Advertisement

ರಾಜ್ಯದ 18 ಕೊಲೆ ಪ್ರಕರಣಗಳಲ್ಲಿ ಪಿಎಫ್ಐ ಕೈವಾಡ ಪತ್ತೆ

11:36 PM Sep 28, 2022 | Shreeram Nayak |

ಬೆಂಗಳೂರು: ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಸಂಘಟನೆ ನಿಷೇಧಕ್ಕೆ ಕರ್ನಾಟಕದಲ್ಲೂ ನಡೆದ ಹಲವು ಪ್ರಮುಖ ಘಟನೆಗಳು ಕಾರಣವಾಗಿದೆ.

Advertisement

2006ರಲ್ಲಿ ಹುಟ್ಟಿಕೊಂಡ ಪಿಎಫ್ಐ ಸಂಘಟನೆ ಹಂತ-ಹಂತವಾಗಿ ತನ್ನ ವ್ಯಾಪ್ತಿ ಮತ್ತು ಪ್ರಾಬಲ್ಯ ವಿಸ್ತರಿಸಿ ಕೊಂಡಿತ್ತು. ಕ್ರಮೇಣ ಸಂಘಟನೆ ಸದಸ್ಯರು ರಾಜ್ಯದಲ್ಲಿ ಕೆಲ ಕೋಮುಸಂಘರ್ಷ, ಸಾರ್ವಜನಿಕ ಶಾಂತಿಗೆ ಭಂಗ, ಕೊಲೆ, ಕೊಲೆ ಯತ್ನ ಪ್ರಕರಣಗಳು ಕೂಡ ನಿಷೇಧಕ್ಕೆ ಕಾರಣವಾಗಿವೆ.

ವಿದೇಶಗಳಿಂದ ಹವಾಲಾ ಮೂಲಕ ಹಣ ಸಂಗ್ರಹ, ಹಿಂದೂ ಮುಖಂಡರ ಹತ್ಯೆಗಳು, ಕೇರಳದ ವ್ಯಕ್ತಿಗಳ ಜತೆ ಸೇರಿಕೊಂಡು ವಿಧ್ವಂಸಕ ಕೃತ್ಯಗಳಿಗೆ ಸಹ ಕಾರ ಸೇರಿ ಹಲವಾರು ಕಾನೂನು ಬಾಹಿರ ಚಟು ವಟಿಕೆಗಳಲ್ಲಿ ತೊಡಗಿದ್ದರು. 2006ರಿಂದ ಇದುವರೆಗೂ ರಾಜ್ಯದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪಿಎಫ್ಐ ಸಂಘಟನೆ ಮತ್ತು ಕಾರ್ಯಕರ್ತರ ವಿರುದ್ಧ 522 ಪ್ರಕರಣಗಳು ದಾಖಲಾಗಿವೆ. 355 ಪ್ರಕರಣಗಳಲ್ಲಿ ಆರೋಪ ಪಟ್ಟಿ ಸಲ್ಲಿಸಲಾಗಿದೆ. 44 ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆ ಕೂಡ ಪ್ರಕಟವಾಗಿದೆ.

ಪ್ರಮುಖವಾಗಿ 2016ರಿಂದ 2022ರ ವರೆಗೆ ರಾಜ್ಯದಲ್ಲಿ ನಡೆದ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳು ಪ್ರಮುಖ ಕಾರಣವಾಗಿದೆ.

18 ಕೊಲೆ ಪ್ರಕರಣಗಳು, 3 ಕೊಲೆ ಯತ್ನ
2016ರಲ್ಲಿ ಆರೆಸ್ಸೆಸ್‌ ಕಾರ್ಯಕರ್ತ ರುದ್ರೇಶ್‌ ಅವರನ್ನು ಭೀಕರವಾಗಿ ಹತ್ಯೆಗೈದಿದ್ದರಲ್ಲಿ ಬೆಂಗಳೂರಿನ ಪಿಎಫ್ಐ ಸದಸ್ಯರ ಕೈವಾಡ ಪತ್ತೆಯಾಗಿವೆ.

