ಕೆ. ನಿಂಗಜ್ಜ
ಗಂಗಾವತಿ: ನಗರಸಭೆ ಪೌರಕಾರ್ಮಿಕರ ಭವಿಷ್ಯನಿಧಿ ಹಣ ಎರಡು ವರ್ಷಗಳಿಂದ ಭವಿಷ್ಯ ನಿಧಿ ಇಲಾಖೆಯ ಬ್ಯಾಂಕ್ ಖಾತೆಯಲ್ಲಿ ಕೊಳೆಯುತ್ತಿದೆ. ನಗರಸಭೆ 162 ಜನ ಪೌರಕಾರ್ಮಿಕರ ಪಟ್ಟಿಯನ್ನು ಭವಿಷ್ಯ ನಿಧಿ ಕಚೇರಿಗೆ ರವಾನೆ ಮಾಡದೇ ಇರುವುದರಿಂದ 76 ಲಕ್ಷ ರೂ. ಭವಿಷ್ಯನಿಧಿ ಕಚೇರಿಯ ಖಾತೆಯಲ್ಲಿದ್ದು, ಭವಿಷ್ಯ ನಿಧಿ ಯ ಲಾಭ ಪೌರಕಾರ್ಮಿಕರಿಗೆ ದೊರಕುತ್ತಿಲ್ಲ.
ನಗರಸಭೆಯ ಪೌರಕಾರ್ಮಿಕರ ಭವಿಷ್ಯ ನಿಧಿ ಕಟಾವು ಮಾಡಿದರೂ ಅದನ್ನು ಭವಿಷ್ಯ ನಿ ಧಿ ಕಚೇರಿಗೆ ಕಳಿಸದೇ ನಗರಸಭೆಯವರು ನಿರ್ಲಕ್ಷ ವಹಿಸಿದ್ದರು. ಇದನ್ನು ಪ್ರಗತಿಪರ ಪೌರಕಾರ್ಮಿಕ ಸಂಘಟನೆ ಕಲಬುರ್ಗಿ ವಲಯದ ಕಾರ್ಮಿಕ ಇಲಾಖೆಗೆ ದೂರು ನೀಡಿದ್ದರ ಪರಿಣಾಮ ನಗರಸಭೆಯ ಎಲ್ಲ ಬ್ಯಾಂಕ್ ಖಾತೆಗಳನ್ನು ಕಾರ್ಮಿಕರ ಇಲಾಖೆ ಮತ್ತು ಭವಿಷ್ಯ ನಿಧಿ ಕಚೇರಿಯ ಅಧಿ ಕಾರಿಗಳು ಸುಮಾರು 8 ತಿಂಗಳು ಸೀಜ್ ಮಾಡಿ ಖಾತೆಯಲ್ಲಿದ್ದ ಸುಮಾರು 76 ಲಕ್ಷ ರೂ. ಪೌರಕಾರ್ಮಿಕರ ಭವಿಷ್ಯ ನಿಧಿಗಾಗಿ ಭವಿಷ್ಯನಿಧಿ ಬ್ಯಾಂಕ್ ಖಾತೆಗೆ ಜಮಾ ಮಾಡಿಕೊಂಡಿತ್ತು. ನಂತರ 162 ಜನ ಪೌರಕಾರ್ಮಿಕರ ಖಾತೆಗೆ ಹಣ ಜಮಾ ಮಾಡಲು ಪಟ್ಟಿ ಕಳಿಸುವಂತೆ ಹಲವು ಸಲ ನಗರಸಭೆಗೆ ಪತ್ರ ವ್ಯವಹಾರ ಮಾಡಿದರೂ ಎರಡು ವರ್ಷಗಳಿಂದ ನಗರಸಭೆಯವರು ಪೌರಕಾರ್ಮಿಕರ ಪಟ್ಟಿ ಕಳಿಸಿಲ್ಲ. ಇದರಿಂದ 76 ಲಕ್ಷ ರೂ. ಭವಿಷ್ಯ ನಿಧಿ ಕಚೇರಿಯ ಬ್ಯಾಂಕ್ ಖಾತೆಯಲ್ಲೇ ಕೊಳೆಯುತ್ತಿದೆ. ಈಗಾಗಲೇ ಪೌರಕಾರ್ಮಿಕರು ಹಲವು ಬಾರಿ ನಗರಕೋಶ ನಿರ್ದೇಶಕರು ಜಿಲ್ಲಾ ಧಿಕಾರಿಗಳು ಮತ್ತು ಪೌರಾಯುಕ್ತರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.
ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ನಿಯಮದಂತೆ ಭವಿಷ್ಯನಿಧಿಗಾಗಿ ಕಾರ್ಮಿಕರು ಮತ್ತು ನಗರಸಭೆಯಿಂದ ಪ್ರತಿ ತಿಂಗಳು ವೇತನದಲ್ಲಿ ವಂತಿಗೆ ಕಟಾವು ಮಾಡಿ ಬಳ್ಳಾರಿಯ ಭವಿಷ್ಯ ನಿ ಧಿ ಕಚೇರಿಗೆ ಕಳಿಸಬೇಕು. ಪ್ರತಿ ಇಲಾಖೆಯಲ್ಲೂ ಮತ್ತು ಖಾಸಗಿ ಕಂಪನಿಗಳಲ್ಲಿ ದುಡಿಯುವ ಕಾರ್ಮಿಕರಿಗೆ ಭವಷ್ಯ ನಿಧಿ ಯನ್ನು ಕಟಾವು ಮಾಡಿ ಭವಿಷ್ಯ ನಿಧಿ ಖಾತೆಗೆ ಜಮಾ ಮಾಡಲಾಗುತ್ತದೆ. ನಗರಸಭೆಯಲ್ಲಿ ಕಾರ್ಮಿಕರ ವೇತನದಲ್ಲಿ ಭವಿಷ್ಯ ನಿ ಧಿಗಾಗಿ ಹಣ ಕಟಾವು ಮಾಡಲಾಗುತ್ತಿದ್ದು, ಭವಿಷ್ಯನಿ ಧಿಯ ಖಾತೆಗೆ ಹಣ ಜಮಾ ಮಾಡುತ್ತಿಲ್ಲ. ಕಾರ್ಮಿಕರು ತಮ್ಮ ಕಷ್ಟ ಕಾಲದಲ್ಲಿ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇತರೆ ಅಗತ್ಯ ಸಂದರ್ಭದಲ್ಲಿ ಭವಿಷ್ಯ ನಿಧಿ ಯಲ್ಲಿರುವ ಹಣವನ್ನು ಬಳಕೆ ಮಾಡಿಕೊಳ್ಳಲು ಅವಕಾಶವಿದ್ದು, ಗಂಗಾವತಿ ನಗರಸಭೆ ಪೌರಕಾರ್ಮಿಕರಿಗೆ 3 ವರ್ಷಗಳಿಂದ ಭವಿಷ್ಯ ನಿಧಿ ಹಣ ಬಳಕೆ ಮಾಡಿಕೊಳ್ಳಲು ಆಗುತ್ತಿಲ್ಲ.