Advertisement

ಪಿಎಫ್ಐನ ಇನ್ನೊಂದು ಕರಾಳ ಮುಖ ಬಯಲು

12:18 AM Mar 10, 2023 | Team Udayavani |

ನಿಷೇಧಿತ ಸಂಘಟನೆಯಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕೈಗೊಂಡಿರುವ ಸಮಗ್ರ ತನಿಖೆಯು ಸಂಘಟನೆಯ ಒಂದೊಂದೇ ಕರಾಳ ಮುಖಗಳನ್ನು ತೆರೆದಿಡುತ್ತಿದೆ. ದೇಶದ್ರೋಹಿ ಚಟುವಟಿಕೆಗಳು, ಹಿಂಸಾಕೃತ್ಯಗಳು, ಹತ್ಯೆ, ಹತ್ಯಾಯತ್ನ, ಕೋಮು ಸಂಘರ್ಷ ಸೃಷ್ಟಿಸಲೆಂದೇ ಪ್ರಚೋದನಕಾರಿ ಕೃತ್ಯಗಳು, ಲವ್‌ ಜೆಹಾದ್‌… ಹೀಗೆ ಹತ್ತು ಹಲವು ತೆರನಾದ ಅಪರಾಧ ಚಟುವಟಿಕೆಗಳನ್ನು ನಡೆಸುವ ಮೂಲಕ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸಲೆತ್ನಿಸುತ್ತಿದ್ದ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ ಮತ್ತದರ ಅಂಗ ಸಂಘಟನೆಗಳನ್ನು ಕೇಂದ್ರ ಸರಕಾರ ಕಳೆದ ವರ್ಷ ಸೆಪ್ಟಂಬರ್‌ 27ರಂದು ದೇಶಾದ್ಯಂತ ನಿಷೇಧಿಸಿತ್ತು. ಆ ಬಳಿಕ ಸಂಘಟನೆ, ಅದರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರ ಚಟುವಟಿಕೆಗಳ ಮೇಲೆ ಹದ್ದುಗಣ್ಣಿರಿಸಿರುವ ಎನ್‌ಐಎ ಕಳೆದ ಐದು ತಿಂಗಳ ಅವಧಿಯಲ್ಲಿ ಹಲವಾರು ಬಾರಿ ದಾಳಿ, ಶೋಧ ಕಾರ್ಯಾಚರಣೆಗಳನ್ನು ನಡೆಸಿ ಈ ಸಂಘಟನೆ ಮತ್ತದರ ಕಾರ್ಯಕರ್ತರ ದುಷ್ಕೃತ್ಯಗಳು ಮತ್ತು ಷಡ್ಯಂತ್ರಗಳನ್ನು ಒಂದೊಂದಾಗಿ ಬಯಲಿಗೆಳೆಯುತ್ತಲೇ ಬಂದಿದೆ.

Advertisement

ಪಿಎಫ್ಐಯ ಇಂಥ ದೇಶದ್ರೋಹಿ ಮತ್ತು ಭಯೋತ್ಪಾದಕ ಚಟುವಟಿಕೆಗೆ ಇತ್ತೀಚಿನ ಹೊಸ ಸೇರ್ಪಡೆ ಬಹು ರಾಜ್ಯ ಹವಾಲಾ ಜಾಲ. ಸಂಘಟನೆಯ ಮೇಲೆ ಸರಕಾರ ನಿಷೇಧ ಹೇರಿದ ಹೊರತಾಗಿಯೂ ಬಿಹಾರದ ಫ‌ುಲ್ವಾರಿಶರೀಫ್ ಮತ್ತು ಮೋತಿಹಾರಿ ಪ್ರದೇಶದಲ್ಲಿ ಇದರ ಕಾರ್ಯಕರ್ತರು ಸಂಘಟ ನೆಯ ಚಟುವಟಿಕೆಗಳನ್ನು ರಹಸ್ಯವಾಗಿ ಮುಂದುವರಿಸಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ ಎನ್‌ಐಎ ತನಿಖೆ ನಡೆಸಿದಾಗ, ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಪ್ರಚೋದನೆ ನೀಡುವ ಕಾರ್ಯದಲ್ಲಿ ಸಂಘಟನೆಯ ಕಾರ್ಯಕರ್ತರು ನಿರತವಾಗಿರುವುದೇ ಅಲ್ಲದೆ ವಿಭಿನ್ನ ಧರ್ಮ, ಸಮುದಾಯಗಳ ಜನರ ನಡುವೆ ಸಂಘರ್ಷ ಸೃಷ್ಟಿಸಲೆಂದೇ ಶಸ್ತಾಸ್ತ್ರ ಮತ್ತು ಮದ್ದುಗುಂಡುಗಳನ್ನು ಸಂಗ್ರಹಿಸುತ್ತಿ ರುವ ಬಗೆಗೂ ಮಾಹಿತಿ ಲಭಿಸಿತ್ತು. ಈ ಪ್ರಕರಣದ ಜಾಡು ಹಿಡಿದು ಎನ್‌ಐಎ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ ವೇಳೆ ಪಿಎಫ್ಐ ಕಾರ್ಯಕರ್ತರು ಬೃಹತ್‌ ಅಂತಾರಾಜ್ಯ ಹವಾಲಾ ಜಾಲದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದಿದೆ.

