Advertisement

ಕೇರಳದಲ್ಲಿನ ಕಠಿನ ಕ್ರಮ; ಸಮುದಾಯದಿಂದ ಸಿಗದ ಬೆಂಬಲ! ಮೌನಕ್ಕೆ ಶರಣಾದ ಪಿಎಫ್‌ಐ

09:03 AM Oct 02, 2022 | Team Udayavani |

ಮಂಗಳೂರು: ಕೇರಳದಲ್ಲಿ ಪ್ರಬಲ ನೆಲೆ ಹೊಂದಿದ್ದು, ಅಲ್ಲಿಯೇ ಕಠಿನ ಕ್ರಮಗಳಿಂದ ತತ್ತರಿಸಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ತನ್ನ ಸಮುದಾಯದಿಂದಲೂ ನಿರೀಕ್ಷಿತ ಬೆಂಬಲ ವ್ಯಕ್ತವಾಗದ ಕಾರಣ ಸದ್ಯ ಮೌನಕ್ಕೆ ಶರಣಾದಂತಿದೆ.

Advertisement

ಏಕಕಾಲಕ್ಕೆ ಹಲವು ರಾಜ್ಯಗಳಲ್ಲಿ ಪಿಎಫ್‌ಐ ಮೇಲೆ ನಡೆದ ಎನ್‌ಐಎ, ಪೊಲೀಸರ ಸಂಘಟಿತ ಕಾರ್ಯಾಚರಣೆ, ಆ ಬಳಿಕ ಸರಕಾರ ಸದ್ದಿಲ್ಲದೆ ಪಿಎಫ್‌ಐ ಹಾಗೂ ಅದರ ಸಹವರ್ತಿ ಸಂಘಟನೆಗಳ ನಿಷೇಧಕ್ಕೆ ಮುಂದಾಗಿರುವುದು ಹಾಗೂ ಅದರ ಪೂರ್ವಭಾವಿಯಾಗಿ ಗಲಭೆ ಎಬ್ಬಿಸುವಂತಹ ಅದರ ನಾಯಕರನ್ನು ವಶಕ್ಕೆ ಪಡೆದಿರುವುದು ಎಲ್ಲವೂ ವ್ಯವಸ್ಥಿತ ವಾಗಿ ನಡೆದಿವೆ.

5.2 ಕೋ.ರೂ. ನಷ್ಟ ಪಾವತಿಗೆ ಆದೇಶ
ಇದರೊಂದಿಗೆ ಕೇರಳದಲ್ಲಿ ಬಂದ್‌ ಮೂಲಕ ಗಲಭೆಗೆ ಪ್ರೇರಣೆ ನೀಡಿದ್ದ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುಲ್‌ ಸತ್ತಾರ್‌ ಎಂಬಾತನನ್ನು ಬಂಧಿಸಲಾಗಿದೆ. ಬಂದ್‌ ವೇಳೆ ಉಂಟಾದ ಎಲ್ಲ ಗಲಭೆಯ ಪ್ರಕರಣದಲ್ಲೂ ಆತನನ್ನು ಆರೋಪಿ ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ. ಅಲ್ಲದೆ ಬಂಧಿಸಲ್ಪಟ್ಟ ನಾಯಕರನ್ನು ಬಿಡುಗಡೆ ಮಾಡಬೇಕಾದರೆ ಪಿಎಫ್‌ಐ ಹರತಾಳದಿಂದ ಉಂಟಾದ ನಾಶನಷ್ಟಕ್ಕೆ ಪರಿಹಾರವಾಗಿ 5.2 ಕೋಟಿ ರೂ. ಪಾವತಿ ಮಾಡುವಂತೆಯೂ ಆದೇಶಿಸಿರುವುದು ಸಂಘಟನೆಗೆ ಹಿನ್ನಡೆಯುಂಟು ಮಾಡಿದೆ.

ಗುಪ್ತಚರ ಮೂಲಗಳ ಪ್ರಕಾರ ಪಿಎಫ್‌ಐ ನಿರೀಕ್ಷಿಸಿದ್ದ ಮಟ್ಟಿಗೆ ತಮ್ಮದೇ ಸಮುದಾಯದಿಂದಲೂ ಬೆಂಬಲ ಸಿಕ್ಕಿಲ್ಲ. ಹಾಗಾಗಿ ಯಾವುದೇ ರೀತಿಯ ಬಂಡಾಯದ ಕ್ರಮಗಳಿಗೆ ಮುಂದಾಗಿಲ್ಲ.