Advertisement

2016ರಲ್ಲಿ ಹಿಂದೂ ಕಾರ್ಯಕರ್ತ ಪ್ರವೀಣ್‌ ಪೂಜಾರಿ ಹತ್ಯೆ, 2017ರಲ್ಲಿ ಮಂಗಳೂರಿನ ಬಿ.ಸಿ. ರೋಡ್‌ನ‌ಲ್ಲಿ ನಡೆದ ಶರತ್‌ ಮಡಿವಾಳ ಹತ್ಯೆ, 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಸಹಿತ ಹಿಂದೂ ಮುಖಂಡರು ಸೇರಿ 18 ಕೊಲೆ ಪ್ರಕರಣದಲ್ಲಿ ಸಂಘಟನೆ ಕೈವಾಡ ಪತ್ತೆಯಾಗಿತ್ತು. ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಪ್ರೇಮ್‌ ಸಿಂಗ್‌ ಎಂಬಾತನ ಕೊಲೆ ಯತ್ನ ಪ್ರಕರಣ ಸೇರಿ ನಾಲ್ಕು ಕೊಲೆ ಯತ್ನ ಪ್ರಕರಣದಲ್ಲಿ ಸಂಘಟನೆ ಕಾರ್ಯಕರ್ತರು ಭಾಗಿಯಾಗಿದ್ದರು.

ಹವಾಲಾ ಸಂಗ್ರಹ
ಇತ್ತೀಚೆಗೆ ಎನ್‌ಐಎ ಅಧಿಕಾರಿಗಳ ದಾಳಿಯಲ್ಲಿ ಬಂಧನಕ್ಕೊಳಗಾದ ಏಳು ಮಂದಿ ವಿದೇಶಗಳಿಂದ ಬರುತ್ತಿದ್ದ ಹಣವನ್ನು ಹವಾಲಾ ಮೂಲಕ ಸಂಗ್ರಹಿಸುತ್ತಿದ್ದರು. ಈ ಮೂಲಕ ಸಂಘಟನೆ ಬಲವರ್ಧನೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು ಎಂಬುದು ಎನ್‌ಐಎ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಸದ್ಯ ಆರೋಪಿಗಳ ವಿಚಾರಣೆ ನಡೆಯುತ್ತಿದೆ.

ತನ್ವೀರ್ ಸೇಠ್ ಮೇಲೆ ಕೊಲೆಯತ್ನ
2019ರಲ್ಲಿ ಮಾಜಿ ಸಚಿವ ತನ್ವೀರ್ ಸೇಠ್ ಮೇಲೆ ಪಿಎಫ್ಐ ಕಾರ್ಯಕರ್ತರು ಕೊಲೆಯತ್ನ ನಡೆಸಿದ್ದರು. ಈ ಸಂಬಂಧ ಫ‌ರ್ಹಾನ್‌ ಪಾಷಾ ಹಾಗೂ ಇತರರನ್ನು ಬಂಧಿಸಲಾಗಿತ್ತು.