ದಕ್ಷಿಣ ಭಾರತ ಅದರಲ್ಲೂ ಕರ್ನಾಟಕ, ಕೇರಳದಲ್ಲಿ ಈ ಜಾಲ ಸಕ್ರಿಯವಾಗಿದ್ದು ದುಬಾೖ, ಅಬುಧಾಬಿಯಿಂದ ಅಕ್ರಮವಾಗಿ ಹಣವನ್ನು ಸಂಗ್ರಹಿಸಿ ಭಾರತದಲ್ಲಿ ದೇಶದ್ರೋಹಿ ಕೃತ್ಯಗಳಲ್ಲಿ ನಿರತರಾಗಿರುವ ಸಂಘಟನೆಯ ಕಾರ್ಯಕರ್ತರ ಬ್ಯಾಂಕ್‌ ಖಾತೆಗಳಿಗೆ ಅಕ್ರಮವಾಗಿ ಹಣ ಜಮಾವಣೆ ಮಾಡಿರುವುದು ಬಯಲಾಗಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಯ ಕಾರ್ಯಕರ್ತರಿಗೆ ಹಣಕಾಸಿನ ನೆರವನ್ನು ಈ ಮೂಲಕ ನೀಡಲಾಗುತ್ತಿದೆ. ಇದೇ ಮಾರ್ಗದಲ್ಲಿ ಕೋಟ್ಯಂತರ ರೂ. ಗಳನ್ನು ಉಗ್ರರಿಗೆ ವರ್ಗಾಯಿಸಲಾಗಿದೆ ಎಂದು ಆರೋಪಿಗಳು ತನಿಖೆಯ ವೇಳೆ ಬಾಯ್ಬಿಟ್ಟಿದ್ದಾರೆ.

ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವ ನಿಟ್ಟಿನಲ್ಲಿ ಸರಕಾರ ಕಠಿನ ಕ್ರಮ ಕೈಗೊಂಡಿರುವ ಹೊರತಾಗಿಯೂ ಉಗ್ರರು ನಾನಾ ರೂಪದಲ್ಲಿ ಹೆಡೆ ಎತ್ತುವ ಜತೆಯಲ್ಲಿ ಹೊಸ ವಿಧಾನ ಅಥವಾ ಮಾದರಿಗಳನ್ನು ಅನುಸರಿಸುತ್ತಿರುವುದು ಭದ್ರತಾ ಸಂಸ್ಥೆಗಳಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಪಿಎಫ್ಐ ಕಾರ್ಯಕರ್ತರ ಮನೆ, ಕಚೇರಿ, ಆಶ್ರಯತಾಣಗಳ ಮೇಲೆ ಎನ್‌ಐಎ ದಾಳಿ ನಡೆಸಿದ ವೇಳೆ ಹಣ ವರ್ಗಾವಣೆಗೆ ಅತ್ಯಾಧುನಿಕ ವಿಧಾನಗಳನ್ನು ಬಳಸಿಕೊಂಡಿರುವ ಬಗೆಗೆ ಸ್ಪಷ್ಟ ಸಾಕ್ಷ್ಯಗಳು ಲಭಿಸಿದ್ದು ಇದು ಕೂಡ ತಂತ್ರಜ್ಞಾನ ಅಥವಾ ಡಿಜಿಟಲ್‌ ಸುರಕ್ಷ ವಿಭಾಗಕ್ಕೆ ಬಲುದೊಡ್ಡ ಸವಾಲಾಗಿದೆ.

ದೇಶದ್ರೋಹಿಗಳ ಈ ಎಲ್ಲ ಅಟಾಟೋಪಗಳಿಗೆ ಕಡಿವಾಣ ಬೀಳುವಂತಾಗಲು ತನಿಖಾ ಸಂಸ್ಥೆಗಳು ಮೊದಲು ಇಂಥ ದೇಶದ್ರೋಹಿ ಮತ್ತು ಹಿಂಸಾತ್ಮಕ ಕೃತ್ಯಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅಷ್ಟು ಮಾತ್ರವಲ್ಲದೆ ಇಂಥ ಗಂಭೀರ ಅಪರಾಧ ಪ್ರಕರಣಗಳಲ್ಲಿ ಬಂಧಿತರಾದ ಆರೋಪಿಗಳ ವಿರುದ್ಧ ಕ್ಲಪ್ತ ಸಮಯದಲ್ಲಿ ಕಠಿನ ಕಾನೂನು ಕ್ರಮ ಜರಗಿಸಬೇಕು. ಹಾಗಾದಲ್ಲಿ ಮಾತ್ರವೇ ದೇಶದ ಶಾಂತಿ ಮತ್ತು ಏಕತೆಗೆ ಭಂಗ ತರುವಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವವರಿಗೆ ಅದರ ಪರಿಣಾಮ ಎಷ್ಟು ಘನಘೋರವಾಗಿರಲಿದೆ ಎಂಬ ಎಚ್ಚರಿಕೆಯ ಸಂದೇಶ ರವಾನೆಯಾಗಲು ಸಾಧ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next