ನಾಯಕರ ಮೇಲೆ ನಿಗಾ
ಸದ್ಯ ಬ್ಯಾನ್‌ ಆಗಿರುವ ಪಿಎಫ್‌ಐ ಹಾಗೂ ಸಹವರ್ತಿ ಸಂಘಟನೆಗಳ ನಾಯಕರ ಮೇಲೆ ಪೊಲೀಸ್‌ ಹದ್ದಿನಕಣ್ಣು ಇಡಲಿದೆ. ಅವರ ಚಟುವಟಿಕೆಗಳನ್ನು ಗಮನಿಸಲಾಗುತ್ತದೆ. ಒಂದು ವೇಳೆ ದೇಶವಿರೋಧಿ ಕೃತ್ಯಗಳಿಗೆ ಮುಂದಾದಲ್ಲಿ ಅವರನ್ನೂ ಬಂಧಿಸುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

Advertisement

ಎಸ್‌ಡಿಪಿಐ ಮೇಲೂ ಕ್ರಮ?
ದ.ಕ. ಜಿಲ್ಲೆ ಸೇರಿದಂತೆ ದೇಶದ ಹಲವೆಡೆ ಎಸ್‌ಡಿಪಿಐ ಕಚೇರಿಗೂ ಬೀಗಮುದ್ರೆ ಹಾಕಲಾಗಿದೆ. ಸದ್ಯ ಎಸ್‌ಡಿಪಿಐ ರಾಜಕೀಯ ಪಕ್ಷ ಎಂಬ ಕಾರಣಕ್ಕಾಗಿ ಅದನ್ನು ನಿಷೇಧಿಸಿಲ್ಲವಾದರೂ ಮುಂದೆ ಅದರ ಮೇಲೆ ನಿಗಾ ವಹಿಸುವ ಸಾಧ್ಯತೆ ಇದೆ. ಅಲ್ಲದೆ ರಾಜಕೀಯ ಪಕ್ಷದ ಮಾನ್ಯತೆ ರದ್ದುಗೊಳಿಸುವಂತೆ ಕೇಂದ್ರ ಚುನಾವಣ ಆಯೋಗಕ್ಕೆ ಗೃಹ ಇಲಾಖೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎನ್ನುತ್ತವೆ ಮೂಲಗಳು. ಪಕ್ಷದಲ್ಲಿ ದೇಶದ್ರೋಹಿ ಚಟುವಟಿಕೆಗಳು ನಡೆಯುತ್ತಿರುವುದು ಸಾಬೀತಾದರೆ ಅದರ ವಿರುದ್ಧವೂ ಸೂಕ್ತ ನಿರ್ಧಾರಕ್ಕೆ ಕೇಂದ್ರ ಸರಕಾರ ಬರಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾರ್ಕಳದಲ್ಲಿ ಹೇಳಿರುವುದೂ ಉಲ್ಲೇಖನೀಯ.

ಎಸ್‌ಡಿಪಿಐ ಮಾಜಿ ಜಿಲ್ಲಾಧ್ಯಕ್ಷರ ಮನೆ ಪರಿಶೀಲನೆ
ಉಡುಪಿ : ಕಿನ್ನಿಮೂಲ್ಕಿ ಕನ್ನರ್ಪಾಡಿ ದೇವಸ್ಥಾನದ ಬಳಿಯಿರುವ ಎಸ್‌ಡಿಪಿಐ ಮಾಜಿ ಜಿಲ್ಲಾಧ್ಯಕ್ಷ ನಜೀರ್‌ ಅಹಮ್ಮದ್‌ ಅವರ ಮನೆಗೆ ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ನೇತೃತ್ವದ ತಂಡ ದಾಳಿ ನಡೆಸಿ, ಪರಿಶೀಲನೆ ನಡೆಸಿತು.

ಕೆಲವೊಂದು ವಸ್ತುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ನಜೀರ್‌ ಅವರ ಸಹೋದರ ಬಶೀರ್‌ ಅವರ ಅಂಬಾಗಿಲಿನ ಮನೆಗೆ ದಾಳಿ ನಡೆಸಿದ್ದು ಕೆಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ದಾಳಿಯ ವೇಳೆ ಡಿವೈಎಸ್‌ಪಿ ಸುಧಾಕರ್‌ ನಾಯ್ಕ, ನಗರ ಠಾಣಾಧಿಕಾರಿ ಪ್ರಮೋದ್‌ ಕುಮಾರ್‌ ಸೇರಿದಂತೆ ಸಿಬಂದಿ ಉಪಸ್ಥಿತರಿದ್ದರು. ನಜೀರ್‌ ಮತ್ತು ಬಶೀರ್‌ ಅವರ ಮನೆಯನ್ನು ಪರಿಶೀಲನೆ ನಡೆಸುವ ವೇಳೆ ಪೊಲೀಸ್‌ ಸಿಬಂದಿ ಮತ್ತು ಅಧಿಕಾರಿ ಗಳನ್ನು ಮನೆಯವರ ಸಮ್ಮುಖದಲ್ಲಿ ಸಹಾ ಯಕ ಕಮಿಷನರ್‌ ರಾಜು ಅವರು ಪರಿಶೀಲನೆ ನಡೆಸಿ, ಮನೆಯ ಒಳಗೆ ಪರಿಶೀಲನೆಗೆ ಕಳುಹಿಸಿದರು. ಪೊಲೀಸರು ಹೊರಗಿನಿಂದ ತಂದು ಇಟ್ಟಿದ್ದಾರೆ ಎಂಬ ಆರೋಪ ಬರಬಾರದೆಂದು ಈ ನಿಯಮ ಪಾಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next