ಮಂಗಳೂರು: ಅಶಕ್ತರಾದ ವಯೋ ವೃದ್ಧರು ಹಾಗೂ ವಿಕಲಚೇತನ ಮಾಸಿಕ ಪಿಂಚಣಿದಾರರ ಮನೆ ಬಾಗಿಲಿಗೇ ತೆರಳಿ ‘ಡಿಜಿಟಲ್ ಜೀವಿತ ಪ್ರಮಾಣ ಪತ್ರ’ ವಿತರಿಸುವ ಕಾರ್ಯವನ್ನು ಮಂಗಳೂರು ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಪ್ರಾರಂಭಿಸಿದೆ. ಭವಿಷ್ಯನಿಧಿ ಇಲಾಖೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಾನವೀಯ ನೆಲೆಯಲ್ಲಿ ಪಿಂಚಣಿ ಫಲಾನುಭವಿಗಳಿಗೆ ನೆರವಾಗುವ ಈ ವಿಭಿನ್ನ ಪ್ರಯತ್ನಕ್ಕೆ ಜಿಲ್ಲೆ ಸಾಕ್ಷಿಯಾಗಿದೆ.
ಭವಿಷ್ಯನಿಧಿ ಪಿಂಚಣಿ ಯೋಜನೆ 1995ರ ಅಡಿಯಲ್ಲಿ ಎಲ್ಲ ಮಾಸಿಕ ಪಿಂಚಣಿ ದಾರರು ಪ್ರತಿವರ್ಷ ನವೆಂಬರ್ ಒಳಗೆ ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು ತಾವು ಪಿಂಚಣಿ ಪಡೆಯುವ ಬ್ಯಾಂಕ್ ಶಾಖೆ ಯಲ್ಲಿ ಖುದ್ದು ಮಾಡಿಸಬೇಕು ಅಥವಾ ಭವಿಷ್ಯನಿಧಿ ಕಚೇರಿಗೆ ಬಂದು ಸಲ್ಲಿಸಬೇಕು. ಈ ಅವಧಿಯೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸದಿದ್ದರೆ ಜನವರಿ ತಿಂಗಳಿನಿಂದ ಪಿಂಚಣಿದಾರರ ಮಾಸಿಕ ಪಿಂಚಣಿ ಪಾವತಿ ಸ್ಥಗಿತಗೊಳ್ಳುತ್ತದೆ. ಯಾರು ವಿಳಂಬವಾಗಿ ಪ್ರಮಾಣ ಪತ್ರ ಸಲ್ಲಿಸುತ್ತಾರೆಯೋ ಅಂಥ ಫಲಾನುಭವಿಗಳಿಗೆ ಆ ಬಳಿಕವಷ್ಟೇ ಮಾಸಿಕ ಪಿಂಚಣಿ ಬ್ಯಾಂಕ್ ಖಾತೆಗೆ ಜಮೆ ಯಾಗುತ್ತದೆ.
ಡಿಜಿಟಲ್ ಮಾದರಿ ಪ್ರಮಾಣಪತ್ರ ಬರು ವುದಕ್ಕೆ ಮೊದಲು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಪ್ರಮಾಣಪತ್ರ ನೀಡಲಾಗು ತ್ತಿತ್ತು. ಆಗ ಅಶಕ್ತರು ಅರ್ಜಿಗೆ ತಮ್ಮ ಸಹಿ ಮಾಡಿ ಬ್ಯಾಂಕ್ ಅಥವಾ ಪಿಂಚಣಿ ಕಚೇರಿಗೆ ಸಲ್ಲಿಸಬಹುದಿತ್ತು. ಈಗ ಪಿಂಚಣಿದಾರರು ಡಿಜಿಟಲ್ ಮಾದರಿಯಲ್ಲೇ ಪ್ರಮಾಣಪತ್ರ ನೀಡುವುದು ಕಡ್ಡಾಯವಾಗಿದ್ದು, ಬಯೋ ಮೆಟ್ರಿಕ್ಸ್ ಮಾಡಿಸುವ ಸಂಬಂಧ ಫಲಾನು ಭವಿಗಳು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಖುದ್ದು ಹಾಜರಾಗಲೇಬೇಕು. ಇದರಿಂದ ನಡೆದಾಡುವುದಕ್ಕೆ ಅಸಾಧ್ಯವಾದವರು, ಅನಾರೋಗ್ಯಕ್ಕೆ ಒಳಗಾದವರು, ವಿಕಲಚೇತನ ಪಿಂಚಣಿದಾರರಿಗೆ ತುಂಬಾ ತೊಂದರೆಯಾಗುತ್ತಿತ್ತು. ವೃದ್ಧಾಪ್ಯ, ತೀವ್ರ ಅನಾರೋಗ್ಯ ಪೀಡಿತರಾಗಿ ಹಾಸಿಗೆ ಹಿಡಿದಿರುವ ಮಾಸಿಕ ಪಿಂಚಣಿದಾರರಿಗೆ ನಿಗದಿತ ಅವಧಿಯೊಳಗೆ ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಅಸಾಧ್ಯವಾಗುತ್ತಿತ್ತು. ಅನೇಕ ಆಶಕ್ತರು ತಮ್ಮ ಜೀವನಕ್ಕೆ ಆಧಾರವಾಗಿದ್ದ ಹಣವನ್ನು ಸಕಾಲದಲ್ಲಿ ಪಡೆಯಲಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು.
ನಾಗರಿಕ ಸ್ನೇಹಿ ಉಪಕ್ರಮ
ಈ ರೀತಿಯ ಸಮಸ್ಯೆ ತಪ್ಪಿಸಲು ಮಂಗಳೂರು ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಈಗ ಹಿರಿಯ ನಾಗರಿಕ ಸ್ನೇಹಿ ಉಪಕ್ರಮ ಕೈಗೊಂಡಿದೆ. ಮಂಗಳೂರು ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಾದ ಮಾರುತಿ ಭೋಯಿ ಮಾನವೀಯ ನೆಲೆಯಲ್ಲಿ ಈ ವಿನೂತನ ಪ್ರಯತ್ನವೊಂದಕ್ಕೆ ಮುಂದಾಗಿರುವುದು ವಿಶೇಷ. ಅದರಂತೆ ಅಶಕ್ತ ಪಿಂಚಣಿದಾರರ ಮನೆಗಳಿಗೆ ತಮ್ಮ ಇಲಾಖೆ ಸಿಬಂದಿಯನ್ನೇ ಕಳುಹಿಸಿ ಕೊಟ್ಟು ಫಲಾನುಭವಿಗಳಿಂದ ಡಿಜಿಟಲ್ ಮಾದರಿ ಜೀವಿತ ಪ್ರಮಾಣ ಪತ್ರ ಅರ್ಜಿಗಳನ್ನು ಭರ್ತಿ ಮಾಡಿಸಿಕೊಳ್ಳುವ ತೀರ್ಮಾನ ಕೈಗೊಂಡಿದ್ದಾರೆ. ಜಿಲ್ಲೆಯಾದ್ಯಂತ ಜ.30ರಿಂದ ಇಲಾಖೆ ಸಿಬಂದಿಯೇ ಡಿಜಿಟಲ್ ಜೀವಿತ ಪ್ರಮಾಣ ಪತ್ರ ಪಡೆಯುವುದಕ್ಕೆ ಅಶಕ್ತ ಪಿಂಚಣಿದಾರರ ಮನೆಗಳಿಗೆ ತೆರಳುವ ಕಾರ್ಯ ಪ್ರಾರಂಭಿಸಿದ್ದಾರೆ.
ಕೇಶವ ಕುಂದರ್