂಬುದು ಪತ್ತೆಯಾಗಿತ್ತು.
ಜೆಹಾದಿಗಾಗಿ ಹಣ ಸಂಗ್ರಹ ಬಂಧಿತ ಯಾಸೀರ್ ಅರ್ಫತ್ ಜತೆಗೆ 7 ಮಂದಿ ಜೆಹಾದಿಗಾಗಿ ಹಣ ಸಂಗ್ರಹಿಸುತ್ತಿದ್ದರು. ಅದರ ಮೂಲಕ ಶೋಧಿಸಿದಾಗ, ಅಸ್ಸಾಂ, ಪಶ್ಚಿಮ ಬಂಗಾಲ ಮೂಲದ ಶಂಕಿತರಿಗೆ ಅಲ್ ಖೈದಾ ಮತ್ತು ಎಬಿಟಿ ಸಂಘಟನೆ ಸದಸ್ಯರು ಆರ್ಥಿಕ ನೆರವು ನೀಡುತ್ತಿದ್ದು, ಅದನ್ನು ರಾಜ್ಯಕ್ಕೂ ಹಂಚಿದ್ದಾರೆ. ಅದೇ ಹಣವನ್ನು ಸಿಎಎ ಹಾಗೂ ಎನ್ ಆರ್‌ಸಿ ಹೋರಾಟಕ್ಕೆ ಬಳಸಲಾಗಿತ್ತು ಎಂದು ತಿಳಿದು ಬಂದಿದೆ.
-ಮೋಹನ್ ಭದ್ರಾವತಿ