ಠಾಣೆಗಳ ಮೇಲೆ ದಾಳಿ
2020ರ ಕೊರೊನಾ ಸಂದರ್ಭದಲ್ಲಿ ಇಡೀ ದೇಶವೇ ಬೆಚ್ಚಿ ಬೀಳಿಸುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ಕಾಡುಗೊಂಡನಹಳ್ಳಿ ಮತ್ತು ದೇವರ ಜೀವನ ಹಳ್ಳಿ ಪೊಲೀಸ್‌ ಠಾಣೆಗಳ ಮೇಲೆ ಪೆಟ್ರೋಲ್‌ ಬಾಂಬ್‌ ಎಸೆದು ಎರಡು ಠಾಣೆಗಳಿಗೆ ಬೆಂಕಿ ಹಚ್ಚಿದ್ದು ಪಿಎಫ್ಐ ಸಂಘಟನೆ ಕಾರ್ಯಕರ್ತರು. ಸಾಮಾಜಿಕ ಜಾಲತಾಣದಲ್ಲಿ ಪೈಗಂಬರ್‌ ಬಗ್ಗೆ ಅವ ಹೇಳನಕಾರಿ ಪೋಸ್ಟ್‌ ಹಾಕಿದ್ದ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ್‌ ಸೋದರ ಅಳಿಯ ನವೀನ್‌ ವಿರುದ್ಧ ದೂರು ನೀಡುವ ನೆಪದಲ್ಲಿ ನೂರಾರು ಕಾರ್ಯಕರ್ತರು ಠಾಣೆಗಳ ದಾಳಿ ನಡೆಸಿದ್ದರು. ಅಲ್ಲದೆ, ಶಾಸಕ ಅಖಂಡ ಶ್ರೀನಿವಾಸ್‌ ಮನೆ, ಕಚೇರಿ, ಅವರ ಅಳಿಯ ನವೀನ್‌ ಮನೆ ಗಳಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕೂ ಮೊದಲು ಪಾದರಾಯನಪುರದಲ್ಲಿ ನಡೆದ ಗಲಾಟೆಯಲ್ಲೂ ಸಂಘಟನೆಯ ಕುಮ್ಮಕ್ಕು ಇತ್ತು ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಯುಎಪಿಎ ಕಾಯ್ದೆ ಅಡಿ ಪ್ರಕರಣ
ರಾಜ್ಯದಲ್ಲಿರುವ ಪಿಎಫ್ಐ ಸಂಘಟನೆಗೆ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಸದಸ್ಯರಿದ್ದಾರೆ. ಈ ಸದಸ್ಯರು ಸಂಘಟನೆ ನಿಷೇಧ ವಿರೋಧಿಸಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ. ಒಂದು ವೇಳೆ ಪ್ರತಿಭಟನೆ ಅಥವಾ ಶಾಂತಿ ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡಿದರೆ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ ಕಾಯ್ದೆ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗುತ್ತದೆ ಎಂದು ಪೊಲೀಸ್‌ ಮೂಲಗಳು ಎಚ್ಚರಿಕೆ ನೀಡಿವೆ.

ಮೂರು ಬಾರಿ ಕೇಂದ್ರಕ್ಕೆ ಮನವಿ
ಪಿಎಫ್ಐ ಸಂಘಟನೆಯ ಅಪರಾಧ ಕೃತ್ಯಗಳಿಗೆ ಬೇಸತ್ತಿದ್ದ ರಾಜ್ಯ ಪೊಲೀಸರು ರಾಜ್ಯ ಸರಕಾರದ ಮೂಲಕ ಮೂರು ಬಾರಿ ಪಿಎಫ್ಐ ಸಂಘಟನೆ ನಿಷೇಧಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದರು. ದಿನೇದಿನೆ ರಾಜ್ಯದಲ್ಲಿ ಸಂಘಟನೆ ಕಾರ್ಯಕರ್ತರು ಭೀಕರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಜತೆಗೆ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡುತ್ತಿದ್ದಾರೆ ಎಂದು ವರದಿ ಕೂಡ ನೀಡಿತ್ತು. ಇದು ಕೂಡ ನಿಷೇಧಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.

ಪಿಎಫ್ಐ ಸಂಘಟನೆ ಪರವಾಗಿ ಯಾರಾದರೂ ಪ್ರತಿಭಟನೆ ನಡೆಸಿದರೆ ಕಠಿನ ಕ್ರಮಕೈಗೊಳ್ಳುತ್ತೇವೆ. ಹೆಚ್ಚಿನ ಬಂದೋಬಸ್ತ್ ಕೈಗೊಳ್ಳುವಂತೆ ಆಯಾ ವಲಯ ಐಜಿಪಿ, ಜಿಲ್ಲಾ ವರಿಷ್ಠಾಧಿಕಾರಿಗಳು ಮತ್ತು ಕಮಿಷನರ್‌ಗಳಿಗೆ ಸೂಚಿಸಲಾಗಿದೆ. ಸ್ಥಳೀಯ ಪೊಲೀಸರು ಎಲ್ಲ ಸಮುದಾಯದ ಮುಖಂಡರ ಜತೆ ನಿರಂತರ ಸಂಪರ್ಕದಲ್ಲಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳುತ್ತಿದ್ದಾರೆ.
-ಪ್ರವೀಣ್‌ ಸೂದ್‌, ರಾಜ್ಯ ಪೊಲೀಸ್‌ ಮಹಾನಿರ್ದೇಶಕ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next